ಮಡಿಕೇರಿ, ನ. 20: ಕ್ಯೂರೇಟರ್ ಅವರ ಕಚೇರಿ, ಸರ್ಕಾರಿ ವಸ್ತು ಸಂಗ್ರಹಾಲಯ, ಕೋಟೆ ಆವರಣ ಕಚೇರಿಯಲ್ಲಿ ವಿಶ್ವ ಪರಂಪರಾ ಸಪ್ತಾಹ-2019ರ ಅಂಗವಾಗಿ ಪ್ರಾಚೀನ ನಾಣ್ಯ, ನೋಟುಗಳ ಪ್ರದರ್ಶನ ಹಾಗೂ ಕೊಡಗಿನ ಐತಿಹಾಸಿಕ ಪಾರಂಪರಿಕ ಕಟ್ಟಡಗಳ ಛಾಯಾಚಿತ್ರ ಪ್ರದರ್ಶನವು ತಾ. 22 ರಿಂದ 24 ರವರೆಗೆ ನಡೆಯಲಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹುಣಸೂರು ನಾಣ್ಯ ಶಾಸ್ತ್ರಜ್ಞರು ಮತ್ತು ಸಂಗ್ರಹಕಾರ ಪಿ.ಕೆ. ಕೇಶವಮೂರ್ತಿ ಅವರ 147 ನೇ ಪ್ರಾಚೀನ ನಾಣ್ಯ ಮತ್ತು ನೋಟುಗಳ ಪ್ರದರ್ಶನವಾಗಿದೆ. ಕ್ರಿಸ್ತಪೂರ್ವ 5ನೇ ಶತಮಾನದಲ್ಲಿ ಬಳಕೆಗೆ ಬಂದ ಭಾರತದ ಮೊಟ್ಟ ಮೊದಲ ಪಂಚ್ ಮಾರ್ಕ್ ನಾಣ್ಯಗಳು, ಗ್ರೀಕ್, ರೋಮನ್, ಕುಷಾನರು, ಗುಪ್ತ, ಶಾತವಾಹನರು, ಕದಂಬ, ಚೋಳ, ಪಾಂಡ್ಯ, ಮೊಘಲರು, ಬ್ರಿಟೀಷರು, ಪೋರ್ಚುಗೀಸರು, ಮೈಸೂರು, ಬಿಜಾಪುರ, ತಿರುವಾಂಕೂರು, ಮೊದಲಾದ ಭಾರತೀಯ ಸಂಸ್ಥಾನಗಳ ತಾಮ್ರ, ಚಿನ್ನ, ಬೆಳ್ಳಿ, ಸೀಸ ಹಾಗೂ ಹಿತ್ತಾಳೆ ನಾಣ್ಯಗಳು ಭಾರತ ಹಾಗೂ ವಿದೇಶಗಳ ನೋಟುಗಳನ್ನು ಪ್ರದರ್ಶಿಸಲಾಗುತ್ತದೆ.
ಕ್ರಿ.ಶ.1730 ರಿಂದ ಕ್ರಿ.ಶ.1907 ಕಾಲಕ್ಕೆ ಸೇರಿದ ಕೊಡಗು ಜಿಲ್ಲೆಯ ವಿವಿಧ ಐತಿಹಾಸಿಕ ಹಾಗೂ ಪಾರಂಪರಿಕ ಸ್ಥಳಗಳು ಮತ್ತು ಕಟ್ಟಡಗಳ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಸರ್ಕಾರಿ ವಸ್ತ್ತುಸಂಗ್ರಹಾಲಯದ ಕ್ಯೂರೇಟರ್ ರೇಖಾ ತಿಳಿಸಿದ್ದಾರೆ.