ಮಡಿಕೇರಿ, ನ. 17: ಜಿಲ್ಲೆಯಲ್ಲಿ ಸಂಭವಿಸಿದ ನೆರೆ ಹಾಗೂ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಸಮಾಜ ಬಾಂಧವರಿಗೆ ಕೊಡಗು ಜಿಲ್ಲಾ ಮರಾಠ/ಮರಾಠಿ ಸಮಾಜ ಸೇವಾ ಸಂಘದ ವತಿಯಿಂದ ನೀಡಲಾದ ಪರಿಹಾರದ ಚೆಕ್‍ನ್ನು ಶಾಸಕ ಕೆ.ಜಿ.ಬೋಪಯ್ಯ ವಿತರಣೆ ಮಾಡಿದರು.
ಮಡಿಕೇರಿಯ ತಾಳತ್ತ್‍ಮನೆ ಯಲ್ಲಿರುವ ಸಂಘದ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, 2018-19ರಲ್ಲಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜಿಲ್ಲೆಯ ಜನತೆ ಮನೆ, ಆಸ್ತಿ, ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಬಂಧ ಸರ್ಕಾರದಿಂದ ಕನಿಷ್ಟ ಸೌಲಭ್ಯವನ್ನು ತಕ್ಷಣ ಮಾಡಲಾಗಿದೆ. ಆದರೆ ಇನ್ನು ಕೆಲವರಿಗೆ ಮನೆ ಸಿಕ್ಕಿಲ್ಲ. ಕೆಲವರಿಗೆ ಸಿಕ್ಕಿದೆ. ಮದೆನಾಡಿನಲ್ಲಿ 80 ಮನೆಗಳು ನಿರ್ಮಾಣವಾಗುತ್ತಿದೆ. ಪ್ರತಿಯೊಬ್ಬರು ಸ್ವಾಭಿಮಾನಿ ಹಾಗೂ ಸ್ವಾವಲಂಭಿ ಯಾಗಿ ಬದುಕಲು ಶಾಶ್ವತ ಮನೆ ಬೇಕಾಗಿದೆ. ಅದಕ್ಕೆ ಪೂರಕವಾಗಿ ಸ್ಪಂದಿಸುವ ಕೆಲಸ ಸರ್ಕಾರದಿಂದ ಆಗುತ್ತಿದೆ. ಈ ನಿಟ್ಟಿನಲ್ಲಿ ಕಾಟಕೇರಿ, ತಾಳತ್‍ಮನೆ, ಮೊಣ್ಣಂಗೇರಿ ವ್ಯಾಪ್ತಿಯಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನೀಡುವದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದರು.
ಅನುದಾನದ ಭರವಸೆ: ಇಂದು ನಮ್ಮದೇ ಸರ್ಕಾರವಿದೆ. ಆದರೆ ಪ್ರಸಕ್ತ ವರ್ಷದಲ್ಲಿ 22 ಜಿಲ್ಲೆಗಳು ಅತಿವೃಷ್ಠಿಗೆ ಒಳಗಾಗಿದೆ. ಬೇರೆ ಜಿಲ್ಲೆಗೆ ಹೋಲಿಸಿದರೆ ನಮ್ಮ ಜಿಲ್ಲೆ ಏನೇನು ಅಲ್ಲ. ಇವೆಲ್ಲವನ್ನು ಸುದಾರಿಸಿಕೊಂಡು ಸಂಘದ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ನನ್ನ ಹಾಗೂ ಸರ್ಕಾರದಿಂದ ಅನುದಾನವನ್ನು ನೀಡುವ ವ್ಯವಸ್ಥೆ ಮಾಡುತ್ತೇನೆ. ಎಂದು ಭರವಸೆ ನೀಡಿದರು.
ಮದೆ ಗ್ರಾ.ಪಂ ಸದಸ್ಯ ಗಿರೀಶ್ ತಾಳತ್‍ಮನೆ ಮಾತನಾಡಿ, ಪ್ರಕೃತಿ ಮುಂದೆ ನಾವು ಏನೇನು ಅಲ್ಲ ಎಂಬದಕ್ಕೆ ಕಳೆದ ಹಾಗೂ ಪ್ರಸಕ್ತ ವರ್ಷದ ಘಟನೆಯೇ ಸಾಕ್ಷಿ. ಈ ಸಂದರ್ಭದಲ್ಲಿ ಸಾಕಷ್ಟು ಪ್ರಾಣ ಹಾನಿ, ಮನೆ ಕುಸಿತ ಸಂಭವಿಸಿತ್ತು. ಮೊದಲ ಪಟ್ಟಿಲ್ಲಿರುವ ಸಂತ್ರಸ್ತರಿಗೆ ಮದೆನಾಡು ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಮನೆಯನ್ನು ಹಸ್ತಾಂತರ ನಡೆಯಲಿದೆ. ಅದರಂತೆ 2ನೇ ಪಟ್ಟಿಯಲ್ಲಿರುವ ಸಂತ್ರಸ್ತರಿಗೂ ಆದಷ್ಟುಬೇಗ ಮನೆ ಹಸ್ತಾಂತರ ಮಾಡಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಭೂಮಿಯ ಮೌಲ್ಯ ಏರುತ್ತಿರುವ ಇಂದಿನ ದಿನದಲ್ಲಿ ಸಂಘದ ನಿವೇಶನಕ್ಕೆ ಹಿರಿಯರು ಅಂದು ನೀಡಿರುವದು ದೊಡ್ಡ ಕೊಡುಗೆಯಾಗಿದೆ. ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಸಂಘದ ಪದಾಧಿಕಾರಿ ಗಳು ಮಾಡಬೇಕು. ಮುಂದಿನ ದಿನಗಳಲ್ಲಿ ಪಂಚಾಯಿತಿ ವತಿಯಿಂದ ನೀಡಲಾಗುವ ಸೌಲಭ್ಯವನ್ನು ನೀಡಲಾಗುವದು ಎಂದು ಭರವಸೆ ನೀಡಿದರು.
52 ಸಂತ್ರಸ್ತರಿಗೆ ಪರಿಹಾರ: ಸಂಪೂರ್ಣ ಮನೆ ಹಾನಿಗೊಳಗಾದ 20 ಸಂತ್ರಸ್ತರು ಹಾಗೂ ಭಾಗಶಃ ಹಾನಿಗೊಳಗಾದ 32 ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯೆ ಯಾಲಾದಾಳು ಪದ್ಮಾವತಿ, ಸಂಘದ ಅಧ್ಯಕ್ಷ ಎಂ.ಎಂ.ಪರಮೇಶ್ವರ್, ಉಪಾಧ್ಯಕ್ಷೆ ದೇವಕ್ಕಿ ಜಿ.ಆರ್.ನಾಯ್ಕ್, ಕಟ್ಟಡ ಸಮಿತಿ ಅಧ್ಯಕ್ಷ ಎಂ.ಟಿ. ಗುರುವಪ್ಪ, ಉಪಾಧ್ಯಕ್ಷ ಎಂ.ಎಸ್. ಮಂಜುನಾಥ್, ಕಾರ್ಯದರ್ಶಿ ಎಂ.ಟಿ.ಪವನ್, ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಅಧ್ಯಕ್ಷ ಎಂ.ಎಸ್.ದಿವ್ಯಕುಮಾರ್ ಪ್ರಮುಖ ರಾದ ಎಂ.ಟಿ.ದೇವಪ್ಪ, ಇತರರು ಇದ್ದರು.
ಮಾಸಿಕ ಸಭೆ
ಸಂಘದ ಕಚೇರಿಯಲ್ಲಿ ಅಧ್ಯಕ್ಷ ಎಂ.ಎಂ.ಪರಮೇಶ್ವರ್‍ರವರ ಅಧ್ಯಕ್ಷತೆಯಲ್ಲಿ ಮಾಸಿಕ ಸಭೆ ನಡೆಯಿತು. ಈ ಸಂದರ್ಭ ಸಂಘದ ಕಾರ್ಯದರ್ಶಿ ಎಂ.ಟಿ.ಪವನ್ ಮಾತನಾಡಿ, ಸಂಘದಲ್ಲಿ ಆಯೋಜಿಸುವ ಕ್ರೀಡಾಕೂಟದಲ್ಲಿ ಪಾಲ್ಗೊಂಡರೆ ಮಾತ್ರ ಸಂಘದ ಅಭಿವೃದ್ಧಿಯಾಗುವದಿಲ್ಲ. ಸಂಘದ ಪ್ರತಿ ಕಾರ್ಯಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಾಮಾಜಿಕ ಕಾರ್ಯಕ್ಕೆ ಪದಾಧಿಕಾರಿಗಳು ಕೈಜೋಡಿಸಬೇಕು. ಇದರೊಂದಿಗೆ ಸಂಘದ ಸದಸ್ಯತ್ವ ಪಡೆದು ಜನಾಂಗದ ಒಗ್ಗಟ್ಟು ಪ್ರದರ್ಶಿಸುವ ಕೆಲಸವಾಗ ಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಕಾರ್ಯಪ್ರವೃತ್ತರಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಂಬಾಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನಾ ಸಂಘದ ಉಪಾಧ್ಯಕ್ಷ ಗಣೇಶ್, ಖಜಾಂಚಿ ಸಂಪತ್‍ಕುಮಾರ್, ಕಾರ್ಯದರ್ಶಿ ಆದರ್ಶ್ ಅದ್ಕಲೇಗಾರ್, ಕಟ್ಟಡ ಸಮಿತಿ ಕಾರ್ಯದರ್ಶಿ ಎಂ.ಎಸ್. ಯೋಗೇಂದ್ರ, ಸದಸ್ಯರಾದ ಎಂ.ವಿ.ರವಿ, ನರಸಿಂಹ, ರತ್ನಮಂಜರಿ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.