ಮಡಿಕೇರಿ, ನ.18 : ಸಾರ್ವಜನಿಕರ ಅನುಕೂಲಕ್ಕಾಗಿ ದೂರದ ಸ್ಥಳಕ್ಕೆ ಸ್ಥಳಾಂತರ ಗೊಂಡಿರುವ ಕಂದಾಯ ನಿರೀಕ್ಷಕರ ಕಚೇರಿಯನ್ನು ನಗರದ ತಹಶೀಲ್ದಾರ್ ಕಚೇರಿಯ ಬಳಿಗೆ ಮುಂದಿನ ಗುರುವಾರದ ಒಳಗಾಗಿ ಸ್ಥಳಾಂತರಿಸ ದಿದ್ದಲ್ಲಿ, ಸಾರ್ವಜನಿಕರ ಸಹಕಾರ ದೊಂದಿಗೆ ಜಿಲ್ಲಾಡಳಿತ ಭವನದ ಮುಂಭಾಗ ಅಹೋರಾತ್ರಿ ಧರಣಿ ನಡೆಸುವದಾಗಿ ಜಂಟಿ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ. ಬಿದ್ದಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ ಕೋಟೆ ಆವರಣ ದಲ್ಲಿ ಈ ಹಿಂದೆ ಕಂದಾಯ ನಿರೀಕ್ಷಕರ ಕಚೇರಿ ಕಾರ್ಯ ನಿರ್ವಹಿಸುತಿತ್ತು. ಮಡಿಕೇರಿ ಹೋಬಳಿ ಕಂದಾಯ ನಿರೀಕ್ಷಕರ ಕಚೇರಿಯನ್ನು ವ್ಯಾಲಿ ವ್ಯೂ ಹೋಟೆಲ್ ಬಳಿಯ ಪ್ರವಾಸೋದ್ಯಮ ಇಲಾಖಾ ಕಚೇರಿ ಬಳಿಗೆ ಸ್ಥಳಾಂತರ ಮಾಡಲಾಗಿದ್ದು, ಇದರಿಂದ ಮಡಿಕೇರಿ ಸುತ್ತಮುತ್ತಲಿನ ಏಳು ಹೋಬಳಿಗಳಿಗೆ ತೊಂದರೆ ಎದುರಿಸುವಂತಾಗಿದೆ ಎಂದರು. ಪ್ರಸ್ತುತ ಇರುವ ತಹÀಶೀಲ್ದಾರ್ ಕಚೇರಿ ಸಮೀಪ ಖಾಲಿ ಸರಕಾರಿ ಕಚೇರಿ ಶಿಕ್ಷಣ ಇಲಾಖೆಯ ಕಟ್ಟಡ, ನಗರಸಭಾ ಕಟ್ಟಡದಲ್ಲಿಯೂ ಅಗತ್ಯ ಸ್ಥಳಾವಕಾಶಗಳಿದೆ. ಹೀಗಿದ್ದೂ ಕಂದಾಯ ನಿರೀಕ್ಷಕರ ಕಚೇರಿಯನ್ನು ತರಾತುರಿಯಿಂದ ಸ್ಥಳಾಂತರ ಮಾಡಿರುವದು ಸರಿಯಲ್ಲವೆಂದು ಹೇಳಿದರು.
ಸಮಿತಿ ಪದಾಧಿಕಾರಿ ಟಿ.ಎಂ. ಅಯ್ಯಪ್ಪ ಮಾತನಾಡಿ, ಮಡಿಕೇರಿ ತಾಲೂಕಿಗೆ ಒಳಪಟ್ಟಂತೆ ಏಳು ಹೋಬಳಿಗಳಿದ್ದು, ಇದರೊಂದಿಗೆ ಮಡಿಕೇರಿ ನಗರವು ಸೇರುತ್ತದೆ. ಸರಕಾರದ ಸೌಲಭ್ಯ ಪಡೆಯಲು ಪ್ರತಿನಿತ್ಯ ಆರ್‍ಐ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ಕಚೇರಿಯನ್ನು ನಗರದ ಕೇಂದ್ರ ಸ್ಥಳದಲ್ಲಿ ಕಾರ್ಯನಿರ್ವ ಹಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸಮಿತಿ ಪ್ರಮುಖ ರಾದ ಅಪ್ರು ರವೀಂದ್ರ, ಪಿ.ಸುಭಾಷ್ ಸೋಮಯ್ಯ ಉಪಸ್ಥಿತರಿದ್ದರು.