ರಾಜಗೋಪಾಲ ತಮಿಳುನಾಡಿನ ಕೂನೂರಿನವ. ಮೈಸೂರು ಬ್ಯಾಂಕಿನಲ್ಲಿ ಗುಮಾಸ್ತನಾಗಿ ಆಯ್ಕೆಯಾಗಿ, ನಾನು ಆಗ ಇದ್ದ ಊರಲ್ಲಿ ಕೆಲಸಕ್ಕೆ ಸೇರಿದ್ದ. ನಾನು ಮೈಸೂರು ಬ್ಯಾಂಕಿನ ಹಿಂಭಾಗದ ಕಟ್ಟಡದಲ್ಲಿ ರೂಮ್ ಮಾಡಿಕೊಂಡಿದ್ದೆ. ನನ್ನ ಬ್ಯಾಂಕ್ ಕೆಲಸ ಐದೂವರೆಗೆ ಮುಗಿದ ನಂತರ ಮೈಸೂರು ಬ್ಯಾಂಕಿಗೆ ಬರುತ್ತಿದ್ದೆ. ಅಲ್ಲಿ ಕೇರ್‍ಂ ಆಟ ಆಡಲು ಅಲ್ಲಿನ ನಾಲ್ಕಾರು ಸಿಬ್ಬಂದಿ ಕೂತಿರುತ್ತಿದ್ದರು. ಹಾಗಾಗಿ ಅಲ್ಲಿ ರಾಜಗೋಪಾಲನ ಪರಿಚಯವಾಗಿ, ನಮ್ಮ ಮಿತ್ರತ್ವ ಬೆಳೆದಿತ್ತು. ಕೇರಮ್ ಆಟ ಮುಗಿದ ನಂತರ ರಾಜಗೋಪಾಲ ನನ್ನ ರೂಮಿನಲ್ಲಿ ಅರ್ಧ ಗಂಟೆಯಾದರೂ ಹರಟೆ ಹೊಡೆದು, ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿದ್ದ ತನ್ನ ರೂಮಿಗೆ ಹೋಗುತ್ತಿದ್ದ.

ಅದೊಂದು ದಿನ ಕೇರಂ ಆಡುವಾಗ ರಾಜಗೋಪಾಲ ಇಂಗ್ಲೀಷಿನಲ್ಲಿ ಕೇಳಿದ, ‘ನೀನು ಕತೆ ಬರೀತಿಯಂತೆ..?’

ನಾನು ಬರೆದ ಒಂದು ಕತೆ ಆ ಊರಿನ ಪತ್ರಿಕೆಯೊಂದರಲ್ಲಿ ಎರಡು ದಿನಗಳ ಹಿಂದೆ ಪ್ರಕಟವಾಗಿತ್ತು. ‘ಬರೀತೀನಿ... ಹವ್ಯಾಸಕ್ಕಾಗಿ...’ ಎಂದೆ.

ರಾಜಗೋಪಾಲ ಹೇಳಿದ, ‘ನಾನು ಕನ್ನಡ ಕಲಿಯಲೇ ಬೇಕು. ನಮ್ಮ ಶಾಖೆಗೆ ಬರುವ ಹಳ್ಳಿಯ ಜನ ಚೆಕ್ಕನ್ನು ಕನ್ನಡದಲ್ಲಿ ಬರೀತಾರೆ. ಇಂಗ್ಲೀಷಿ ನಲ್ಲಿ ಬರೆಯಬೇಕು ಅಂತ ನಿರೀಕ್ಷೆ ಮಾಡುವ ಹಾಗಿಲ್ಲ, ಎಷ್ಟು ದಿನಾ ಅಂತ ಪಕ್ಕದಲ್ಲಿರುವವರಿಗೆ ತೊಂದರೆ ಕೊಡುವದು, ಇನ್ನು ನಾಲ್ಕು ವರ್ಷ ಗಳಂತೂ ನನಗೆ ತಮಿಳುನಾಡಿಗೆ ವರ್ಗಾವಣೆ ಸಿಗುವದಿಲ್ಲ. ಹಾಗಾಗಿ ಕನ್ನಡ ಕಲಿತರೆ ಒಂದು ಭಾಷೆಯನ್ನು ಕಲಿತಂತಾಗುತ್ತದೆ. ಇಲ್ಲಿನ ವ್ಯವಹಾರಕ್ಕೂ ಅನುಕೂಲವಾಗುತ್ತದೆ. ಸಂಜೆ ನೀನೇ ನನಗೆ ಕನ್ನಡ ಹೇಳಿಕೊಡಬೇಕು ಪ್ಲೀಸ್...’ ಕನ್ನಡ ಕಲಿಯುವ ಅವನ ಉತ್ಸಾಹಕ್ಕೆ ಸಂತಸದಿಂದಲೆ ಸೈ ಎಂದೆ.

ಮಾರನೆಯ ದಿನ ಸಾಯಂಕಾಲ ಮೈಸೂರು ಬ್ಯಾಂಕಿನ ಹತ್ತಿರ ಬಂದಾಗ ರಾಜಗೋಪಾಲ ನನಗಾಗಿ ಕಾದು ನಿಂತಿದ್ದ. ಅವನ ಹೆಗಲಲ್ಲಿ ಒಂದು ಉದ್ದದ ಚೀಲವಿತ್ತು. ಕೈಯ್ಯಲ್ಲಿ ಒಂದು ಸಣ್ಣ ಚೀಲ. ನನ್ನ ರೂಮಿಗೆ ಬಂದವನೆ ಗೋಡೆ ನೋಡಿದ. ‘ಸ್ಮಾಲ್ ಹೋಲ್ ಈಸ್ ದೇರ್...’ ಎನ್ನುತ್ತ ತನ್ನ ಸಣ್ಣ ಚೀಲದಿಂದ ಮೊಳೆ ಮತ್ತು ಸುತ್ತಿಗೆ ತೆಗೆದು, ಮೊದಲೇ ಇದ್ದ ಸಣ್ಣ ತೂತಿನಲ್ಲಿ ಮೊಳೆಯನ್ನು ಹೊಡೆದ. ಸುತ್ತಿಗೆಯನ್ನು ಒಳಗಿಟ್ಟು, ಉದ್ದ ಚೀಲದಿಂದ ಕಪ್ಪನೆಯ ಪಟವನ್ನು ತೆಗೆದು ಮೊಳೆಗೆ ನೇತು ಹಾಕಿದ. ಸಣ್ಣ ಚೀಲದಿಂದ ಮೂರ್ನಾಲ್ಕು ಸೀಮೆ ಸುಣ್ಣ, ಒರೆಸುವ ಬಟ್ಟೆ ಹೊರತೆಗೆದ. ಕನ್ನಡ ಕಲಿಯಲು ಪೂರ್ಣ ತಯಾರಿಯಲ್ಲೆ ಬಂದಿದ್ದ ಆತ.

‘ಗುರುಗಳೆ...’ ಎಂದು ನಮಸ್ಕರಿಸಿ ಕೂತುಕೊಂಡ.

ನಾನು,’ ಅ ಆ ಇ ಈ..’ ಯಿಂದ ಪ್ರಾರಂಭಿಸಿ ಪಟದಲ್ಲಿ ಬರೆಯ ತೊಡಗಿದೆ. ಆತ ತನ್ನ ಪಟ್ಟಿಯಲ್ಲಿ ಅಚ್ಚುಕಟ್ಟಾಗಿ ಬರೆದ. ಅವನು ಬರೆದುದನ್ನು ನೋಡಿ, ಕೆಲವು ತಪ್ಪುಗಳನ್ನು ತಿದ್ದಿಕೊಟ್ಟೆ. ಒಂದು ಗಂಟೆಯ ಪಾಠದ ನಂತರ, ರಾಜಗೋಪಾಲ ಪಟವನ್ನು ಸುರುಳಿ ಸುತ್ತಿ, ಉದ್ದದ ಕೈ ಚೀಲದಲ್ಲಿ ಹಾಕಿಕೊಂಡು ಹೊರಡುವಾಗ ಹೇಳಿದ,’ ಸಾರಿ... ಕೇರಮ್ ಆಟಕ್ಕೆ ತೊಂದರೆ ಮಾಡಿದೆ. ಈಗ ರೂಮಿಗೆ ಹೋಗಿ ಅಭ್ಯಾಸ ಮಾಡ್ತೀನಿ...’

ಆತನ ಪ್ರಯತ್ನ ಯಾವ ರೀತಿಯಿತ್ತೆಂದರೆ, ನಲವತ್ತೈದು ದಿನಗಳಲ್ಲಿ ಕನ್ನಡ ಓದಲು, ಬರೆಯಲು, ವ್ಯವಹಾರಕ್ಕೆ ಅನುಕೂಲವಾಗುವಷ್ಟು ಮಾತನಾಡಲು ಕಲಿತಿದ್ದ! ರಾಜಗೋಪಾಲ ಆರು ಅಡಿ ಎತ್ತರದ ಸಣಕಲು ವ್ಯಕ್ತಿ. ಕಪ್ಪನೆಯ ಬಣ್ಣ ಹೊಂದಿದ್ದರೂ, ಹಲ್ಲುಗಳು ಮಾತ್ರ ಮಿಂಚಿನ ಬಿಳುಪು. ಆತ ಕಪ್ಪಗಿದ್ದುದರಿಂದ ಹಲ್ಲುಗಳು ಅಷ್ಟು ಬಿಳುಪಾಗಿ ಕಾಣುತ್ತಿದ್ದಿರಲೂಬಹುದು. ಆತನ ದಿರಿಸೆಂದರೆ ಅಚ್ಚ ಬಿಳಿಯ ಅಂಗಿ, ಬಿಳಿಯ ಪ್ಯಾಂಟು ಹಾಗೂ ಬಿಳಿಯ ಶೂಗಳು. ಆ ಊರಲ್ಲಿ ನಾನು ಎರಡು ಬೇಸಿಗೆ ಕಳೆದಿದ್ದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆಯಿತ್ತು. ಸಂಜೆ ಏಳು ಗಂಟೆಗೆ ಮುಖ್ಯ ರಸ್ತೆಯ ಹತ್ತಿರ ಒಂದು ಟ್ಯಾಂಕಿಗೆ ನೀರು ಬಿಡುತ್ತಿದ್ದರು. ಆ ಟ್ಯಾಂಕಿಗೆ ಆರು ನಲ್ಲಿಗಳಿದ್ದವು. ಆ ಬಡಾವಣೆಯ ನೂರಾರು ಬಿಂದಿಗೆಗಳು ಸಾಲಾಗಿ ಕೂತಿರುತ್ತಿದ್ದವು. ಆ ಟ್ಯಾಂಕ್ ನನ್ನ ಮತ್ತು ರಾಜಗೋಪಾಲನ ರೂಮುಗಳ ಸಮ ದೂರದಲ್ಲಿತ್ತು. ನಾವು ಮೊದಲೆ ಮಾತಾಡಿಕೊಂಡಂತೆ ರಾತ್ರಿ ಎಂಟು ಗಂಟೆಗೆ ಆ ಟ್ಯಾಂಕಿನ ಬಳಿಗೆ ಹೋಗಿ, ಸರತಿಯ ಸಾಲಲ್ಲಿ ಇಬ್ಬರ ಎರಡೆರಡು ಬಿಂದಿಗೆಗಳನ್ನು ಇಡುತ್ತಿದ್ದೆವು. ನಮ್ಮ ಬಿಂದಿಗೆಗಳು ನಲ್ಲಿಯ ಬಳಿ ಬರಲು ಅರ್ಧ ಗಂಟೆ ಯಾದರೂ ಬೇಕಾಗಿತ್ತು. ಆ ಕಾಯುವ ಸಮಯದಲ್ಲಿ ಪ್ರಾರಂಭವಾಗುತ್ತಿತ್ತು ರಾಜಗೋಪಾಲನ ಭೂತದ ಕತೆಗಳು. ಆತನ ಹಳ್ಳಿಯ ಸುತ್ತ ಇರುವ ದಟ್ಟನೆಯ ಕಾಡುಗಳು, ನೀಲಗಿರಿ ಬೆಟ್ಟದಲ್ಲಿ ಸುರಿವ ಜಡಿ ಮಳೆ, ಬೀಸುವ ಚಳಿ ಗಾಳಿ, ಜೀರುಂಡೆಗಳ ಸದ್ದು, ಕಪ್ಪೆಗಳ ವಟ ವಟ; ಇಂತಹ ಸಮಯದಲ್ಲಿ ರಾತ್ರಿಯ ಹೊತ್ತು ಬಾಲದ ಬಿಳಿ ಮನುಷ್ಯರನ್ನು ಐದಾರು ಸಲವಾದರೂ ನೋಡಿದ್ದಾನಂತೆ ಆತ. ಬೇರೆ ಊರುಗಳಿಗೆ ರಾತ್ರಿ ಹೊತ್ತು ಹೋಗುತ್ತೇವೆಂದು ಪ್ರತ್ಯಕ್ಷವಾಗಿ ಮಾಯವಾಗುವ ಬಿಳಿ ಮಾನವಾಕೃತಿಗಳನ್ನು ಕಂಡಿದ್ದಾನಂತೆ. ಅಂತಹ ವೇಳೆ ರಾಜಗೋಪಾಲ ಆಂಜನೇಯನ ಜಪ ಮಾಡುತ್ತಿದ್ದನಂತೆ. ಹಾಗಾಗಿ ಆ ಭೂತಗಳು ತನಗೇನೂ ಮಾಡಿಲ್ಲವೆಂಬುದು ಆತನ ಗಟ್ಟಿಯಾದ ನಂಬಿಕೆ.

ರಾಜಗೋಪಾಲನ ದಿನನಿತ್ಯದ ಭೂತದ ಕತೆಗಳಲ್ಲಿ ಅಲ್ಲಲ್ಲಿ ತಮಿಳು ಪದಗಳು ನುಸುಳಿದರೂ, ಅವನ ಕಪ್ಪು ಕಾಯ, ಭೂತದ ಕತೆ ಹೇಳುವಾಗಿನ ಅವನ ಮುಖ ಭಾವ, ಕತೆ ಹೇಳುವ ವಿಧಾನಗಳು ನೀರಿಗಾಗಿ ಕಾಯುವ ಹತ್ತಾರು ಜನರನ್ನು ಆಕರ್ಷಿಸಿದ್ದಂತೂ ನಿಜ. ಕಾಯುವ ಜನಕ್ಕೆ ಸಮಯ ಕಳೆಯುವ ಮನರಂಜನೆಯಂತೂ ಇದಾಗಿತ್ತು. ಎರಡು ಬಿಂದಿಗೆ ನೀರು ಹೊತ್ತುಕೊಂಡು ಅರೆಗತ್ತಲಲ್ಲಿ ರೂಮಿನೆಡೆ ನಡೆದು ಬರುವಾಗ, ಭೂತದ ಭಯ ನನಗೆ ಕಾಡುತ್ತಿದ್ದುದು ಸತ್ಯ. ಅದಕ್ಕೇಕೆ ಹೆದರಬೇಕು ಅಂತ ಆಂಜನೇಯನನ್ನು ನೆನೆಯುತ್ತಿದ್ದೆ.

ಬೇಸಿಗೆ ಕಳೆಯಿತು. ಒಂದು ಸಂಜೆ ರಾಜಗೋಪಾಲ ನನ್ನ ರೂಮಿಗೆ ಬಂದಿದ್ದ. ಹರಟೆ ಹೊಡೆಯುತ್ತ ರಾತ್ರಿ ಹತ್ತರವರೆಗೂ ಕೂತಿದ್ದ. ಆಗ ಗುಡುಗು, ಮಿಂಚು ಸಹಿತ ಮಳೆ ಪ್ರಾರಂಭವಾಯಿತು. ನಾನು ಮಾಡಿಟ್ಟಿದ್ದ ಸಾಂಬಾರ್ ಇತ್ತು. ಇಬ್ಬರಿಗೂ ಅನ್ನ ಮಾಡಿದೆ. ಹನ್ನೊಂದು ಗಂಟೆಗೆ ಊಟ ಮುಗಿಸಿದರೂ, ಮಳೆ ನಿಲ್ಲುವ ಲಕ್ಷಣ ಕಾಣಲಿಲ್ಲ.

‘ನಿದ್ದೆ ಬರ್ತಾ ಇದೆ... ಕೊಡೆ ಇದ್ದರೆ ಕೊಡಮ್ಮ...’ಅಂದ ರಾಜಗೋಪಾಲ.

ನನ್ನ ಹತ್ತಿರ ಕೊಡೆ ಇರಲಿಲ್ಲ. ಚಾಪೆ ಹಾಸಿದೆ. ಇಬ್ಬರೂ ಮಲಗಿ ನಿದ್ದೆಗೆ ಜಾರಿದೆವು.

ರಾತ್ರಿ ಸುಮಾರು ಹನ್ನೆರಡೊ, ಹನ್ನೆರಡುವರೆಯೋ ಆಗಿರಬೇಕು. ರೂಮಿನ ಬಾಗಿಲು ಬಡಿದ ಶಬ್ದವಾಯಿತು. ‘ಆಂ...’ ಅಂತ ಕಿರಿಚುತ್ತ ಯಾರೊ ಬಾಗಿಲು ತಟ್ಟುತ್ತಿದ್ದರು. ರಾಜಗೋಪಾಲ ಎದ್ದು ಕೂತು ಹೇಳಿದ,’ ಬಾಗಿಲು ತೆಗೀಬೇಡಮ್ಮ... ಬಾಗಿಲು ಬಡಿದವ ಮಾತೂ ಆಡ್ತಿಲ್ಲ... ಒಂದು ತರಹ ಕಿರಿಚ್ತಾ ಇದ್ದಾನೆ... ಇವತ್ತು ಅಮಾವಾಸ್ಯೆ... ನಂಗೆ ಅನಿಸೊ ಹಾಗೆ ಅದು ದೆವ್ವನೆ...’ ರಾಜಗೋಪಾಲ ಮುಸುಕು ಎಳೆದುಕೊಂಡು ,’ನಾಳೆ ಬಾ...’ ಎಂದ.

ನಾನು ಭಯಗೊಂಡಿದ್ದೆ. ಮಳೆ ಶಬ್ದ ಕೇಳುತ್ತ ಮಲಗಿದೆ. ಸ್ವಲ್ಪ ಹೊತ್ತಿನ ನಂತರ ಬಾಗಿಲು ಬಡಿತ ನಿಂತಿತು.

ಮಾರನೆಯ ದಿನ ಗೊತ್ತಾಗಿದ್ದಿಷ್ಟು. ರಾಜಗೋಪಾಲ ರಾತ್ರಿ ಹನ್ನೆರಡಾದರೂ ಬರದಿದ್ದರಿಂದ, ಹೆಚ್ಚಾಗಿ ಆತ ನನ್ನ ರೂಮಿನಲ್ಲಿರಬಹುದು ಎಂದೆಣಿಸಿ, ಮನೆಯ ಮಾಲೀಕ ಕೊಡೆ ಕೊಟ್ಟು ಅವನ ನೆಂಟನನ್ನು ಕಳಿಸಿದ್ದನಂತೆ. ಆ ನೆಂಟ ಹತ್ತಿರದ ಊರಿನವನಾಗಿದ್ದು, ಆ ನೆಂಟನೊಂದಿಗೆ ನಮ್ಮ ಬ್ಯಾಂಕಿನ ಯಾವುದೋ ಕೆಲಸದ ಬಗ್ಗೆ ಮಾತಾಡಲು ರಾಜಗೋಪಾಲನ ರೂಮಿನ ಮಾಲೀಕ ಎರಡು ಸಲ ನನ್ನ ರೂಮಿಗೆ ಬಂದಿದ್ದ. ಆ ನೆಂಟ ಮೂಕ. ನಮ್ಮ ಹೆಸರು ಕೂಗಲಾಗದೆ, ವಿಚಿತ್ರವಾಗಿ ಕಿರುಚಿ ನಮಗೆ ಭೂತದ ಭಯ ಹುಟ್ಟಿಸಿದ್ದ. ಮಾಲೀಕನ ಆ ನೆಂಟನನ್ನು ರಾಜಗೋಪಾಲ ಇನ್ನೂ ನೋಡಿರದೆ ಇದ್ದ ಕಾರಣ, ಯಾರು ಬಂದಿರಬಹುದೆಂಬ ಕಲ್ಪನೆ ಆತನಿಗೆ ಇರಲಿಲ್ಲ. ಅಂತೂ, ಅಮವಾಸ್ಯೆ ದೆವ್ವದ ಕತೆಯನ್ನು ಹೇಳಿ ನಕ್ಕಿದರೂ, ಕತೆ ಹಲವರ ಬಾಯಲ್ಲಿ ಕೆಲ ದಿನ ಇತ್ತು.

* * * * *

ನಾನು ಬೆಂಗಳೂರಿಗೆ ವರ್ಗಾವಣೆಗೊಂಡೆ. ರಾಜಗೋಪಾಲ ಮೊದಲೆ ಕಾಗದ ಬರೆದು ಒಮ್ಮೆ ನನ್ನ ರೂಮಿಗೆ ಬಂದ. ಆತನಿಗೆ ಒಂದು ವಾರದ ಬ್ಯಾಂಕ್ ತರಬೇತಿ ಇತ್ತು. ತರಬೇತಿಯ ಸ್ಥಳ ನನ್ನ ರೂಮಿಗೆ ಹತ್ತಿರವಿತ್ತು.

ಆಗ ನಾನು ಕೊಳಲು ಕಲಿಯುತ್ತಿದ್ದೆ. ಭಾನುವಾರ ಗುರುಗಳಲ್ಲಿಗೆ ಹೋಗುತ್ತಿದ್ದೆ ಮತ್ತು ದಿನಾ ಸಾಯಂಕಾಲ ರೂಮಿನಲ್ಲಿ ಅಭ್ಯಾಸ ಮಾಡುತ್ತಿದ್ದೆ.

ರಾಜಗೋಪಾಲ ಮೊದಲ ದಿನದ ತರಬೇತಿ ಮುಗಿಸಿಕೊಂಡು ಬಂದು ಹೇಳಿದ, ‘ಭಾಷಣ ಕೇಳಿ-ಕೇಳಿ ಸುಸ್ತಾಗಿದೆಯಮ್ಮ... ಸ್ವಲ್ಪ ಹೊತ್ತು ಮಲಗ್ತೀನಿ... ನೀನು ಕೊಳಲು ಅಭ್ಯಾಸ ಮಾಡು...’

ಆತ ಮಲಗಿ ಹತ್ತು ನಿಮಿಷಕ್ಕೆ ಸಣ್ಣದಾಗಿ ಗೊರಕೆ ಹೊಡೆಯಲು ಶುರುಮಾಡಿದ. ಅವನಿಗೆ ತೊಂದರೆ ಆಗಬಾರದು ಅಂತ ಶೃತಿ ಪೆಟ್ಟಿಗೆ ಆರಿಸಿ, ಅಭ್ಯಾಸ ನಿಲ್ಲಿಸಿದೆ.

ರಾಜಗೋಪಾಲ ತಕ್ಷಣ ಎದ್ದು ಕೂತು ಹೇಳಿದ, ‘ಯಾಕೆ ನಿಲ್ಲಿಸಿಬಿಟ್ಟೆಯಮ್ಮ... ಚೆನ್ನಾಗಿ ನಿದ್ದೆ ಬರ್ತಾ ಇತ್ತು.. ನೀನು ಊದೋದು ನಿಲ್ಸಿದ್ದಕ್ಕೆ ಎಚ್ಚರ ಆಗೋಯ್ತು... ನಿನ್ನ ಅಭ್ಯಾಸ ಮುಂದುವರೆಸು, ನಾನು ನಿದ್ದೆ ಮಾಡ್ತೀನಿ’ ನನ್ನ ಕೊಳಲು ವಾದನಕ್ಕೆ ನಿದ್ದೆ ಬರಿಸುವ ಶಕ್ತಿ ಇದೆ ಅಂತ ಅಂದೇ ನನಗೆ ತಿಳಿದಿದ್ದು!

? ನರಸಿಂಹ ಹೆಗಡೆ

(ನಿವೃತ್ತ ಬ್ಯಾಂಕ್ ಉದ್ಯೋಗಿ)

ಬೆಂಗಳೂರು. ಮೊ : 9449060077