ಪೆರಾಜೆ, ನ. 20: ಮನೆಯಲ್ಲೇ ತಯಾರಿಸಿದ ಚಹಾ ಕುಡಿದು ಮನೆಯೊಡತಿ ಸೇರಿದಂತೆ ಮೂವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸಂಭವಿಸಿದೆ.
ಇಲ್ಲಿನ ನಿವಾಸಿ ಪೀಚೆಮನೆ ತಾರಿಣಿ ಎಂಬವರ ಮನೆಗೆ ವಸಂತ ಎಂಬವರು ಕೆಲಸಕ್ಕೆ ಬಂದಿದ್ದರು. ಈ ಸಂದರ್ಭ ತಾರಿಣಿ ಅವರು ವಸಂತ ಅವರಿಗೆ ಚಹಾ ಮಾಡಿಕೊಟ್ಟಿದ್ದಾರೆ. ವಸಂತ ಅವರು ಚಹಾ ಕುಡಿದ ನಂತರ ವಾಂತಿ ಮಾಡಿಕೊಂಡರು. ಈ ವಿಷಯವನ್ನು ತಾರಿಣಿಯವರು ವಸಂತ ಅವರ ಮಗಳಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ವಸಂತರ ಮಗಳು ಅಶ್ವಿನಿ ಬಂದಿದ್ದು, ಅವರಿಗೂ ತಾರಿಣಿ ಅವರು ಚಹಾ ನೀಡಿದ್ದಾರೆ. ಜೊತೆಗೆ ತಾರಿಣಿ ಅವರೂ ಕುಡಿದಿದ್ದಾರೆ. ಇದಾದ ನಂತರ ತಾರಿಣಿ ಮತ್ತು ಅಶ್ವಿನಿ ಕೂಡ ವಾಂತಿ ಮಾಡಲು ಪ್ರಾರಂಭಿಸಿದರು. ಈ ವಿಷಯ ತಿಳಿದ ಸ್ಥಳೀಯರು ಅಶ್ವಿನಿ ಅವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿದರು.
ವಸಂತ ಮತ್ತು ತಾರಿಣಿಯವರನ್ನು ಮಂಗಳೂರು ಆಸ್ಪತ್ರೆಗೆ ಸೇರಿಸಲಾಯಿತು. ಈ ಮೂವರು ಕುಡಿದ ಚಹಾದಲ್ಲಿ ವಿಷಪೂರಿತ ವಸ್ತು ಬೆರಕೆಯಾಗಿರುವ ಬಗ್ಗೆ ವೈದ್ಯರು ಖಾತರಿಪಡಿಸಿದ್ದಾರೆ. ಚಿಕಿತ್ಸೆಯ ಬಳಿಕ ಮೂವರು ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಮಡಿಕೇರಿ ಗ್ರಾಮಾಂತರ ಪೋಲಿಸ್ ಸಿಬ್ಬಂದಿ ಬಂದು ವಿಚಾರಣೆ ನಡೆಸಿದರು. ಚಹಾದಲ್ಲಿ ವಿಷ ಪದಾರ್ಥ ಹೇಗೆ ಬೆರೆಯಿತು ಎಂಬದು ತನಿಖೆಯಿಂದಷ್ಟೇ ಹೊರ ಬರಬೇಕಾಗಿದೆ.
-ಕಿರಣ್