ಮಡಿಕೇರಿ, ನ. 19: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿ ಸಂಸ್ಥೆ ವತಿಯಿಂದ ಸಹಕಾರ ಸಂಘ-ಸಂಸ್ಥೆ, ಸಹಕಾರ ಇಲಾಖೆ, ಸಹಕಾರ ಲೆಕ್ಕ ಪರಿಶೋಧನಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಹಾಗೂ ಖಾಸಗಿ ಅಭ್ಯರ್ಥಿಗಳಿಗೆ “6 ತಿಂಗಳು ಅವಧಿಯ “ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್” ತರಬೇತಿಯು 2020ರ ಜನವರಿ 1 ರಿಂದ ಪ್ರಾರಂಭವಾಗಲಿದ್ದು, ತರಬೇತಿ ಪಡೆಯಲಿಚ್ಛಿಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿ ಪಡೆಯಲಿಚ್ಛಿಸುವ ಅಭ್ಯರ್ಥಿಗಳು ಸಹಕಾರ ಸಂಘ, ಸಹಕಾರ ಇಲಾಖೆ, ಸಹಕಾರ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ವೇತನ ಪಡೆಯುವ ನೌಕರರಾಗಿರಬೇಕು. ಖಾಸಗಿ ಅಭ್ಯರ್ಥಿಗಳಿಗೆ ನಿಯಮಿತವಾಗಿ ಅವಕಾಶ ಕಲ್ಪಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶೇ. 18 ರಷ್ಟು ಸ್ಥಾನ ತರಬೇತಿಗಾಗಿ ಮೀಸಲಿರಿಸಲಾಗಿರಬೇಕು. ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರ ಬೇಕು. ಎಸ್‍ಎಸ್‍ಎಲ್‍ಸಿ. ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ, ಸಹಕಾರ ಸಂಘಗಳಲ್ಲಿ ಒಂದು ವರ್ಷಕ್ಕಿಂತ ಮೇಲ್ಪಟ್ಟು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯೂ ಸಹ ತರಬೇತಿ ಪಡೆಯಲು ಅರ್ಹರಾಗಿರುತ್ತಾರೆ. ಇಂತಹ ಅಭ್ಯರ್ಥಿಗಳು ಮಾತ್ರ ತರಬೇತಿಗೆ ಅರ್ಜಿ ಸಲ್ಲಿಸಬಹುದು. ಈ ತರಬೇತಿಯಲ್ಲಿ ಅಭ್ಯರ್ಥಿಗಳಿಗೆ ಮಾಹೆಯಾನ ರೂ. 400 ಗಳ ಶಿಷ್ಯವೇತನ ನೀಡಲಾಗುವದು.
ನಿರುದ್ಯೋಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 6 ತಿಂಗಳ ವಿಶೇಷ “ಡಿಪ್ಲೊಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್” ತರಬೇತಿಯನ್ನು ಸಹ ನೀಡಲಾಗುವದು. ಈ ವರ್ಗಕ್ಕೆ ಸೇರಿದ ಅಭ್ಯರ್ಥಿಗಳ ಪಟ್ಟಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ತರಿಸಿಕೊಳ್ಳಲಾಗುವದು ಮತ್ತು ಈ ವರ್ಗದ ಅಭ್ಯರ್ಥಿಗಳು ಆಯಾಯ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರ ಮೂಲಕ ಅಥವಾ ವ್ಯವಸ್ಥಾಪಕ ನಿರ್ದೇಶಕರು, ಮಡಿಕೇರಿ ಹಾಗೂ ಹಾಸನ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಇವರ ಮೂಲಕ ಅರ್ಜಿಗಳನ್ನು ತಾ. 30 ರೊಳಗೆ ಸಲ್ಲಿಸಬೇಕು. ಅಭ್ಯರ್ಥಿಗಳು ಕನಿಷ್ಟ ಎಸ್‍ಎಸ್‍ಎಲ್‍ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವಯೋಮಿತಿ 18 ವರ್ಷಗಳಾಗಿರಬೇಕು. ಗರಿಷ್ಠ 30 ವರ್ಷಗಳು ಮೀರಿರಬಾರದು. ಈ ಅಭ್ಯರ್ಥಿಗಳಿಗೆ ಮಾಹೆಯಾನ ರೂ. 500 ಶಿಷ್ಯವೇತನ ನೀಡಲಾಗುವದು. ತರಬೇತಿಗೆ ಅರ್ಜಿ ಸಲ್ಲಿಸಲು ತಾ. 30 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿ ಮಡಿಕೇರಿ ತರಬೇತಿ ಸಂಸ್ಥೆಯ ಪ್ರಾಂಶುಪಾಲರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ. 08272-228437, 8762110952, 9535250704, 9449245024 ನ್ನು ಪಡೆಯಬಹುದು.