ಮಡಿಕೇರಿ, ನ. 18: ಕಳೆದ ವರ್ಷ ಕೊಡಗಿನಲ್ಲಿ ಸಂಭವಿಸಿದ ಜಲಸ್ಫೋಟ ಹಾಗೂ ಭೂಕುಸಿತ ದಿಂದ ಸಂಕಷ್ಟದಲ್ಲಿ ಸಿಲುಕಿದ್ದ ಕೊಡಗಿನ ಜನತೆಯ ದುಸ್ಥಿತಿ ಕಂಡು ಮರುಗಿರುವ, ಪೊಲೀಸ್ ಸಿಬ್ಬಂದಿ ಯೊಬ್ಬರ ಇಬ್ಬರು ಪುಟ್ಟ ಮಕ್ಕಳು ಸ್ವಯಂ ಪ್ರೇರಣೆಯಿಂದ ನಿಧಿ ಸಂಗ್ರಹಿಸಿ ನೆರವಿನ ಹಸ್ತ ಚಾಚಿರುವ ಸನ್ನಿವೇಶವೊಂದು ತಡವಾಗಿ ಬೆಳಕಿಗೆ ಬಂದಿದೆ.ದಾವಣಗೆರೆ ದಕ್ಷಿಣ ವಿಭಾಗದ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಹೇಮಣ್ಣ, ಮಾಧ್ಯಮಗಳಲ್ಲಿ ಅಂದಿನ ಕೊಡಗಿನ ಪರಿಸ್ಥಿತಿ ಬಗ್ಗೆ ಸುದ್ದಿ ಬಿತ್ತಾರಗೊಂಡಿದ್ದನ್ನು ಗಮನಿಸುತ್ತಾ, ತಮಗೇ ಅರಿವಿಲ್ಲದೆ ಕಂಗಳಲ್ಲಿ ಅಶ್ರುಧಾರೆ ತೊಟ್ಟಿಕ್ಕುತ್ತಿತ್ತಂತೆ.ತಂದೆಯ ಕಣ್ಣುಗಳಿಂದ ನೀರು ತೊಟ್ಟಿಕ್ಕಿದ್ದನ್ನು ಗಮನಿಸಿದ್ದ ಅವರ ಮಗ; ಈಗ ಐದನೇ ತರಗತಿ ಓದುತ್ತಿರುವ ಹರ್ಷ ಕಣ್ಣೀರಿಗೆ ಕಾರಣ ವಿಚಾರಿಸಿದ್ದಾನೆ. ಆ ವೇಳೆ ಹೇಮಣ್ಣ ಪುಟ್ಟ ಮಗನೊಂದಿಗೆ ಕೊಡಗಿನ ಸ್ಥಿತಿಯನ್ನು ನೆನಪಿಸುತ್ತಾರೆ.ದಾವಣಗೆರೆಯ ನಿಟ್ಟುವಳ್ಳಿ ರಾಷ್ಟ್ರೋತ್ಥಾನ ಶಾಲೆಯಲ್ಲಿ, ಅಂದು ನಾಲ್ಕನೇ ತರಗತಿ ವಿದ್ಯಾರ್ಥಿ ಯಾಗಿದ್ದ ಹರ್ಷ, ತನ್ನ ತಂದೆ ನಿತ್ಯ ಕರ್ತವ್ಯ ನಿರ್ವಹಿಸುತ್ತಿದ್ದ ಅಲ್ಲಿನ ಅರುಣಾ ವೃತ್ತದಲ್ಲಿ ಸಾರ್ವಜನಿಕ ವಂತಿಗೆ ಸಂಗ್ರಹಿಸಿ ಕೊಡಗಿನ ಸಂತ್ರಸ್ತರಿಗೆ ನೀಡಲು ಪ್ರಸ್ತಾಪಿಸುತ್ತಾನೆ.
ಹರ್ಷನೊಂದಿಗೆ ಈತನ ಕಿರಿಯ ಸಹೋದರ 2ನೇ ತರಗತಿಯ ವೈಭವ್ ಕೂಡ ಧಾವಿಸಿ ಸಂತ್ರಸ್ತರಿಗಾಗಿ ಜನತೆ ಬಳಿ ಬೇಡಿಕೆ ಇಡುತ್ತಾನೆ. ಹೀಗೆ ಈ ಪುಟಾಣಿಗಳು ರೂ. 25,400
(ಮೊದಲ ಪುಟದಿಂದ) ಮೊತ್ತ ಸಂಗ್ರಹಿಸಿ, ತಂದೆಯ ಸಲಹೆಯಂತೆ ಅಲ್ಲಿನ ಪೊಲೀಸ್ ಅಧೀಕ್ಷಕರಾಗಿದ್ದ ಚೇತನ್ ಮುಖಾಂತರ ಕರ್ನಾಟಕ ಮುಖ್ಯಮಂತ್ರಿಗಳ ಕೊಡಗು ಪರಿಹಾರ ನಿಧಿಗೆ ರವಾನಿಸುತ್ತಾರೆ. ಈ ಬಗ್ಗೆ ಮುಖ್ಯಮಂತ್ರಿಗಳಿಂದಲೂ ಪ್ರಶಂಸ ಪತ್ರ ಪಡೆದಿದ್ದಾರೆ.
ಅದೇ ರೀತಿ ಈ ಬಾರಿ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತದಲ್ಲೂ ಈ ಸಹೋದರರು ರೂ. ಒಂದು ಸಾವಿರ ನೆರವು ನೀಡಿ, ಅಲ್ಲಿನ ಜನತೆಯಿಂದ ಶಹಬಾಸ್‍ಗಿರಿ ಪಡೆದಿದ್ದಾರೆ. ಒಟ್ಟಿನಲ್ಲಿ ದಾವಣಗೆರೆಯ ಈ ಪೊಲೀಸಪ್ಪನ ಮಕ್ಕಳಂತೆ ಅದೆಷ್ಟೋ ಮಂದಿ ಎಲೆಮರೆಯ ಕಾಯಿಗಳಂತೆ ಅಂದು ಕೊಡಗಿನ ಜನತೆಯ ಕಣ್ಣೀರು ಒರೆಸುವಲ್ಲಿ ಮಿಡಿದಿರುವದು ವರ್ಣನೆಗೂ ನಿಲುಕದ ಸ್ಪಂದನವೇ ಸರಿ... -ಸಂ