ಮಡಿಕೇರಿ,ನ.21: ಯುವಪೀಳಿಗೆ ಅತ್ಯಧಿಕ ಪ್ರಮಾಣದಲ್ಲಿ ಇಯರ್ ಫೋನ್ ಬಳಕೆ ಮಾಡುತ್ತಿರುವ ದರಿಂದಾಗಿ ಬಹುಬೇಗ ಶ್ರವಣದೋಷ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಡಿಜೆಯಂಥ ಅಬ್ಬರದ ಸಂಗೀತವೂ ಗಂಭೀರವಾದ ಶ್ರವಣ ದೋಷಕ್ಕೆ ಕಾರಣವಾಗಬಲ್ಲದು ಎಂದು ಶ್ರವಣ ತಜ್ಞ ಮುಂಡೋಟಿರ ಅಚ್ಚಯ್ಯ ಎಚ್ಚರಿಸಿದ್ದಾರೆ.

ಮಡಿಕೇರಿ ರೋಟರಿ ಮಿಸ್ಟಿಹಿಲ್ಸ್ ನಲ್ಲಿ ಶ್ರವಣದೋಷದ ಕುರಿತಾಗಿ ಮಾಹಿತಿ ನೀಡಿದ ಎಂ.ಎ. ಅಚ್ಚಯ್ಯ, ಆಧುನಿಕ ದಿನಗಳಲ್ಲಿ ನಗರ ಪ್ರದೇಶ ಮಾತ್ರವಲ್ಲದೇ ಗ್ರಾಮೀಣ ಪ್ರದೇಶದ ಯುವಕ, ಯುವತಿಯರು ಕೂಡ ಕಿವಿಗೆ ಹೆಡ್‍ಫೋನ್, ಇಯರ್ ಫೋನ್ ಹಾಕಿಕೊಳ್ಳುತ್ತಿರುವದು ಈ ಮಂದಿಗೆ ಬಹಳ ಬೇಗ ಶ್ರವಣದೋಷ ಬರಲು ಕಾರಣವಾಗಬಲ್ಲದು. ಕಿವಿಗೆ ವಿಶ್ರಾಂತಿಯೇ ನೀಡದಂತೆ ಸಂಗೀತ ಕೇಳುವದು, ಮೊಬೈಲ್‍ನಲ್ಲಿ ನಿರಂತರವಾಗಿ ಮಾತನಾಡು ವದರಿಂದಾಗಿ ಶ್ರವಣಕ್ಕೆ ಸಮಸ್ಯೆ ತಂದೊಡ್ಡಲಿದೆ ಎಂದು ಹೇಳಿದರು.

ಅತಿಯಾದ ಶಬ್ದವನ್ನು ಕೇಳುವದರಿಂದಾಗಿ ಅದು ಬೇರೆಯ ದೈಹಿಕ ಸಮಸ್ಯೆಗಳಿಗೆ ಕಾರಣವಾಗ ಬಲ್ಲದು ಎಂದು ಎಚ್ಚರಿಸಿದ ಅಚ್ಚಯ್ಯ, ಹಲವರು ತಮಗೆ ಶ್ರವಣದೋಷವಿದೆ ಎಂದು ಒಪ್ಪಿಕೊಳ್ಳಲು ತಯಾರಿಲ್ಲ. ಹೀಗಾಗಿ ಸಮಸ್ಯೆ ಸಾಕಷ್ಟು ಬಿಗಡಾಯಿಸಿದ ಬಳಿಕವೇ ತಜ್ಞರ ಬಳಿ ಚಿಕಿತ್ಸೆಗೆ ಬರುತ್ತಿದ್ದಾರೆ ಎಂದೂ ತಿಳಿಸಿದರು. ತಮಗೆ ಧ್ವನಿ, ಶಬ್ದಗಳು ಸರಿಯಾಗಿ ಕೇಳಿಸದು ಎಂದು ಬೇರೆಯವರಿಗೆ ಗೊತ್ತಾದರೆ ತಾವೆಲ್ಲಿ ಮೂಲೆಗುಂಪಾಗುತ್ತೇವೆಯೋ ಎಂಬ ಕೀಳಿರಿಮೆಯಿಂದಾಗಿ ಹಲವರು ಸಮಸ್ಯೆಯನ್ನು ಹೇಳಿಕೊಳ್ಳುತ್ತಿಲ್ಲ. ಶ್ರವಣಕ್ಕೆ ತಡೆದುಕೊಳ್ಳಲು ಇರುವ ಸಾಮಥ್ರ್ಯಕ್ಕಿಂತ ಹೆಚ್ಚಿಗೆ ಶಬ್ದಗಳನ್ನು ಕೇಳುತ್ತಿರುವದೇ ಶ್ರವಣ ಸಮಸ್ಯೆಯ ಮೂಲವಾಗಿದೆ ಎಂದೂ ಅವರು ಹೇಳಿದರು.

ಕಿವಿಯಲ್ಲಿನ ಕಸ ತೆಗೆಯಲು ಇಯರ್ ಬಡ್ಸ್ ಬಳಕೆ ಸೂಕ್ತವಲ್ಲ ಎಂದೂ ಕಿವಿಮಾತು ಹೇಳಿದ ಅಚ್ಚಯ್ಯ, ಕಿವಿ ತನ್ನೊಳಗಿನ ತ್ಯಾಜ್ಯವನ್ನು ತಾನಾಗಿಯೇ ಹೊರ ಕಳುಹಿಸುತ್ತದೆ. ಬಲವಂತವಾಗಿ ಇಯರ್ ಬಡ್ ಬಳಸಿ ಕಸ ತೆಗೆಯುವ ಕಸರತ್ತಿನಲ್ಲಿ ಕಿವಿಯೊಳಗಿನ ಸೂಕ್ಷ್ಮ ಪದರಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚು ಎಂದೂ ಹೇಳಿದರು.

ಸಂಗೀತ ಮಾಧ್ಯಮ ಸೇರಿದಂತೆ ಸಮಾಜದಲ್ಲಿ ಅತೀಯಾದ ಶಬ್ದಗಳ ಬಳಕೆಯನ್ನು ತಡೆಗಟ್ಟಲು ಸರ್ಕಾರ ರೂಪಿಸಿರುವ ಕಾನೂನುಗಳು ಸೂಕ್ತ ರೀತಿಯಲ್ಲಿ ಪಾಲನೆಯಾದಲ್ಲಿ ಅನೇಕರು ಶ್ರವಣದೋಷದಿಂದ ಪಾರಾಗಬಹುದು ಎಂದೂ ಎಂ.ಎ.ಅಚ್ಚಯ್ಯ ಅಭಿಪ್ರಾಯಪಟ್ಟರು. ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಎಂ.ಆರ್. ಜಗದೀಶ್, ಕಾರ್ಯದರ್ಶಿ ಪ್ರಮೋದ್ ಕುಮಾರ್‍ರೈ ವೇದಿಕೆಯಲ್ಲಿದ್ದರು.