ಕೂಡಿಗೆ, ನ. 19: ನಬಾರ್ಡ್ (ಐಆರ್‍ಎಫ್) ವತಿಯಿಂದ ಹಾರಂಗಿಯಲ್ಲಿರುವ ಮೀನು ಸಾಕಾಣಿಕ ಕೇಂದ್ರದಲ್ಲಿ ನೂತನವಾಗಿ ಎರಡು ಎಕರೆ ಪ್ರದೇಶದಲ್ಲಿ ರೂ. 2 ಕೋಟಿ ವೆಚ್ಚದ ಮೀನು ಸಾಕಾಣಿಕ ತೊಟ್ಟಿ ನಿರ್ಮಾಣ ಕಾಮಗಾರಿಗೆ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಭೂಮಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು, ಜಿಲ್ಲೆಯಲ್ಲೆ ಹೆಚ್ಚು ಮೀನು ಸಾಕಾಣಿಕೆ ಮಾಡಲು ಹಾರಂಗಿಯಲ್ಲಿ ಸ್ಥಳಾವಕಾಶವಿದ್ದು, ಮಹಾಶೀರ್ ಮತ್ತು ಉತ್ತಮ ತಳಿಗಳ ಮೀನುಮರಿಗಳನ್ನು ಸಾಕಾಣಿಕೆ ಮಾಡಲು ಅನುಕೂಲವಾಗಿದೆ ಎಂದರು.

ಈ ಸಂದರ್ಭ ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ಕೂಡುಮಂಗಳೂರು ಗ್ರಾ.ಪಂ. ಸದಸ್ಯ ಭಾಸ್ಕರ್‍ನಾಯಕ್, ಜಿಲ್ಲಾ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ್, ಹಾರಂಗಿ ಮೀನುಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಸಚಿನ್, ಕೂಡುಮಂಗಳೂರು ಸಹಕಾರ ಬ್ಯಾಂಕಿನ ನಿರ್ದೇಶಕ ಕೆ.ಕೆ. ಭೋಗಪ್ಪ, ಭೂಸೇನಾ ನಿಗಮದ ಕಾರ್ಯಪಾಲಕ ಅಭಿಯಂತರ ಪಾಂಡುರಂಗ, ರಮೇಶ್, ಸಹಾಯಕ ಅಭಿಯಂತರ ಬಸವರಾಜ್, ಅಭಿಯಂತರ ಪ್ರಮೋದ್ ಸೇರಿದಂತೆ ಪ್ರಮುಖರಾದ ಭರತ್ ಮಾಚಯ್ಯ, ಗಿರೀಶ್, ಮಂಜು, ಕೃಷ್ಣ ಮೊದಲಾದವರು ಇದ್ದರು.

ಮೀನುಗಳನ್ನು ನದಿಗೆ ಬಿಟ್ಟ ಶಾಸಕರು

ಮೀನುಗಾರಿಕಾ ಇಲಾಖೆಯ ವತಿಯಿಂದ ಮಹಶೀರ್ ಮೀನುಗಳ ಸಂರಕ್ಷಣೆಯನ್ನು ಮಾಡುವ ಹಾಗೂ ಮೀನುಗಳ ಸಂತತಿಯನ್ನು ಹೆಚ್ಚಿಸುವ ದೃಷ್ಟಿಯಿಂದ ಮಹಶೀರ್ ಸಂರಕ್ಷಿತ ಪ್ರದೇಶವಾದ ಹಾರಂಗಿ ಅಣೆಕಟ್ಟೆಯಿಂದ ಕೂಡಿಗೆ ಸೇತುವೆಯವರೆಗೆ ಸುಮಾರು 5 ಕಿ.ಮೀ ಹಾರಂಗಿ ನದಿಗೆ ಇಂದು ಸುಮಾರು 10000 ಮಹಶೀರ್ ಮೀನುಗಳನ್ನು ಬಿಡಲಾಯಿತು.

ಮಡಿಕೇರಿ ಕ್ಷೇತ್ರದ ಶಾಸಕರಾದ ಎಂ.ಪಿ. ಅಪ್ಪಚ್ಚುರಂಜನ್ ಅವರು ಮಹಶೀರ್ ಮೀನು ಮರಿಗಳನ್ನು ಹಾರಂಗಿ ನದಿಗೆ ಬಿಟ್ಟರು. ಅಳಿವಿನಂಚಿನಲ್ಲಿರುವ ಮಹಶೀರ್ ಮೀನುಗಳನ್ನು ಹೆಚ್ಚಿಸಲು ಮೀನುಮರಿಗಳನ್ನು ನದಿಗೆ ಬಿಡಲಾಗುತ್ತಿದೆ. ಈ ಮಹಶೀರ್ ಮೀನುಗಳು ಇರುವ ಸ್ಥಳವೂ ಕೂಡ ಸ್ವಚ್ಛವಾಗಿರುತ್ತದೆ. ಮೀನುಮರಿಗಳನ್ನು ಸಂರಕ್ಷಿಸುವ ಹಿತದೃಷ್ಟಿಯಿಂದ ಹಾರಂಗಿಯಿಂದ ಕೂಡಿಗೆಯವರೆಗೆ ನದಿಯಲ್ಲಿ ಮೀನು ಹಿಡಿಯುವದನ್ನು ನಿಷೇಧಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು. ಮೀನುಗಳನ್ನು ಹಿಡಿಯದಂತೆ ಸೂಚನಾ ಫಲಕಗಳನ್ನು ಅಳವಡಿಸಿದ್ದು, ಎಚ್ಚರಿಕೆಯನ್ನು ನೀಡಲಾಗಿದೆ ಎಂದರು.