ಕಣಿವೆ, ನ. 19: ಮೂರ್ನಾಲ್ಕು ದಶಕಗಳ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಮನೆಗೊಂದು ಸೈಕಲ್ ಇದ್ದರೆ ಅದೇ ಆ ಮನೆ ಮಂದಿಗೆ ಐರಾವತ ಆಗಿರುತ್ತಿತ್ತು. ಹಳ್ಳಿ ಗಾಡು ಪ್ರದೇಶಗಳಲ್ಲಿ ನೆಂಟರಿಷ್ಟರ ಮನೆಗೆ ತೆರಳಲು, ಪೇಟೆಗೆ ಹೋಗಿ ಸಾಮಗ್ರಿ ಸರಂಜಾಮು ತರಲು ಸೈಕಲ್‍ಗಳ ಬಳಕೆ ಅತೀ ಅಗತ್ಯ ಇರುತ್ತಿತ್ತು.

ಆಗಿನ ಕಾಲದಲ್ಲಿ ವಾಹನಗಳ ಸಂಚಾರ ತೀರಾ ಅಂದರೆ ತೀರಾನೆ ವಿರಳ. ಅಂದಿನ ಆ ವಿಷಮ ಪರಿಸ್ಥಿತಿಯಲ್ಲಿ ಎಂದೋ ಬರುವ ಅಥವಾ ಬಾರದಿರುವ ಬಸ್‍ಗಾಗಿ ಕಾಯುವ ಬದಲು ಸೈಕಲ್‍ನಲ್ಲೇ ಜನರು ಸಂಚರಿಸುತ್ತಿದ್ದರು. ಕ್ರಮೇಣ ರಸ್ತೆಗಳು ಸುಧಾರಣೆ ಕಂಡೊಡನೆ ವಾಹನಗಳ ಬಳಕೆ ಹಾಗೂ ಸಂಚಾರವೂ ಹೆಚ್ಚತೊಡಗಿತು. ಸೈಕಲ್‍ಗಳು ಮೂಲೆ ಸೇರಿದವು. ಅಂದು ಸೈಕಲ್ ಬಳಕೆ ಇದ್ದಾಗ ಸೈಕಲ್ ಬಳಸುವ ಮಂದಿಯೂ ಆರೋಗ್ಯವಾಗಿದ್ದರು. ಪರಿಸರವೂ ಸಂತುಷ್ಟವಾಗಿತ್ತು. ಆದರೆ ಇಂದು ವಾಹನಗಳ ಸಂಖ್ಯೆ ಹಾಗೂ ಬಳಕೆ ಹೆಚ್ಚಿದ ನಂತರ ವಿಪರೀತದ ವಾಯುಮಾಲಿನ್ಯಕ್ಕೆ ಸಿಲುಕಿದ ಪರಿಸರಕ್ಕೆ ಸಂಕಷ್ಟ ಎದುರಾಗಿದೆ. ಐಷಾರಾಮಿ ವಾಹನಗಳಿಂದ ಹಿಡಿದು ಸಾಮಾನ್ಯ ಮೋಟಾರ್ ಸೈಕಲ್ ಬಳಸುವ ಮಂದಿ ಇಂದು ಆರೋಗ್ಯದ ದೃಷ್ಟಿಯಿಂದ ಮುಂಜಾನೆ ಹಾಗೂ ಮುಸ್ಸಂಜೆ ಕೆಲಹೊತ್ತು ಸೈಕಲ್ ಸವಾರಿ ಮಾಡುವ ಮೂಲಕ ಆರೋಗ್ಯದತ್ತ ಚಿತ್ತ ಹರಿಸುತಿದ್ದಾರೆ. ಆದರೆ ಸೀಗೆಹೊಸೂರಿನ ವ್ಯಕ್ತಿಯೊಬ್ಬರು ಕಳೆದ 30 ವರ್ಷಗಳಿಂದಲೂ ಸತತವಾಗಿ ಸೈಕಲ್ ಬಳಸುವ ಮೂಲಕ ಉತ್ತಮ ಆರೋಗ್ಯ ಹೊಂದಿದ್ದಾರೆ. ಮಾತ್ರವಲ್ಲ. ತಮ್ಮ ಆರೋಗ್ಯಕ್ಕೆ ಮೂಲವಾದ ಮತ್ತು ತಾನು ಹೋಗಬೇಕೆಂದಲ್ಲಿಗೆ ಕರೆದೊಯ್ಯುವ ಸೈಕಲ್ ಅನ್ನು

(ಮೊದಲ ಪುಟದಿಂದ) ತಮ್ಮ ದೇವರು ಎಂಬಂತೆ ಬಹಳಷ್ಟು ಗೌರವದಿಂದ ಜೋಪಾನವಾಗಿ ಸೈಕಲ್ ಅನ್ನು ಇಟ್ಟುಕೊಂಡಿದ್ದಾರೆ.

ಇವರ ಹೆಸರು ಎಸ್.ಎಸ್. ದೇವಪ್ಪ, ಅಂಚೆ ಇಲಾಖೆಯಲ್ಲಿ ಸರಿ ಸುಮಾರು 28 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿರುವ ಇವರು ಈಗ ನಿವೃತ್ತಿಯ ನಂತರವೂ ಅದೇ ಸೈಕಲ್‍ನೊಂದಿಗೆ ತಮ್ಮ ವಿಶ್ರಾಂತ ಜೀವನ ಕಳೆಯುತ್ತಿದ್ದಾರೆ. ಕೂಡಿಗೆಯ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮ್ಯಾನ್ ಆಗಿದ್ದ ದೇವಪ್ಪ, ದಿನವೊಂದಕ್ಕೆ ಹತ್ತಾರು ಹಳ್ಳಿಗಳಿಗೆ ಸೈಕಲ್‍ನಲ್ಲಿಯೇ ತೆರಳಿ ಅಂಚೆ ಪತ್ರಗಳನ್ನು ನಿತ್ಯವೂ ಜನರಿಗೆ ತಲುಪಿಸುತಿದ್ದರು. ಕಳೆದ 30 ವರ್ಷಗಳಲ್ಲಿ ಈವರೆಗೆ ಮೂರು ಸೈಕಲ್‍ಗಳನ್ನು ಬದಲಿಸಿದ್ದಾರೆ.

ಸೀಗೆಹೊಸೂರಿನಿಂದ ನಿತ್ಯವೂ ಕೂಡಿಗೆಗೆ ಬಂದು ಹೋಗುವ ಈ ದೇವಪ್ಪ ಈ ಮಾರ್ಗದ ಬಹಳಷ್ಟು ಅಮಾಯಕ ಪಾಪದ ಮಂದಿಗೆ ದೇವರೇ ಆಗಿದ್ದಾರೆ. ಏಕೆಂದರೆ ಅವರಿಗೆ ಅಗತ್ಯವಾಗಿ ಬೇಕಿದ್ದ ಕೆಲವೊಂದು ಸಣ್ಣ ಪುಟ್ಟ ಸಾಮಗ್ರಿ ಸರಂಜಾಮುಗಳು, ಔಷಧಿ ಅಂಗಡಿಗಳಿಂದ ಒಂದಷ್ಟು ಮೆಡಿಸಿನ್‍ಗಳು ಹೀಗೆ ಅವರಿಗೆ ಸಹಾಯ ಮಾಡುವ ಮೂಲಕ ಈ ದೇವಪ್ಪ ಪರೋಪಕಾರಿಯಾಗಿಯೂ ಸೈಕಲ್‍ನಲ್ಲಿ ತಮಗರಿವಿಲ್ಲದ ಮತ್ತು ಅಹಂ ಇಲ್ಲದ ಸೇವೆಯನ್ನು ಒದಗಿಸಿದ್ದಾರೆ. ಈಗ ನಿವೃತ್ತಿಯಾಗಿರುವ ದೇವಪ್ಪರ ಮನಸ್ಸು ಕುಳಿತಲ್ಲಿ ಕೂರಲು ಬಿಡಲೊಲ್ಲದು. ಅದಕ್ಕೆ ಅವರು ನಿತ್ಯವೂ ಸಂಚರಿಸುತ್ತಿದ್ದ ಮಾರ್ಗದಲ್ಲಿ ಒಂದು ಸುತ್ತು ಹಾಕಿ ತಮ್ಮ ಆಪ್ತರಿಷ್ಟರನ್ನು ಮಾತಾಡಿಸಿಕೊಂಡು ಮನೆಗೆ ಮರಳುತ್ತಾರೆ.

ಈ ಒಂದು ಸಂದರ್ಭ ಭೇಟಿಯಾದ ‘ಶಕ್ತಿ’ಯೊಂದಿಗೆ ತಮ್ಮ ಮನದಾಳ ಬಿಚ್ಚಿಟ್ಟ ದೇವಪ್ಪ, ನಾನು ಸೈಕಲ್ ಅಭಿಮಾನಿ. ಸೈಕಲ್ ಎಂದರೆ ನನಗೆ ಪ್ರಾಣ. ಅದೇ ನನ್ನ ರಥ. ಅದರಿಂದಾಗಿ ನನಗೆ ಇದುವರೆಗೂ ಯಾವದೇ ಕೆಮ್ಮು, ದಮ್ಮು, ಕಾಯಿಲೆಗಳಿಲ್ಲ. ನಗರಗಳಲ್ಲಿ ಜನರು ಬೆಳಿಗ್ಗೆ ಸಂಜೆ ಆರೋಗ್ಯಕ್ಕೆಂದು ಸೈಕಲ್ ತುಳಿಯುತ್ತಾರೆ. ಆದರೆ ನನ್ನ ಜೀವನ ರಥ ಸಾಗುವದೇ ಈ ಸೈಕಲ್ ನಿಂದ. ಆಯುಧ ಪೂಜಾ ಸಂದರ್ಭ ಬಹಳಷ್ಟು ಜನ ತಮ್ಮ ಮನೆಗಳ ಮುಂದೆ ಲಾರಿ, ಕಾರು, ಮೋಟಾರ್ ಸೈಕಲ್‍ಗಳನ್ನು ಪೂಜಿಸುತ್ತಾರೆ. ಆದರೆ ಕಳೆದ 30 ವರ್ಷಗಳಿಂದ ಸೈಕಲ್ ಬಿಟ್ಟರೆ ನಾನು ಬೇರೆ ಯಾವದೇ ವಾಹನಗಳನ್ನು ಪೂಜಿಸಿಲ್ಲ. ಏಕೆಂದರೆ ಇದು ನನ್ನ ಆರೋಗ್ಯ, ನನ್ನ ಒಡನಾಡಿ ಎನ್ನುವ ದೇವಪ್ಪ, ಮೋಟಾರ್ ಸೈಕಲ್‍ಗಳ ಬಳಕೆಯನ್ನು ಆದಷ್ಟೂ ಎಲ್ಲರೂ ಕಡಿಮೆ ಮಾಡಿದರೆ ಪರಿಸರದ ಮೇಲಾಗುವ ದುಷ್ಪರಿಣಾಮದ ಜೊತೆಗೆ ಸೈಕಲ್ ತುಳಿಯುವವರಿಗೂ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹೇಳುತ್ತಾರೆ. -ಕೆ.ಎಸ್. ಮೂರ್ತಿ