ಕಣಿವೆ, ನ. 18: ಇತ್ತೀಚಿನ ವರ್ಷಗಳಲ್ಲಿ ನೀವು ಯಾವದೇ ತರಕಾರಿ, ಸೊಪ್ಪು, ಕಾಯಿ ಪಲ್ಯೆ ಗಳನ್ನು ನೋಡಿದರೆ ರಾಸಾಯನಿಕ ಗಳನ್ನು ಬಳಸದೇ ಬೆಳೆಸುವ ಹಾಗಿಲ್ಲ. ಅಷ್ಟರ ಮಟ್ಟಿಗೆ ನಮ್ಮ ಕೃಷಿ ಕೃಷವಾಗಿ (ಅನಾರೋಗ್ಯ) ಹೋಗಿದೆ. ಇತ್ತೀಚಿನ ವರ್ಷಗಳಲ್ಲಿ ಜನ ರಾಸಾಯನಿಕ ಮುಕ್ತವಾದ, ಸಾವಯವದಿಂದ ಕೂಡಿದ ತರಕಾರಿಗಳನ್ನು ಅರಸುವಂತಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾದ ಶುಂಠಿಯ ಜೊತೆ ಜೊತೆಗೆ ರೈತನ ಜಮೀನುಗಳಿಗೆ ಲಗ್ಗೆಯಿಡುತ್ತಿರುವ ಸುವರ್ಣ ಗೆಡ್ಡೆ ಎಂಬ ತರಕಾರಿ ಬೆಳೆ ರೈತನಿಗೆ ವರದಾನವಾಗುತ್ತಿದೆ. ಈ ಸುವರ್ಣ ಗೆಡ್ಡೆಗೆ ಯಾವದೇ ರಾಸಾಯನಿಕಗಳನ್ನು ಬಳಸದೇ ರೈತರು ಮಣ್ಣಿನೊಳಗೆ ಬೆಳೆಸುವ ಈ ಕಾಯಿ ಪಲ್ಯೆ ಬೆಳೆ ಮನುಷ್ಯನ ದೇಹಕ್ಕೆ ಅಗತ್ಯವಾಗಿ ಬೇಕಾದ ಪೌಷ್ಟಿಕಾಂಶ ಗಳನ್ನು ಒದಗಿಸುವ ಪ್ರಮುಖ ತಿನಿಸಾಗಿದ್ದು ಈ ಸುವರ್ಣ ಗೆಡ್ಡೆಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಕೊಡಗು ಜಿಲ್ಲೆಯಲ್ಲಿ ಬಹುತೇಕ ಕಡೆಗಳಲ್ಲಿ ಈ ಬೆಳೆಯನ್ನು ರೈತರು ಬೆಳೆಯುತ್ತಿದ್ದಾರೆ. ಕುಶಾಲನಗರ ತಾಲೂಕಿನ ಬ್ಯಾಡಗಟ್ಟ ಗ್ರಾಮದ ರೈತ ಸೋಮಣ್ಣ ಎಂಬವರು ಒಂದು ಎಕರೆ ಜಾಗದಲ್ಲಿ ಕಳೆದ ಏಳೆಂಟು ತಿಂಗಳ ಹಿಂದಷ್ಟೇ ಕೈಗೊಂಡಿದ್ದ ಈ ಸುವರ್ಣ ಗೆಡ್ಡೆ ಬೆಳೆ ಹುಲುಸಾಗಿ ಬೆಳೆದಿದ್ದು ಇದನ್ನು ಮಾರಾಟ ಮಾಡಿ ಉತ್ತಮವಾದ ಲಾಭ ಗಳಿಸಿದ್ದಾರೆ. ಈ ಸುವರ್ಣ ಗೆಡ್ಡೆಗೆ ಕೆಜಿ ಒಂದಕ್ಜೆ ಈಗ 9 ರೂಗಳಿಂದ 12 ರೂ. ಇದೆ. ಒಂದು ಎಕರೆ ಭೂಮಿಯಲ್ಲಿ ಕನಿಷ್ಟ 3 ಟನ್ ಬಿತ್ತನೆ ಮಾಡಿದ್ದ ರೈತ ಸೋಮಣ್ಣ ಬರೋಬ್ಬರಿ 20 ಟನ್ ಇಳುವರಿ ತೆಗೆದಿದ್ದಾರೆ. 200 ದಿನಗಳ ಅಂತರದಲ್ಲಿ ಬೆಳೆಯಬಹುದಾದ ಈ ಸುವರ್ಣ ಗೆಡ್ಡೆಗೆ ಒಂದು ಎಕರೆಯಲ್ಲಿ ಬೆಳೆಯಲು 60 ರಿಂದ 70 ಸಾವಿರ ರೂಗಳ ಖರ್ಚು ತಗಲಿದೆ. ಆರಂಭ ದಲ್ಲಿ ಇದನ್ನು ಬಿತ್ತನೆ ಮಾಡುವಾಗ ಆಕಳ ಸಗಣಿ ಗೊಬ್ಬರವನ್ನು ಇದರ ಬುಡಕ್ಕೆ ಅಳವಡಿಸಲಾಗುತ್ತದೆ. ನಂತರ ಅದು ಬೆಳವಣಿಗೆ ಆದಂತೆ ಆಗಿಂದಾಗ್ಗೆ ಕಳೆ ತೆಗೆದು ಸಕಾಲಕ್ಕೆ ನೀರು ಕೊಡುತ್ತಾ ಬಂದರೆ ಭೂಮಿಯಲ್ಲಿ ಶೀತಾಂಶವನ್ನು ನಿರ್ವಹಣೆ ಮಾಡುತ್ತಾ ಬಂದರೆ ತನ್ನಷ್ಟಕ್ಕೆ ತಾನು ಬೆಳೆದು ನಿಲ್ಲುತ್ತದೆ ಎನ್ನುತ್ತಾರೆ ಪ್ರಗತಿಪರ ಕೃಷಿಕ ಸಿದ್ದಲಿಂಗಪುರದ ಬೇಬಿ.
ಈ ಸುವರ್ಣ ಗೆಡ್ಡೆ ಬೆಳೆಯನ್ನು ಚಿಕ್ಕಮಂಗಳೂರಿನ ಎನ್.ಆರ್.ಪುರ ತಾಲೂಕಿನಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಹಾಗೆಯೇ ಕೊಡಗಿನ ಸಿದ್ದಲಿಂಗಪುರ, ಹೆಬ್ಬಾಲೆ, ಏಳನೇ ಹೊಸಕೋಟೆ ಮತ್ತಿತರ ಕಡೆಗಳಲ್ಲಿ ಬೆಳೆಯಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಪಿರಿಯಾಪಟ್ಟಣ ತಾಲೂಕಿನ ಕೆಲ ಗ್ರಾಮಗಳಲ್ಲಿ ಬೆಳೆಯುತ್ತಿದ್ದಾರೆ. ಈ ಗೆಡ್ಡೆ ಗೆಣಸು ಅತ್ಯುತ್ತಮ ಆರೋಗ್ಯದಾಯಕ ಆಹಾರದ ವಸ್ತುವಾಗಿದ್ದು, ಗರ್ಭಕೋಶದ ಸಮಸ್ಯೆಯನ್ನು ಎದುರಿಸುತ್ತಿರುವ ಮಹಿಳೆಯರಿಗೆ ಈ ಸುವರ್ಣ ಗೆಡ್ಡೆ ರಾಮಬಾಣ ಎನ್ನಲಾಗುತ್ತದೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಈ ಗೆಡ್ಡೆಯನ್ನು ಹೆಚ್ಚಾಗಿ ಜನ ತಿನ್ನುತ್ತಾರೆ ಎಂದು ಕೃಷಿಕ ಬೇಬಿ ವಿವರಿಸಿದರು. ಈ ಸುವರ್ಣ ಗೆಡ್ಡೆಯ ಫಸಲಿನ ಆಕಾರ, ರಾಗಿ ಬೀಸುವ ಕಲ್ಲಿನ ಮಾದರಿಯಲ್ಲಿ ಇರುತ್ತದೆ. ಇದು ಕನಿಷ್ಟ 3 ಕೆಜಿ ತೂಕದಿಂದ ಗರಿಷ್ಠ 15 ಕೆಜಿ ತೂಕದ ವರೆಗೂ ಬೆಳವಣಿಗೆ ಆಗಿರುತ್ತದೆ ಎಂದು ಸುವರ್ಣ ಗೆಡ್ಡೆ ಬೆಳೆಯಲ್ಲಿ ಅನೇಕ ವರ್ಷಗಳ ಅನುಭವ ಹೊಂದಿರುವ ಬೇಬಿ ಹೇಳುತ್ತಾರೆ. ಈ ಸುವರ್ಣ ಗೆಡ್ಡೆಯನ್ನು ಪ್ರತಿಯೊಬ್ಬರೂ ಪ್ರತಿ ದಿನವೂ ತಿನ್ನುವ ಮೂಲಕ ಉತ್ತಮ ಆರೋಗ್ಯ ಹೊಂದಬಹುದಾಗಿದೆ ಎನ್ನುತ್ತಾರೆ ಅವರು. -ಕೆ.ಎಸ್. ಮೂರ್ತಿ