ಸುಂಟಿಕೊಪ್ಪ, ನ. 18: ಅಭಿವೃದ್ಧಿಯತ್ತ ಸಾಗುತ್ತಿರುವ ಸುಂಟಿಕೊಪ್ಪಕ್ಕೆ ಅಗತ್ಯವಾಗಿ ಬೇಕಾದ ಹೈಟೆಕ್ ಮಾರುಕಟ್ಟೆ, ವಾಣಿಜ್ಯ ಸಂಕೀರ್ಣ, ನೂತನ ಗ್ರಾ.ಪಂ. ಕಟ್ಟಡ, ವಾಹನ ಪಾರ್ಕಿಂಗ್ ವ್ಯವಸ್ಥೆಗೆ ವಿಶೇಷ ಪ್ಯಾಕೆಜ್ನಡಿ ಅನುದಾನ ಬಿಡುಗಡೆ ಗೊಳಿಸಲಾಗುವದು ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.
ಸುಂಟಿಕೊಪ್ಪ ಗ್ರಾ.ಪಂ. ಪ್ರಾಂಗಣ ದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿ ರುವ ಗ್ರಾ.ಪಂ. ಕಟ್ಟಡ, ವಾಹನ ಪಾರ್ಕಿಂಗ್, ಶಾಂತಿಗೇರಿ ಬಡಾವಣೆ ಯಲ್ಲಿ ಭೂ ಪರಿವರ್ತನೆಯಾದ 1 ಎಕರೆ 7 ಸೆಂಟ್ ಜಾಗದಲ್ಲಿ ಹೈಟೆಕ್ ಮಾರುಕಟ್ಟೆ, ವಾಣಿಜ್ಯ ಸಂಕೀರ್ಣ, ಪಾರ್ಕಿಂಗ್, ಶೌಚಾಲಯದ ನಿರ್ಮಾಣದ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕರು ಜಿ.ಪಂ. ಇಂಜಿನಿಯರ್ ಫಯಾಜ್ ಆಹ್ಮದ್ ಅವರಲ್ಲಿ ಜಾಗದ ಅಳತೆಯನ್ನು ತೆಗೆಸಿ ಮುಂದೆ ಯಾವ ರೀತಿ ಕಟ್ಟಡ ನಿರ್ಮಿಸಬೇಕು ಎಂಬ ಸಲಹೆ, ಸೂಚನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು ಸುಂಟಿಕೊಪ್ಪ ಹೋಬಳಿ ಕೇಂದ್ರ ಜನ ನಿಬಿಡ ಪ್ರದೇಶವಾಗಿದೆ. ಇಲ್ಲಿನ ಜನತೆಗೆ ಮೂಲಭೂತ ಸೌಲಭ್ಯ ಕಲ್ಪಿಸಲು 50 ವರ್ಷದ ಮುಂದಿನ ಯೋಜನೆ ರೂಪಿಸಲಾಗಿದೆ. ಸುಂಟಿಕೊಪ್ಪದ ಅಭಿವೃದ್ಧಿಗಾಗಿ ಮಲೆನಾಡು ಪ್ರದೇಶ ಅಭಿವೃದ್ಧಿ ಯೋಜನೆ ಹಾಗೂ ಸರ್ಕಾರದ ವಿಶೇಷ ಪ್ಯಾಕೆಜ್ನಲ್ಲಿ ಅಂದಾಜು 3 ಕೋಟಿಯಲ್ಲಿ ಕಾಮಗಾರಿ ನಡೆಸಲಾಗುವದು.
ಬೈಪಾಸ್ ರಸ್ತೆಗಾಗಿ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ರಸ್ತೆಗೆ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಎಮ್ಮೆಗುಂಡಿ ಕಾನ್ಬೈಲ್ ರಸ್ತೆ ಯನ್ನು ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯನ್ವಯ ಕಾಮಗಾರಿಗೆ ಹಣ ಬಿಡುಗಡೆಯಾಗಿದೆ. ಸದ್ಯದಲ್ಲೆ ಕೆಲಸ ಆರಂಭಿಸಲಾಗುವ ದೆಂದು ಹೇಳಿದರು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ರೋಸ್ಮೇರಿ ರಾಡ್ರಿಗಸ್, ಉಪಾಧ್ಯಕ್ಷ ಪಿ.ಆರ್.ಸುಕುಮಾರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಪಿ.ಎಫ್. ಸಬಾಸ್ಟೀನ್, ಸದಸ್ಯರುಗಳಾದ ಬಿ.ಎಂ. ಸುರೇಶ್, ಚಂದ್ರ, ರತ್ನಾ, ರಜಾಕ್, ಕೆ.ಇ. ಕರೀಂ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಬಿ.ಐ. ಭವಾನಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣು ಗೋಪಾಲ್, ಇಂಜಿನಿಯರ್ ಫಯಾಜ್, ಚೇಂಬರ್ ಆಫ್ ಕಾರ್ಮಸ್ ಅಧ್ಯಕ್ಷ ಡಿ. ನರಸಿಂಹ, ಚೇಂಬರ್ ಆಫ್ ಕಾರ್ಮಸ್ ಮಾಜಿ ಅಧ್ಯಕ್ಷ ಸುದರ್ಶನ್ ನಾಯ್ಡು, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂ.ಎ. ಉಸ್ಮಾನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್, ಹಿರಿಯ ನಾಗರಿಕರಾದ ಎಂ.ಎ. ವಸಂತ್, ರಂಜಿತ್ ಕುಮಾರ್, ಡೆನ್ನಿಸ್ ಡಿಸೋಜ, ನಗರ ಬಿಜೆಪಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಉಪಸ್ಥಿತರಿದ್ದರು.