ಸಿದ್ದಾಪುರ, ನ.18 : ಗೊಂದಲ, ಕೋಲಾಹಲ, ಕಿರುಚಾಟ, ಆರೋಪ, ಪ್ರತ್ಯಾರೋಪಗಳ ನಡುವೆ ನೆಲ್ಯಹುದಿಕೇರಿ ಗ್ರಾಮದ ಗ್ರಾಮ ಸಭೆಯು ಮುಕ್ತಾಯಗೊಂಡಿತು. ಗ್ರಾ.ಪಂ. ಅಧ್ಯಕ್ಷೆ ಪದ್ಮಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯು ಪ್ರಾರಂಭದಿಂದ ಅಂತ್ಯದವರೆಗೆ ಸಮಸ್ಯೆಗಳ ವಿಚಾರವನ್ನು ಗ್ರಾಮಸ್ಥರು ಪ್ರಸ್ತಾಪಿಸಿ ಪ್ರಶ್ನೆಗಳ ಸುರಿಮಳೆಗೈದರು. ಸಭೆಯಲ್ಲಿ ಗ್ರಾಮಸ್ಥ ಸಿಯಾಬ್ ಮಾತನಾಡಿ; ಕುಶಾಲನಗರದ ಆಹಾರ ಇಲಾಖೆಯ ಕಚೇರಿಗೆ ಪಡಿತರ ಚೀಟಿಗಾಗಿ ಸಾಕಷ್ಟು ಬಾರಿ ಅಲೆದರು ಕೂಡಾ ಪಡಿತರ ಚೀಟಿಯನ್ನು ಸಕಾಲಕ್ಕೆ ನೀಡುತ್ತಿಲ್ಲ, ಅಲ್ಲದೇ ಪಡಿತರ ಚೀಟಿಗೆ ಏಜೆಂಟರೊಬ್ಬರನ್ನು ನೇಮಿಸಿ ಅವರ ಮೂಲಕ ಅಧಿಕ ಹಣವನ್ನು ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ದನಿಗೂಡಿಸಿದ ಗ್ರಾಮಸ್ಥರು ಪಡಿತರ ಚೀಟಿ ಪಡೆಯಲು ಆದಾಯ ಧೃಢೀಕರಣ ಪತ್ರ ಸೇರಿದಂತೆ ಇನ್ನಿತರ ದಾಖಲೆಗಳನ್ನು ತರುವಂತೆ ತಿಳಿಸಿ ದೂರದ ಕುಶಾಲನಗರದವರೆಗೆ ಬಡವರನ್ನು ಅಲೆದಾಡಿಸುವದು ಸರಿಯಾದ ಕ್ರಮವಲ್ಲವೆಂದು ಹೇಳಿದರು. ನೆಲ್ಯಹುದಿಕೇರಿ ಗ್ರಾಮಕ್ಕೆ ಭೇಟಿ ನೀಡಿ ಪಡಿತರ ಚೀಟಿಯ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಆಹಾರ ನಿರೀಕ್ಷಕ ಮುಂದಿನ ದಿನಗಳಲ್ಲಿ ನೆಲ್ಯಹುದಿಕೇರಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸುವದಾಗಿ ಭರವಸೆ ನೀಡಿದರು.

ನಲ್ವತ್ತೇಕರೆ ಬರಡಿಯ ನಿವಾಸಿ ಬೀರಾನ್ ಕುಟ್ಟಿ ಮಾತನಾಡಿ ನಲ್ವತ್ತೇಕರೆ ಬರಡಿಯ ಸಾರ್ವಜನಿಕ ರಸ್ತೆಯು ಹದೆಗೆಟ್ಟಿದ್ದು ಹೊಂಡ ಗುಂಡಿಗಳಿಂದ ಕೂಡಿದೆ. ಈ ರಸ್ತೆಯನ್ನು ದುರಸ್ತಿಪಡಿಸುವಂತೆ ಹಲವಾರು ವರ್ಷಗಳಿಂದ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಕೂಡಾ ಗ್ರಾಮ ಪಂಚಾಯಿತಿಯು ಈ ಬಗ್ಗೆ ಆಸಕ್ತಿ ವಹಿಸದೇ ನಿರ್ಲಕ್ಷ್ಯ ತೋರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ವಸಂತ್ ಕುಮಾರ್ ಹೊಸಮನೆ ಪ್ರಮುಖ ರಸ್ತೆಗಳು ಗ್ರಾಮೀಣ ಪ್ರದೇಶದಲ್ಲಿ ಹದಗೆಟ್ಟಿದ್ದರೂ ಇದನ್ನು ದುರಸ್ತಿ ಪಡಿಸದೇ ಹೊಸದಾಗಿ ನಿರ್ಮಾಣ ವಾಗಿರುವ ಬಡಾವಣೆ ಗಳಿಗೆ ರಸ್ತೆ ಅಭಿವೃದ್ಧಿಪಡಿಸುವ ಔಚಿತ್ಯವೇನು ಎಂದು ಪ್ರಶ್ನಿಸಿದರು. ಬಡಾವಣೆ ನಿರ್ಮಿಸಲು ಅನುಮತಿ ನೀಡಿದವರು ಯಾರು ಎಂದು ಪ್ರಶ್ನಿಸಿದರು.

ಪಿ.ಆರ್. ಭರತ್ ಮಾತನಾಡಿ ಈ ಬಾರಿಯ ಪ್ರವಾಹಕ್ಕೆ ಸಿಲುಕಿ ನೆಲ್ಯಹುದಿಕೇರಿಯ ಗ್ರಾಮದ ನದಿ ತೀರದ ನೂರಾರು ಮನೆಗಳು ಹಾನಿಯಾಗಿವೆ. ವಾಸಕ್ಕೆ ಯೋಗ್ಯವಿಲ್ಲದಂತ ಪರಿಸ್ಥಿತಿಯಲ್ಲಿವೆ. ಮನೆ ಕಳೆದುಕಂಡ ಸಂತ್ರಸ್ತರು ಸ್ಥಳೀಯ ಸರಕಾರಿ ಪ್ರಾಥಮಿಕ ಶಾಲೆಯ ಪರಿಹಾರ ಕೇಂದ್ರದಲ್ಲಿ ಕಳೆದ ನಾಲ್ಕೂವರೆ ತಿಂಗಳಿನಿಂದ ಆಶ್ರಯಪಡೆಯುತ್ತಿದ್ದಾರೆ. ಇವರುಗಳಿಗೆ ಪುನರ್ವಸತಿ ಕೂಡಲೇ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಇದಕ್ಕೆ ದನಿಗೂಡಿಸಿದ ಗ್ರಾಮಸ್ಥರು ನದಿ ತೀರದ ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಹಾನಿ ಪ್ರಮಾಣದ ಪರಿಹಾರದಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ಗ್ರಾಮಲೆಕ್ಕಿಗ ಸಂತೋಷ್ ಪ್ರವಾಹದಿಂದ ಹಾನಿಯಾಗಿರುವ ಮನೆಗಳ ಹಾನಿಯ ಸಮೀಕ್ಷೆಯನ್ನು ಸಮರ್ಪಕವಾಗಿ ನಿರ್ವಹಿಸಲಾಗಿದ್ದು; ಹಾನಿಯ ಪ್ರಮಾಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದರು. ಪ್ರವಾಹದಿಂದ ಬೆಳೆಹಾನಿ ಆದ ಬೆಳೆಗಾರರಿಗೆ ಈಗಾಗಲೇ ಪರಿಹಾರವನ್ನು ಸರ್ಕಾರದ ವತಿಯಿಂದ ನೀಡಲಾಗುತ್ತಿದೆ ಎಂದರು.

ದೇವರಕಾಡು, ಕಡಂಗ, ಜಾಗಗಳಿಗೆ 94ಸಿ ಯ ಹಕ್ಕು ಪತ್ರಗಳನ್ನು ನೀಡಲು ಸಾಧ್ಯವಿಲ್ಲವೆಂದು ಮಾಹಿತಿ ನೀಡಿದರು. ಗ್ರಾಮಸ್ಥ ಮಣಿ ಮೊಹಮ್ಮದ್ ಮಾತನಾಡಿ ನೆಲ್ಯಹುದಿಕೇರಿ ಪಟ್ಟಣದಲ್ಲಿ ಈ ಹಿಂದೆ ಇದ್ದ ಅಂಚೆ ಕಚೇರಿಯು ಪಟ್ಟಣದ ತಿರುವಿನ ರಸ್ತೆ ಬದಿಯಲ್ಲಿದ್ದು ಇದರಿಂದಾಗಿ ವಾಹನ ಚಾಲಕರಿಗೆ ಸಮಸ್ಯೆಯಾಗುತ್ತಿದೆ. ಈ ಕಟ್ಟಡವನ್ನು ತೆರವುಗೊಳಿಸಿ ಬಸ್ಸು ತಂಗುದಾಣವನ್ನು ಬದಲಿ ಜಾಗದಲ್ಲಿ ನಿರ್ಮಾಣ ಮಾಡುವಂತೆ ತಿಳಿಸಿದರು. ಎ.ಎ. ಸಯಾಬ್ ಮಾತನಾಡಿ ನೆಲ್ಯಹುದಿಕೇರಿ ಪಟ್ಟಣದ ಮುಖ್ಯ ರಸ್ತೆಯ ಬದಿಯಲ್ಲಿದ್ದ ಪ್ರಾಚೀನ ಕಾಲದ ಸಾರ್ವಜನಿಕ ತೆರೆದ ಬಾವಿಯನ್ನು ಕೆಲವು ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದು ಅದನ್ನು ತೆರವುಗೊಳಿಸುವಂತೆ ಹೇಳಿದರು.

ಅದೇ ಜಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸುವಂತೆ ಸಲಹೆ ನೀಡಿದರು. ಬೆಟ್ಟದಕಾಡು ನಿವಾಸಿ ನೆಲ್ಲಿಕಲ್ ಸುರೇಶ್ ಮಾತನಾಡಿ ಆ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ಬೆಟ್ಟದಕಾಡಿನ ನೀರಿನ ಸಮಸ್ಯೆ ಬಗ್ಗೆ ಗ್ರಾ.ಪಂ.ಗೆ ಹಲವಾರು ಬಾರಿ ದೂರು ನೀಡಿದ್ದರೂ ನೀರಿನ ಸಮಸ್ಯೆ ಬಗೆಹರಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜೋಸೆಫ್ ಶ್ಯಾಂ ಮಾತನಾಡಿ ನೆಲ್ಯಹುದಿಕೇರಿ ಗ್ರಾ. ಪಂ. ವ್ಯಾಪ್ತಿಯಲ್ಲಿ ವಿಶೇಷ ಚೇತನರು ಸೇರಿದಂತೆ ವಿವಿಧ ರೀತಿಯ ಪಿಂಚಣಿದಾರರ ಅರ್ಜಿಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಪಂ. ಕಚೇರಿಗೆ ಭೇಟಿ ನೀಡಿ ಅರ್ಜಿಗಳನ್ನು ಸ್ವೀಕರಿಸುವಂತೆ ತಿಳಿಸಿದರು.

ಇದಕ್ಕೆ ಉತ್ತರಿಸಿದ ಗ್ರಾಮಲೆಕ್ಕಿಗರು ವಾರದಲ್ಲಿ ಒಂದು ದಿನ ನೆಲ್ಯಹುದಿಕೇರಿ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಅರ್ಜಿಗಳನ್ನು ಸ್ವೀಕರಿಸಲಾಗುವ ದೆಂದರು. ನೆಲ್ಯಹುದಿಕೇರಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದ್ದು ಇದಕ್ಕೆ ಶಾಶ್ವತ ಯೋಜನೆ ರೂಪಿಸಬೇಕೆಂದು ಬೆಳೆಗಾರರು ಒತ್ತಾಯಿಸಿದರು. ಅಲ್ಲದೇ ಮಂಗಗಳ ಹಾವಳಿಯು ಹೆಚ್ಚಾಗಿದೆ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಉಪವಲಯ ಅಧಿಕಾರಿ ಸುಬ್ರಾಯ ಈಗಾಗಲೇ ಮಾಲ್ದಾರೆಯಿಂದ ಹತ್ತು ಕಿ.ಮೀ ದೂರದವರೆಗೆ ರೈಲು ಕಂಬಿ ಅಳವಡಿಸುವ ಮೂಲಕ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು. ಸಿ.ಆರ್.ಪಿ ಸತ್ಯನಾರಾಯಣ ಮಾತನಾಡಿ, ಶಾಲಾ ಭಾಗದಲ್ಲಿ ಗಾಂಜಾ ವ್ಯಸನಿಗಳು ಹೆಚ್ಚಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದರು.

ಬರಡಿಯ ನಿವಾಸಿ ಅಂದುಮಾಯಿ ಮಾತನಾಡಿ ಗ್ರಾಮದಲ್ಲಿ ಕೆಲವರು ಕುಡಿಯುವ ನೀರಿನ ಸಂಪರ್ಕ ಪಡೆದು ನರ್ಸರಿಗಳಿಗೆ ಬಳಸುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಪಿ.ಡಿ.ಓ ಅನಿಲ್ ಕುಮಾರ್ ಈ ಬಗ್ಗೆ ಪರಿಶೀಲನೆ ನಡೆಸಿ ಅಂತವರ ಬಗ್ಗೆ ಕ್ರಮ ಕೈಗೊಳ್ಳುವದಾಗಿ ತಿಳಿಸಿದರು. ಟಿ.ಸಿ ನಾರಾಯಣ ಕುಟ್ಟಿ ಮಾತನಾಡಿ ಗ್ರಾಮದ ಹಿಂದೂ ರುದ್ರ ಭೂಮಿ ಯಲ್ಲಿ ಕೈಗೊಂಡಿರುವ ಕಾಮಗಾರಿ ಅಪೂರ್ಣಗೊಂಡಿದ್ದು ಅದನ್ನು ಕೂಡಲೇ ಮುಕ್ತಾಯಗೊಳಿಸುವಂತೆ ಒತ್ತಾಯಿಸಿದರು. ಜಿ.ಪಂ ಸದಸ್ಯೆ ಸುನಿತಾ ಮಂಜುನಾಥ್ ಮಾತನಾಡಿ ಈಗಾಗಲೇ ನೆಲ್ಯಹುದಿಕೇರಿ ಗ್ರಾ. ಪಂ. ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸುವದಾಗಿ ಭರವಸೆ ನೀಡಿದರು. ಸಭೆಯಲ್ಲಿ ನೋಡಲ್ ಅಧಿಕಾರಿಗಳಾದ ಗೌರಿ ತಾ.ಪಂ. ಸದಸ್ಯೆ, ಸುಹದಾ, ಗ್ರಾ.ಪಂ. ಉಪಾಧ್ಯಕ್ಷೆ ಸೆಫಿಯಾ, ಗ್ರಾ.ಪಂ. ಸದಸ್ಯರುಗಳು ಹಾಜರಿದ್ದರು.