ಚೆಟ್ಟಳ್ಳಿ, ನ. 21: ಗುಡ್ಡೆಹೊಸೂರು ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ಮಾದಾಪಟ್ಟಣ ಗ್ರಾಮದ ಖಾಸಗಿ ಹೊಟೇಲ್ ಹಾಗೂ ಲಾಡ್ಜ್ ಒಂದರಿಂದ ಶೌಚತ್ಯಾಜ್ಯವನ್ನು ಬಿಡುಗಡೆ ಮಾಡುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಖಾಸಗಿ ಹೊಟೇಲ್ ಹಾಗೂ ಲಾಡ್ಜ್‍ನಿಂದ ರಾತೋರಾತ್ರಿ ಪೈಪ್ ಅಳವಡಿಸಿ ಖಾಸಗಿ ಜಾಗಗಳ ಮೂಲಕ ಶೌಚಾಲಯದ ತ್ಯಾಜ್ಯದ ನೀರನ್ನು ಬಿಡುಗಡೆ ಮಾಡುತ್ತಿದ್ದು, ಮಾದಾಪಟ್ಟಣದ ಶಾಂತಿ ಹೊಟೇಲ್, ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಹಾಗೂ ಸ್ಥಳೀಯ ನಿವಾಸಿಯೋರ್ವರ ಜಾಗಕ್ಕೆ ಕೊಳಚೆ ನೀರು ಪ್ರವೇಶಿಸಿದೆ. ಈ ಸ್ಥಳವು ದುರ್ವಾಸನೆಯಿಂದ ಕೂಡಿದ್ದು, ಮೂಗುಮುಚ್ಚಿ ತಿರುಗಾಡು ವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಗ್ರಾ.ಪಂ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರುತ್ತಿದ್ದು, ಆದಷ್ಟು ಬೇಗನೆ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಒದಗಿಸಿಕೊಡ ಬೇಕಾಗಿದೆ ಎಂದು ಸ್ಥಳೀಯರಾದ ಸಂತೋಷ್, ಶಾಫಿ ಆಗ್ರಹಿಸಿದ್ದಾರೆ. ನಿಸರ್ಗಧಾಮ ಟೂರಿಸ್ಟ್ ಸೆಂಟರ್‍ನ ಮಾಲೀಕ ಅಬ್ದುಲ್ ಸಲಾಂ ರಾವತರ್ ಮಾತನಾಡಿ, ಇಲ್ಲಿನ ಹೊಟೇಲ್‍ನಿಂದ ತ್ಯಾಜ್ಯ ನೀರನ್ನು ಖಾಸಗಿ ಜಾಗಗಳಿಗೆ ಬಿಡುಗಡೆ ಮಾಡುತ್ತಿದ್ದು, ಶೌಚತ್ಯಾಜ್ಯ ನೀರು ಪ್ರವೇಶಿಸಿ ದುರ್ವಾಸನೆ ಬೀರುತ್ತಿದೆ. ಕೊಳಚೆ ನೀರಿನ ಸರಬರಾಜಾಗುವ ಪೈಪನ್ನು ಸರ್ಕಾರಿ ರಸ್ತೆಯಡಿ ಅಳವಡಿಸಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪ್ರಶ್ನಿಸದಿರುವದು ವಿಪರ್ಯಾಸ. ಆದಷ್ಟು ಬೇಗನೆ ಈ ಬಗ್ಗೆ ಹೊಟೇಲ್‍ನ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಮಾಲೀಕ ಅಬ್ದುಲ್ ಸಲಾಂ ರಾವತರ್ ಒತ್ತಾಯಿಸಿದ್ದಾರೆ.
ಈ ಸಂದರ್ಭ ಎನ್.ಟಿ.ಸಿ ವರ್ತಕ ಸತೀಶ್ ಹಾಗೂ ಮತ್ತಿತರರು ಇದ್ದರು.