ಸೋಮವಾರಪೇಟೆ, ನ.21: ಇಲ್ಲಿನ ಸರ್ಕಾರಿ ಆಸ್ಪತ್ರೆ ಬಳಿಯಲ್ಲಿ ನಿಲ್ಲಿಸಲಾಗಿದ್ದ ಬೈಕ್‍ನ್ನು ಕಳ್ಳತನ ಮಾಡಿರುವ ಘಟನೆ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವದೇ ದೂರು ದಾಖಲಾಗಿಲ್ಲ.

ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿರುವ ಬೈಕ್ ಕಳ್ಳತನದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕಳ್ಳನ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ ಎಂದು ಮನವಿ ಮಾಡಲಾಗಿದೆ.

ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ್ದ ಪಟ್ಟಣದ ನಿವಾಸಿಯೋರ್ವರ ಬೈಕ್‍ನ್ನು ಕಳೆದ ತಾ. 18ರಂದು ಕಳ್ಳನೋರ್ವ ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡಿದ್ದು, ಈ ದೃಶ್ಯ ಸುತ್ತಮುತ್ತಲಿನ ಸಿ.ಸಿ. ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಕಳೆದ ಅನೇಕ ತಿಂಗಳುಗಳಿಂದ ಪಟ್ಟಣದಲ್ಲಿ ಬೈಕ್ ಮತ್ತು ಮೊಬೈಲ್‍ಗಳನ್ನು ಕಳ್ಳತನ ಮಾಡುತ್ತಿದ್ದ ತಂಡವನ್ನು ಸೋಮವಾರಪೇಟೆ ಪೊಲೀಸರು ಅಕ್ಟೋಬರ್ 29ರಂದು ಸೆರೆ ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಇದರಲ್ಲಿ ಓರ್ವ ಜಾಮೀನಿನ ಮೇರೆ ಬಿಡುಗಡೆಯಾಗಿದ್ದಾನೆ.

ಈ ತಂಡದವರನ್ನು ಬಂಧಿಸಿದ ನಂತರ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಕಳ್ಳತನಗಳಿಗೆ ತಡೆ ಬೀಳಬಹುದು ಎಂದೇ ಭಾವಿಸಲಾಗಿತ್ತು. ಆದರೆ ಕಳೆದ ತಾ. 18ರಂದು ಹಗಲಿನ ವೇಳೆಯಲ್ಲಿಯೇ ಆಸ್ಪತ್ರೆ ಆವರಣದಲ್ಲಿ ನಿಲ್ಲಿಸಲಾಗಿದ್ದ ಸುಜುಕಿ ಕಂಪೆನಿಯ ಬೈಕ್‍ನ್ನು ಅಪರಿಚಿತನೋರ್ವ ಕಳವು ಮಾಡಿದ್ದಾನೆ.

ಬೈಕ್ ಕಳ್ಳತನದ ಬಗ್ಗೆ ಈವರೆಗೆ ಯಾವದೇ ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ ಎಂದು ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ತಿಳಿಸಿದ್ದಾರೆ.