ಸಿದ್ದಾಪುರ, ನ. 20: ಗುಹ್ಯ ಗ್ರಾಮದ ಸಂತ್ರಸ್ತರು ಹಾಗೂ ಗ್ರಾಮಸ್ಥರಿಗಾಗಿ ಕಕ್ಕಟ್ಟುಕಾಡು ಗ್ರಾಮದಲ್ಲಿ ಮಹಾತ್ಮ ಗಾಂಧಿ ವಿವಿದ್ದೋದ್ದೇಶ ಸ್ವ-ಸಹಾಯ ಸಂಘದ ವತಿಯಿಂದ ಭಾನುವಾರ ಗ್ರಾಮೀಣ ಕ್ರೀಡಾ ಕೂಟ ಆಯೋಜನೆ ಮಾಡಲಾಯಿತು. ಗುಹ್ಯ ಗ್ರಾಮ ವ್ಯಾಪ್ತಿಗೆ ಒಳಪಡುವ ಕೂಡುಗದ್ದೆ, ಗುಹ್ಯ, ಕಕ್ಕಟ್ಟುಕಾಡು, ಹೈಸ್ಕೂಲ್ ಪೈಸಾರಿ, ಪಿಲಾ ತೋಟ ಭಾಗದ 200ಕ್ಕೂ ಅಧಿಕ ಕ್ರೀಡಾ ಪಟುಗಳು ಭಾಗವಹಿಸಿದ್ದರು. ಮಹಿಳೆಯರ ಮತ್ತು ಪುರುಷರ ಹಗ್ಗಜಗ್ಗಾಟ, ಕಣ್ಣು ಕಟ್ಟಿ ಮಡಿಕೆ ಒಡೆಯುವದು, ಗೋಣಿಚೀಲ ಓಟ, ಮ್ಯೂಸಿಕಲ್ ಚೇರ್, ಬಲೂನ್ ಒಡೆಯುವದು, ಮಕ್ಕಳಿಗಾಗಿ ಓಟದ ಸ್ಪರ್ಧೆ ಹಾಗೂ ಕಬಡ್ಡಿ ಪಂದ್ಯಾಟ ಏರ್ಪಡಿಸಲಾಗಿತ್ತು.

ಗಂಡು ಮಕ್ಕಳ ಓಟದ ಸ್ಪರ್ಧೆಯಲ್ಲಿ ಪ್ರವೀಣ್, ಹೆಣ್ಣು ಮಕ್ಕಳ ಓಟದ ಸ್ಪರ್ಧೆಯಲ್ಲಿ ಸ್ನೇಹಾ ಹಾಗೂ ಪುಟಾಣಿಗಳ ಓಟದ ಸ್ಪರ್ಧೆಯಲ್ಲಿ ದೃಷಿಕಾ ಬಹುಮಾನ ಪಡೆದು ಕೊಂಡರು. ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಪುಷ್ಪ ಫ್ರೆಂಡ್ಸ್ ಪ್ರಥಮ, ಮೀನಾ ಫ್ರೆಂಡ್ಸ್ ದ್ವಿತೀಯ, ಪುರುಷರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಕಾರ್ಗಿಲ್ ಫ್ರೆಂಡ್ಸ್ ಪ್ರಥಮ, ಕಕ್ಕಟ್ಟುಕಾಡು ಫ್ರೆಂಡ್ಸ್ ದ್ವಿತೀಯ, ಬಲೂನ್ ಒಡೆಯುವ ಸ್ಪರ್ಧೆಯಲ್ಲಿ ಹೆಣ್ಣು ಮಕ್ಕಳ ವಿಭಾಗದಲ್ಲಿ ಪ್ರಾರ್ಥನಾ, ಗಂಡು ಮಕ್ಕಳ ವಿಭಾಗದಲ್ಲಿ ಪ್ರವೀಣ್ ಹಾಗೂ ಪುಟಾಣಿ ವಿಭಾಗದಲ್ಲಿ ದರ್ಶಿತ್ ಬಹುಮಾನ ಪಡೆದು ಕೊಂಡರು.

19 ವರ್ಷ ವಯೋಮಿತಿ ಒಳಗಿನ ಕಬಡ್ಡಿ ಪಂದ್ಯಾಟದಲ್ಲಿ ಅಲ್ ಅಮೀನ್ ‘ಎ’ ಪ್ರಥಮ ಹಾಗೂ ಅಲ್ ಅಮೀನ್ ‘ಬಿ’ ದ್ವಿತೀಯ ಬಹುಮಾನ ಪಡೆದು ಕೊಂಡಿತು. ಪುರುಷರ ವಿಭಾಗದ ಕಬಡ್ಡಿ ಪಂದ್ಯದಲ್ಲಿ ಕಾರ್ಗಿಲ್ ಫ್ರೆಂಡ್ಸ್ ಪ್ರಥಮ ಹಾಗೂ ಅಲ್ ಅಮೀನ್ ದ್ವಿತೀಯ ಬಹುಮಾನ ಪಡೆದು ಕೊಂಡಿತು. ಮಡಿಕೆ ಒಡೆಯುವ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಅನುಶ್ರೀ ಹಾಗೂ ಪುರುಷರ ವಿಭಾಗದಲ್ಲಿ ಹಬೀಬ್ ಮತ್ತು ದೇವರಾಜ್ ಬಹುಮಾನ ಪಡೆದು ಕೊಂಡರು. ಮ್ಯೂಸಿಕಲ್ ಚೇರ್‍ನ ಮಹಿಳಾ ವಿಭಾಗದಲ್ಲಿ ಧನ್ಯ, ಮಕ್ಕಳ ವಿಭಾಗದಲ್ಲಿ ಪ್ರವೀಣ್ ಬಹುಮಾನ ಪಡೆದು ಕೊಂಡರು.

ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಗ್ರಾಮೀಣ ಮಟ್ಟದಲ್ಲಿ ಕ್ರೀಡಾಕೂಟ ಆಯೋಜಿಸುವ ಮೂಲಕ ಗ್ರಾಮಸ್ಥರಲ್ಲಿ ಬಾಂಧವ್ಯ ಮೂಡಿಸುವ ಕೆಲಸ ಆಗಿದೆ. ಸಂತ್ರಸ್ತರು ಕೂಡಾ ಕ್ರೀಡಾ ಕೂಟದಲ್ಲಿ ಭಾಗವಹಿಸಿರುವದು ತಮ್ಮ ನೋವನ್ನು ಮರೆಯಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಿಸಿದರು. ಕಕ್ಕಟ್ಟುಕಾಡು ಗ್ರಾಮಕ್ಕೆ ಸಂಪರ್ಕ ರಸ್ತೆಯ ಸಮಸ್ಯೆ ಇದ್ದು, ಎಲ್ಲರೂ ಒಟ್ಟಾಗಿ ತಮ್ಮ ಹಕ್ಕನ್ನು ಪಡೆದು ಕೊಳ್ಳುವಲ್ಲಿ ಶ್ರಮ ವಹಿಸಬೇಕೆಂದರು. ಟಾಮಿ ಥಾಮಸ್ ಕ್ರೀಡಾ ಕೂಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗ್ರಾಮದ ಹಿರಿಯರಾದ ಪಿ.ಕೆ ಚಂದ್ರನ್ ಮತ್ತು ಕೆ.ಜಿ ಚಂದ್ರನ್, ಕ್ರೀಡೆಯಲ್ಲಿ ಸಾಧನೆ ಮಾಡಿರುವ ಗ್ರಾಮದ ವಿದ್ಯಾರ್ಥಿನಿಯರಾದ ಐಶ್ವರ್ಯ ಹಾಗೂ ರಕ್ಷಿತಾ ಅವರುಗಳನ್ನು ಸನ್ಮಾನಿಸಲಾಯಿತು.