ಮಡಿಕೇರಿ, ನ. 20: ಒಂದೊಮ್ಮೆ ರೈತರ ಬದುಕಿನೊಂದಿಗೆ ಗ್ರಾಮೀಣ ಜನತೆಯಲ್ಲಿ ಆರ್ಥಿಕ ಭದ್ರತೆ ಕಲ್ಪಿಸಿಕೊಟ್ಟಿದ್ದ ಸಹಕಾರ ಕ್ಷೇತ್ರದಲ್ಲಿ ಇಂದು ರಾಜಕೀಯ ನುಸುಳುವದ ರೊಂದಿಗೆ ಆ ಮುಖಾಂತರ ರಾಜ ಕಾರಣಿಗಳು ಮೇಲ್ಮೈ ಕಂಡುಕೊಳ್ಳಲು ಹಾತೊರೆಯು ತ್ತಿರುವದು ಅಪಾಯಕಾರಿ ಬೆಳವಣಿಗೆ ಎಂದು ಶಾಸಕ ಕೆ.ಜಿ. ಬೋಪಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.ಇಂದು ನಗರದ ಬಾಲಭವನದಲ್ಲಿ ಆಯೋಜಿಸಿದ್ದ 66ನೇ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ, ಸಹಕಾರ ಸಂಸ್ಥೆಗಳ ಮೂಲಕ ಆರ್ಥಿಕ ಸೇರ್ಪಡೆ ಹಾಗೂ ತಂತ್ರಜ್ಞಾನ-ಗಣಕೀಕರಣ ದಿನಾಚರಣೆಯೊಂದಿಗೆ ಹಿರಿಯ ಸಹಕಾರಿಗಳಿಗೆ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಇತರೆಡೆಗಳಲ್ಲಿ ರಾಜಕೀಯ ಮೇಲಾಟದ ನಡುವೆಯೂ, ಕೊಡಗು ಇಡೀ ರಾಜ್ಯ ಹಾಗೂ ರಾಷ್ಟ್ರಕ್ಕೆ ಮಾದರಿಯಾಗಿ ಹಿರಿಯರ ಆಶಯದಂತೆ ಸಹಕಾರ ರಂಗದಲ್ಲಿ ಸಾಗುತ್ತಿರುವದು ಶ್ಲಾಘನೀಯವೆಂದು ಅವರು ಬಣ್ಣಿಸಿದರು.ಸ್ವಾಯತ್ತತೆ ಅಗತ್ಯ: ಸಹಕಾರ ಸಂಘಗಳು ರೈತರ ಬೆನ್ನೆಲುಬಾಗಿದ್ದು, ಸಹಕಾರ ಸಂಘಗಳಿಗೆ ಇನ್ನೂ ಹೆಚ್ಚಿನ ಸ್ವಾಯತ್ತತೆ ನೀಡಬೇಕಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ, ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ (ಮೊದಲ ಪುಟದಿಂದ) ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ಹಾಗೂ ಸ್ಥಳೀಯ ಎಲ್ಲಾ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಕಾರದ ಸೌಲಭ್ಯಗಳು ಜನರಿಗೆ ನೇರವಾಗಿ ತಲಪಿಸುವಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ವದ್ದಾಗಿದೆ. ಸಹಕಾರ ಚಳುವಳಿಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಸಹಕಾರಿ ಕ್ಷೇತ್ರದಲ್ಲಿ ಕೊಡಗು ಜಿಲ್ಲೆಯ ಅನೇಕ ಹಿರಿಯರು ಸೇವೆ ಸಲ್ಲಿಸಿಕೊಂಡು ಬಂದಿದ್ದಾರೆ ಎಂದರು.
ಶೇ. 85 ಕೃಷಿ: ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಶೇ,85 ಕ್ಕಿಂತ ಹೆಚ್ಚು ಜನರು ಕೃಷಿಯನ್ನು ಅವಲಂಭಿಸಿದ್ದಾರೆ. ಆದ್ದರಿಂದ ಕೃಷಿ ಮತ್ತು ಸಹಕಾರಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರಲ್ಲದೆ, ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಡಿ ನಿರುದ್ಯೋಗಿಗಳಿಗೆ ಸ್ವ ಉದ್ಯೋಗ ಕೈಗೊಳ್ಳಲು ಸಾಲ ನೀಡಲಾಗುತ್ತದೆ. ಇದನ್ನು ಬಳಸಿಕೊಳ್ಳುವಂತಾಗಬೇಕು ಎಂದರು.
ಸ್ತ್ರೀಶಕ್ತಿ ಗುಂಪುಗಳು ಸಹ ಸಹಕಾರ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಸಹಕಾರ ಸಂಘಗಳು ಅಖಿಲ ಭಾರತ ಮಟ್ಟದಲ್ಲಿ ಪ್ರಗತಿ ಸಾಧಿಸಬೇಕು. ಇಂದಿನ ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಖಾಸಗಿ ಕ್ಷೇತ್ರವನ್ನು ಎದುರಿಸಬೇಕು. ಸಹಕಾರ ಕ್ಷೇತ್ರ ಬೆಳೆದಷ್ಟು ರೈತರ ಶ್ರೇಯೋಭಿವೃದ್ಧಿ ಹೆಚ್ಚಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಉನ್ನತ ಸ್ಥಾನದಲ್ಲಿ ಕೊಡಗು: ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಯೂನಿಯನ್ನ ಅಧ್ಯಕ್ಷ ಎ.ಕೆ. ಮನುಮುತ್ತಪ್ಪ ಮಾತನಾಡಿ, ಜಿಲ್ಲಾ ಸಹಕಾರ ಯೂನಿಯನ್ ಮೂಲಕ ಶಿಕ್ಷಣ, ತರಬೇತಿ, ಮಾಹಿತಿಯನ್ನು ಸರ್ವರಿಗೆ ನೀಡಲಾಗುತ್ತಿದೆ ಎಂದರಲ್ಲದೆ, ಸಹಕಾರ ಸಂಘಗಳ ಬೆಳವಣಿಗೆಗೆ ಸಹಕಾರಿಗಳು ಶ್ರಮಿಸುತ್ತಿ ದ್ದಾರೆ. ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕೊಡಗು ಸಹಕಾರ ಕ್ಷೇತ್ರದಲ್ಲಿ ಉನ್ನತ ಸ್ಥಾನ ಪಡೆದಿದ್ದು, ಸುಧೀರ್ಘವಾಗಿ ಸೇವೆ ಸಲ್ಲಿಸಿದ ಹಿರಿಯರನ್ನು ಗೌರವಿಸಲಾ ಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಬ್ಯಾಂಕ್ ಮುಂಚೂಣಿ
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಬಾಂಡ್ ಗಣಪತಿ ಮಾತನಾಡಿ, ಸಹಕಾರ ಸಂಘ ಮತ್ತು ಸಹಕಾರ ಬ್ಯಾಂಕ್ಗಳು ಹತ್ತು ಸಾವಿರ ಕೋಟಿ ವಾರ್ಷಿಕ ವಹಿವಾಟು ನಡೆಸಿ ಬೃಹತ್ತಾಗಿ ಬೆಳೆದಿದೆ, ಕೊಡಗು ಸಹಕಾರಿ ಬ್ಯಾಂಕ್ ವಾಣಿಜ್ಯ ಹಾಗೂ ಖಾಸಗಿ ಬ್ಯಾಂಕ್ಗಳಿಗೆ ಹೋಲಿಸಿದರೆ ಮುಂಚೂಣಿಯಲ್ಲಿದೆ ಎಂದರು.
ಮಾರ್ಚ್ 31 ರೊಳಗೆ ಎಲ್ಲ ಸಹಕಾರ ಬ್ಯಾಂಕ್ ಗಣಕೀಕರಣ ವಾಗುತ್ತದೆ, ಸಹಕಾರಿ ಬ್ಯಾಂಕ್ ಹಾಗೂ ಡಿಸಿಸಿ ಬ್ಯಾಂಕ್ಗಳು ಪ್ರವಾಹದ ಸಂದರ್ಭದಲ್ಲಿ ಪರಿಹಾರ ನಿಧಿ ನೀಡಿದೆ, ಸಾಲವನ್ನು ಪಡೆಯುವ ಮೂಲಕ ಸಹಕಾರಿ ಬ್ಯಾಂಕಿನ ಸೌಲಭ್ಯ ಪಡೆಯಬಹುದು. ರೈತರ ಬೆಳೆಗೆ ಒಳ್ಳೆಯ ನಿರ್ದಿಷ್ಟ ಬೆಲೆ ಒದಗಿಸುವದು. ಕ್ರಿಮಿನಾಶಕ ಮತ್ತು ಗೊಬ್ಬರದ ದರದಲ್ಲಿ ರಿಯಾಯಿತಿ, ಮಧ್ಯವರ್ತಿಗಳಿಲ್ಲದೆ ಕೃಷಿಯ ಮಾರಾಟ ಮತ್ತು ರೈತರೆ ಬೆಳೆಯ ಬೆಲೆ ನಿರ್ಧಾರ ಮಾಡುವಂತಾದರೆ ಮಾತ್ರ ರೈತರ ಬೆಳವಣಿಗೆ ಸಾಧ್ಯ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ನುಡಿದರು.
ಸನ್ಮಾನ: ಹಿರಿಯರ ಸಹಕಾರಿ ಗಳಾದ ಎಂ.ಪಿ. ಮುತ್ತಪ್ಪ, ಬಿ.ಎ. ಗಣಪತಿ, ಬಿ.ಕೆ. ಚಿಣ್ಣಪ್ಪ, ಕೆ.ಪಿ. ನಾಗರಾಜು, ಲೀಲಾ ಮೇದಪ್ಪ ಅವರುಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಹಕಾರ ರತ್ನ ಪ್ರಶಸ್ತಿ: ಕೊಡಗು ಸಹಕಾರ ರತ್ನ ಪ್ರಶಸ್ತಿ ಪಡೆದ ಹಿರಿಯ ಸಹಕಾರಿ ಮಂಡುವಂಡ ಪಿ. ಮುತ್ತಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ದುಡಿದವರು ವಿವಿಧ ಕ್ಷೇತ್ರದಲ್ಲಿ ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಸೇವಾ ಮನೋಭಾವ ವಿರುವ ಯುವಜನತೆ ಸಹಕಾರ ಕ್ಷೇತ್ರವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎಂದು ಹೇಳಿದರು.
ಶ್ರೇಷ್ಟ ಸಹಕಾರಿ ಪ್ರಶಸ್ತಿ ಪಡೆದ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ಕೆ. ಚಿಣ್ಣಪ್ಪ ಮಾತನಾಡಿ, ಸಾಲ ಸೌಲಭ್ಯದಲ್ಲಿ ಹೆಚ್ಚಳ ಮತ್ತು ಕಡಿಮೆ ಬಡ್ಡಿ ದರದಲ್ಲಿ ಜನರಿಗೆ ಅನುಕೂಲ ವಾಗುವಂತೆ ಸಹಕಾರಿ ಬ್ಯಾಂಕುಗಳು ಸಹಕರಿಸಬೇಕು, ವೈದ್ಯನಾಥನ್ ವರದಿ ಜಾರಿಯಾದರೆ ಗ್ರಾಮೀಣ ಪ್ರದೇಶದ ಜನರಿಗೆ ಸೌಲಭ್ಯವಾಗುತ್ತದೆ ಎಂದು ಹೇಳಿದರು.
ಇನ್ನೋರ್ವ ಹಿರಿಯ ಸಹಕಾರಿ ಬಲ್ಯಮನೆ ಗಣಪತಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಹಕಾರ ಬ್ಯಾಂಕ್ಗಳು ಬೆಳೆ ನಾಶ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಾಲ ಮನ್ನಾ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುತ್ತಿ ರುವದರಿಂದ ರೈತರಿಗೆ ಸಹಕಾರಿ ಯಾಗುತ್ತದೆ ಎಂದು ಹೇಳಿದರು.
ಅಲ್ಲದೆ ಮತ್ತೋರ್ವ ಸಹಕಾರಿ ಕೆ.ಪಿ. ನಾಗರಾಜು ಸನ್ಮಾನ ಸ್ವೀಕರಿಸಿ ಮಾತನಾಡಿ, ಸಹಕಾರಿ ಬ್ಯಾಂಕ್ಗಳಿಗೆ ಸ್ಥಳೀಯ ಸಹಕಾರಿಗಳಿಂದ ಭದ್ರ ಬುನಾದಿಯನ್ನಿಡಲಾಯಿತು. ಹಿರಿಯರು ಕಟ್ಟಿದ ಸಂಸ್ಥೆಗೆ ಧಕ್ಕೆ ಬಾರದಂತೆ ಸಹಕಾರ ಸಂಘ ನಡೆಸಬೇಕು. ಫಲ ಅಪೇಕ್ಷಿಸದೆ ಜನರಿಗೆ ಸಹಾಯ ಮಾಡುವದೆ ಗುರಿ. ಮುಂದಿನ ಪೀಳಿಗೆಯವರಿಗೆ ಫಲ ಅಪೇಕ್ಷಿಸದೆ ಶುದ್ಧತೆಯಿಂದ ಸಂಘವನ್ನು ಕಾಪಾಡಬೇಕು ಎಂದು ಹೇಳಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಉಪಾಧ್ಯಕ್ಷ ಕೆ.ಎಸ್. ಹರೀಶ್ ಪೂವಯ್ಯ, ಜಿಲ್ಲಾ ಸಹಕಾರ ಯೂನಿಯನ್ನ ಉಪಾಧ್ಯಕ್ಷ ಪಿ.ಸಿ. ಅಚ್ಚಯ್ಯ, ಬ್ಯಾಂಕ್ನ ನಿರ್ದೇಶಕ ಎಚ್.ಎಂ. ರಮೇಶ್, ರಘು ನಾಣಯ್ಯ, ಕನ್ನಂಡ ಸಂಪತ್, ಕೆ.ಎ. ಜಗದೀಶ್, ಉಷಾ ತೇಜಸ್ವಿ, ಕೆ. ಅರುಣ್ ಭೀಮಯ್ಯ, ಯೂನಿಯನ್ನ ನಿರ್ದೇಶಕರಾದ ಎಂ.ಪ್ರೇಮ ಸೋಮಯ್ಯ, ಎಸ್.ಪಿ. ನಿಂಗಪ್ಪ, ಬಿ.ಎ. ರಮೇಶ್ ಚಂಗಪ್ಪ, ಪಿ.ಜಿ. ನಂಜುಂಡ, ಕೆ.ಎಂ. ತಮ್ಮಯ್ಯ, ಪಿ.ಸಿ. ರಾಮಚಂದ್ರ, ರವಿಕುಮಾರ್ ಎಚ್.ಡಿ. ಇತರರು ಇದ್ದರು. ಸಹಕಾರ ತರಬೇತಿ ಕೇಂದ್ರದ ನಿವೃತ್ತ ಪ್ರಾಂಶುಪಾಲ ಗುರುಮಲ್ಲಪ್ಪ ಅವರು ಮಾತನಾಡಿದರು.
ಜಿಲ್ಲಾ ಸಹಕಾರ ಯೂನಿಯನ್ನ ಅಧಿಕಾರಿ ಯೋಗೇಂದ್ರ ನಾಯಕ್ ನಿರೂಪಿಸಿ, ನಿರ್ದೇಶಕ ಕೊಡಪಾಲು ಗಣಪತಿ ಸ್ವಾಗತಿಸಿ, ಮಂಜುಳಾ ಪ್ರಾರ್ಥಿಸಿದರು. ರವಿ ಬಸಪ್ಪ ವಂದಿಸಿದರು.