ಗೋಣಿಕೊಪ್ಪ ವರದಿ, ನ. 18: ದಕ್ಷಿಣ ಕೊಡಗಿನ ಎರಡು ಗ್ರಾಮಗಳಲ್ಲಿ ಭಾನುವಾರ ರಾತ್ರಿ ನಡೆದ ಹುಲಿ ದಾಳಿಯಿಂದ ಒಂದು ಹಸು ಸಾವಿಗೀಡಾಗಿದ್ದು, ಮತ್ತೊಂದು ಗಾಯಗೊಂಡಿದೆ.ಮಾಯಮುಡಿಯ ಕೆ. ರವಿ ಎಂಬವರಿಗೆ ಸೇರಿದ ಹಸು ಸಾವಿಗೀಡಾಗಿದ್ದು, ಕಳತ್ಮಾಡು ಗ್ರಾಮದ ಕೊಲ್ಲೀರ ದಿನು ಅವರಿಗೆ ಸೇರಿದ ಹಸು ಗಾಯಗೊಂಡು ಪ್ರಾಣಪಾಯದಿಂದ ಪಾರಾಗಿದೆ.ರವಿ ಅವರಿಗೆ ಸೇರಿದ ಹಸುವನ್ನು ಕೊಟ್ಟಿಗೆ ಸಮೀಪದ ಗದ್ದೆ ಬದಿಯಲ್ಲಿ ಕಟ್ಟಿದ್ದ ಸಂದರ್ಭ ರಾತ್ರಿ ದಾಳಿ ಮಾಡಿ ಕುತ್ತಿಗೆ ಭಾಗವನ್ನು ಕಚ್ಚಿ ಕೊಂದಿದ್ದು, ತಿನ್ನದೆ ತೆರಳಿದೆ. ಸುಮಾರು 35 ಸಾವಿರ ನಷ್ಡವಾಗಿದೆ. ಸ್ಥಳಕ್ಕೆ ತಿತಿಮತಿ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಕಳತ್ಮಾಡು ಗ್ರಾಮದ ಕೊಲ್ಲೀರ ದಿನು ಅವರ ಕೊಟ್ಟಿಗೆಗೆ ನುಗ್ಗಿರುವ ಹುಲಿ ಗರ್ಭಿಣಿ ಹಸುವಿನ ಮೇಲೆ ದಾಳಿ ನಡೆಸಿ ಕಾಲ್ಕಿತ್ತಿದೆ. ಹಸುವಿಗೆ ಗಾಯವಾಗಿದ್ದು, ಜೀವಪಾಯದಿಂದ ಪಾರಾಗಿದೆ. (ಮೊದಲ ಪುಟದಿಂದ) ಸ್ಥಳಕ್ಕೆ ವೈದ್ಯ ಡಾ. ರವಿ ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ. ಪೊನ್ನಂಪೇಟೆ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದರು. ನಿರಂತರ ಹುಲಿ ದಾಳಿಯಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಇಲಾಖೆ ಹುಲಿ ಸೆರೆಗೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ದೇವರಪುರ ಗ್ರಾಮದಲ್ಲಿಯೂ ಕೆ.ಸಿ. ಸರಳ ಎಂಬವರಿಗೆ ಸೇರಿದ ಹಸು ಹುಲಿ ದಾಳಿ ಬಲಿಯಾಗಿದೆ.