ಮಡಿಕೇರಿ, ನ. 18: ಮಡಿಕೇರಿಯ ಅಶ್ವಿನಿ ಆಸ್ಪತ್ರೆಯಲ್ಲಿ 5 ದಿನಗಳ 43ನೇ ವಾರ್ಷಿಕೋತ್ಸವದ ಪ್ರಯುಕ್ತ ನಡೆದ 31ನೇ ವರ್ಷದ ಉಚಿತ ನೇತ್ರ ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರದ ಸಮಾರೋಪ ಸಮಾರಂಭವು ನಿನ್ನೆ ಸಂಜೆ ನಡೆಯಿತು.
ಆಸ್ಪತ್ರೆಯ ವಿಶ್ವಸ್ಥ ಟಿ.ಆರ್. ಶೆಣೈ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಅಂಧತ್ವ ನಿವಾರಣಾ ಸಂಸ್ಥೆಯ ಮುಖ್ಯಸ್ಥ ಡಾ. ಆನಂದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಆಸ್ಪತ್ರೆಯ ವಿಶ್ವಸ್ಥರು ಮತ್ತು ಸಹಕಾರ್ಯದರ್ಶಿ ಡಿ.ಹೆ.ಚ್. ತಮ್ಮಪ್ಪ ಸ್ವಾಗತಿಸಿದರು.
ಅಶ್ವಿನಿ ಆಸ್ಪತ್ರೆಯ ವಿಶ್ವಸ್ಥರು ಹಾಗೂ ಖಚಾಂಜಿ ಎಂ.ಸಿ. ಗೋಖಲೆ ನೇತ್ರ ಚಿಕಿತ್ಸಾ ವರದಿಯನ್ನು ನೀಡಿದರು. ಕಳೆದ 30 ವರ್ಷಗಳಿಂದ ನಡೆಯುತ್ತಿರುವ ಶಿಬಿರದ ಸಂಕ್ಷಿಪ್ತ ವರದಿಯನ್ನು ಸಲ್ಲಿಸಿ ಈ ಬಾರಿ ನಡೆದ 31ನೇ ಶಿಬಿರದಲ್ಲಿ 55ಹಳ್ಳಿಗಳಲ್ಲಿ ವೈದ್ಯರ ತಂಡವು ಪ್ರಾಥಮಿಕ ಪರೀಕ್ಷೆ ಮಾಡಿ ರೋಗಿಗಳನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಯಿತು. ಅಂತಿಮವಾಗಿ 139 ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ತಿಳಿಸಿದರು.
ಅತಿಥಿಗಳಾಗಿ ಆಗಮಿಸಿದ ರೋ. ಜಗದೀಶ, ಪ್ರಶಾಂತ್, ಮಿಸ್ಟಿಹಿಲ್ಸ್‍ನ ಮೋಹನ್ ಕುಮಾರ್, ರೋ. ಚೀಯಣ್ಣ ಮಾತನಾಡಿ, ತಮ್ಮ ಸಂಸ್ಥೆಯ ಸಹಾಯ ಹಸ್ತವನ್ನು ಇನ್ನು ಮುಂದೆಯೂ ಮುಂದುವರಿಸುವದಾಗಿ ಆಶ್ವಾಸನೆ ಕೊಟ್ಟರು. ಶಿಬಿರದಲ್ಲಿ ಭಾಗವಹಿಸಿದ ಫಲಾನುಭವಿಗಳು ತಮ್ಮ ಅನುಭವವನ್ನು ವಿವರಿಸಿದರು.
ಮುಖ್ಯ ಅತಿಥಿ ಡಾ. ಆನಂದ ಅವರು ಆಸ್ಪತ್ರೆಯು 31 ವರ್ಷಗಳಿಂದ ಮಾಡುತ್ತಿರುವ ಉತ್ತಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ವಂದನಾರ್ಪಣೆಯನ್ನು ಡಾ. ಕುಲಕರ್ಣಿ ನೆರವೇರಿಸಿದರು.