ಗೋಣಿಕೊಪ್ಪ ವರದಿ, ನ. 17: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ಆಯೋಜಿಸಿದ್ದ ಕೋದಂಡ ಎ. ಪೂವಯ್ಯ ಜ್ಞಾಪಕಾರ್ಥ ಪ್ರಾಥಮಿಕ, ಪ್ರೌಢ ಬಾಲಕ, ಬಾಲಕಿಯರ ಹಾಕಿ ಟೂರ್ನಿಯಲ್ಲಿ ತಲಾ ಆರು ತಂಡಗಳು ಚಾಂಪಿಯನ್, ರನ್ನರ್ ಅಪ್ ಸ್ಥಾನ ಪಟ್ಟ ಅಲಂಕರಿಸಿವೆ.

ಪ್ರಾಥಮಿಕ ಬಾಲಕ, ಬಾಲಕಿಯರ ಎರಡು ವಿಭಾಗದಲ್ಲಿ ಗೋಣಿಕೊಪ್ಪ ಲಯನ್ಸ್ ಚಾಂಪಿಯನ್, ಬಾಲಕರಲ್ಲಿ ಪೊನ್ನಂಪೇಟೆ ಸೆಂಟ್ ಆಂಥೋನಿ ರನ್ನರ್ ಅಪ್, ಬಾಲಕಿಯರಲ್ಲಿ ಚಿನ್ಮಯಾಸ್ ವಿದ್ಯಾಲಯ ರನ್ನರ್ ಅಪ್, ಪ್ರೌಢ ಬಾಲಕರಲ್ಲಿ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಚಾಂಪಿಯನ್, ಪೊನ್ನಂಪೇಟೆ ಸೆಂಟ್ ಆಂಥೋನಿ ರನ್ನರ್ ಅಪ್, ಬಾಲಕಿಯರಲ್ಲಿ ಚಿನ್ಮಯಾಸ್ ವಿದ್ಯಾಲಯ ಚಾಂಪಿಯನ್, ಗೋಣಿಕೊಪ್ಪ ಲಯನ್ಸ್ ರನ್ನರ್ ಅಪ್, ಕ್ರೀಡಾ ವಸತಿ ಶಾಲೆ ವಿಭಾಗದ ಬಾಲಕ, ಬಾಲಕಿಯರಲ್ಲಿ ಪೊನ್ನಂಪೇಟೆ ವಸತಿ ಶಾಲೆ ಚಾಂಪಿಯನ್, ಕೂಡಿಗೆ ವಸತಿ ಶಾಲಾ ರನ್ನರ್ ಅಪ್ ಸ್ಥಾನ ಅಲಂಕರಿಸಿತು.

ಫಲಿತಾಂಶ: ಪ್ರಾಥಮಿಕ ಬಾಲಕ, ಬಾಲಕಿಯರ ಎರಡು ವಿಭಾಗದಲ್ಲೂ ಗೋಣಿಕೊಪ್ಪ ಲಯನ್ಸ್ ಚಾಂಪಿ ಯನ್ ಪಟ್ಟ ಅಲಂಕರಿಸಿತು. ಲೀಗ್ ಮಾದರಿಯಲ್ಲಿ ನಡೆದ ಪ್ರಾಥಮಿಕ ಬಾಲಕಿಯರ ಟೂರ್ನಿಯಲ್ಲಿ ಹೆಚ್ಚು ಅಂಕ ಪಡೆದ ಗೋಣಿಕೊಪ್ಪ ಲಯನ್ಸ್ ಶಾಲಾ ತಂಡ ಚಾಂಪಿಯನ್, ಚಿನ್ಮಯಾಸ್ ವಿದ್ಯಾಲಯ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಬಾಲಕರಲ್ಲಿ ಗೋಣಿಕೊಪ್ಪ ಲಯನ್ಸ್ ತಂಡ ಚಾಂಪಿಯನ್, ಪೊನ್ನಂಪೇಟೆ ಸೆಂಟ್ ಆಂಥೋನಿ ರನ್ನರ್ ಅಪ್ ಸ್ಥಾನ ಅಲಂಕರಿಸಿತು. ಲಯನ್ಸ್ ತಂಡವು 4-2 ಗೋಲು ಗಳಿಂದ ಜಯಿಸಿತು. ಲಯನ್ಸ್ ಪರ 16, 19, 20ನೇ

(ಮೊದಲ ಪುಟದಿಂದ) ನಿಮಿಷಗಳಲ್ಲಿ ಆಕಾಶ್ 3 ಗೋಲು, 29ನೇ ನಿಮಿಷದಲ್ಲಿ ರಜಹ್, ಆಂಥೋನಿ ಪರ 10ರಲ್ಲಿ ಕುಶಾಲ್, 24 ರಲ್ಲಿ ಅಖಿಲ್ ತಲಾ ಒಂದೊಂದು ಗೋಲು ಹೊಡೆದರು.

ಪ್ರೌಢ ಬಾಲಕರಲ್ಲಿ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ತಂಡ ಪೊನ್ನಂಪೇಟೆ ಸೆಂಟ್ ಆಂಥೋನಿ ತಂಡವನ್ನು ಟೈಬ್ರೇಕರ್‍ನಲ್ಲಿ 4-3 ಗೋಲು ಗಳಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. 1-1 ಗೋಲುಗಳ ಟೈ ಫಲಿತಾಂಶ ನೀಡಿತು. ಪಬ್ಲಿಕ್ ಶಾಲೆ ಪರ 36ನೇ ನಿಮಿಷದಲ್ಲಿ ಭೀಮಯ್ಯ, ಆಂಥೋನಿ ಪರ 22ನೇ ನಿಮಿಷದಲ್ಲಿ ವಚನ್ ಒಂದೊಂದು ಗೋಲು ಹೊಡೆದರು. ಟೈಬ್ರೇಕರ್‍ನಲ್ಲಿ ಪಬ್ಲಿಕ್ ಪರ ಮೌರ್ಯ ತಿಮ್ಮಯ್ಯ, ದೃವಿನ್, ನಿಶಿಕ್, ಆಂಥೋನಿ ಪರ ಬಿಪಿನ್, ನಂಜುಂಡ ಗೋಲು ಹೊಡೆದರು.

ಬಾಲಕಿಯರಲ್ಲಿ ಚಿನ್ಮಯಾಸ್ ವಿದ್ಯಾಲಯವು ಗೋಣಿಕೊಪ್ಪ ಲಯನ್ಸ್ ತಂಡವನ್ನು 2-0 ಗೋಲುಗಳಿಂದ ಮಣಿಸಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡಿತು. ಚಿನ್ಮಯಾಸ್ ಪರ 2ನೇ ನಿಮಿಷದಲ್ಲಿ ಎಸ್. ರಿಯುತು, 22ರಲ್ಲಿ ಶ್ರೇಯಾ ಗೋಲು ಹೊಡೆದರು.

ಕ್ರೀಡಾ ಶಾಲೆ ಬಾಲಕ, ಬಾಲಕಿಯರ ವಿಭಾಗದಲ್ಲಿ ಪೊನ್ನಂಪೇಟೆ ವಸತಿ ಶಾಲೆ ತಂಡ ಕೂಡಿಗೆ ವಸತಿ ಶಾಲಾ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಬಾಲಕರ ವಿಭಾಗದಲ್ಲಿ ಪೊನ್ನಂಪೇಟೆ ಕೂಡಿಗೆ ತಂಡವನ್ನು 4-1 ಗೋಲುಗಳಿಂದ ಸೋಲಿಸಿತು. ಪೊನ್ನಂಪೇಟೆ ಪರ 44, 47ನೇ ನಿಮಿಷಗಳಲ್ಲಿ ಬಿ.ಆರ್. ಬಿಪಿನ್ 2 ಗೋಲು, 3ರಲ್ಲಿ ವಚನ್, 13ರಲ್ಲಿ ದೃವಿನ್, ಕೂಡಿಗೆ ಪರ 8ರಲ್ಲಿ ಕೆ.ಜಿ. ಪವನ್ ತಲಾ ಒಂದೊಂದು ಗೋಲು ಹೊಡೆದರು.

ಬಾಲಕಿಯರ ತಂಡ 3-0 ಗೋಲುಗಳಿಂದ ಕೂಡಿಗೆ ತಂಡವನ್ನು ಮಣಿಸಿತು. ಪೊನ್ನಂಪೇಟೆ ಪರ 6 ನೇ ನಿಮಿಷದಲ್ಲಿ ತುಷಾರಾ, 33ರಲ್ಲಿ ನಿಸರ್ಗ, 35ನೇ ನಿಮಿಷದಲ್ಲಿ ಕೀರ್ತನಾ ಗೋಲು ಹೊಡೆದರು.

ಬಹುಮಾನ ವಿತರಣೆ: ಸಂಜೆ ನಡೆದ ಸಮಾರೋಪದಲ್ಲಿ ದಾನಿಗಳಾದ ಕೋದಂಡ ಪಿ. ಅಪ್ಪಣ್ಣ, ಕೋದಂಡ ಪಿ. ಚಂಗಪ್ಪ, ಸಿ.ಪಿ. ಮುದ್ದಪ್ಪ, ಸಿ.ಪಿ. ಮೇದಪ್ಪ ಪಾಲ್ಗೊಂಡು ಬಹುಮಾನ ವಿತರಿಸಿದರು. ಹಾಕಿಕೂರ್ಗ್ ಕಾರ್ಯದರ್ಶಿ ಬುಟ್ಟಿಯಂಡ ಚಂಗಪ್ಪ, ಪ್ರಮುಖರಾದ ಕೊಕ್ಕಂಡ ರೋಶನ್, ನೆಲ್ಲಮಕ್ಕಡ ಪವನ್ ಇದ್ದರು.

-ಸುದ್ದಿಮನೆ