ಚೆಟ್ಟಳ್ಳಿ, ನ. 17 : ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆ, ಗೋಣಿಕೊಪ್ಪ ಹಾಗೂ ಬೆಳ್ಳೂರು ವ್ಯಾಪ್ತಿಗಳಲ್ಲಿ ಬಾಲ್ಯಾವಸ್ಥೆಯ ಮತ್ತು ಕಿಶೋರಾವಸ್ಥೆ (ನಿಷೇಧ ಮತ್ತು ನಿಯಂತ್ರಣ) ಕಾರ್ಮಿಕ ಕಾಯ್ದೆ 1986 ರಡಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ತಪಾಸಣೆ ನಡೆಸಲಾಯಿತು.

ಈ ಸಂದರ್ಭ ಬೆಳ್ಳೂರು ಗ್ರಾಮದ ಮನೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹದಿಮೂರು ವರ್ಷದ ಬಾಲಕಿಯನ್ನು ಕೆಲಸದಿಂದ ಬಿಡುಗಡೆಗೊಳಿಸಿ, ಮಡಿಕೇರಿಯ ಸರ್ಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ಬಾಲಕಿಗೆ ವಸತಿ ವ್ಯವಸ್ಥೆ ಮಾಡಲಾಯಿತು.

ಈ ಸಂದರ್ಭ ಮಾತನಾಡಿದ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕರಾದ ಆರ್ ಶೀರಾಝ್ ಅಹ್ಮದ್ ಬಾಲಾವ್ಯಸ್ಥೆಯ ಮತ್ತು ಕಿಶೋರಾವಸ್ಥೆಯ(ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಕಲಂ 3ರ ಪ್ರಕಾರ 14 ವರ್ಷದೊಳಗಿನ ಮಕ್ಕಳ ದುಡಿಮೆಯನ್ನು ಸಂಪೂರ್ಣವಾಗಿ ಎಲ್ಲಾ ಸಂಸ್ಥೆಗಳಲ್ಲಿ ನಿಷೇಧಿಸಲಾಗಿದೆ.

ಕಲಂ 3ಎ ಪ್ರಕಾರ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಉದ್ಯೋಗ-ಪ್ರಕ್ರಿಯೆಗಳಲ್ಲಿ ಮಕ್ಕಳ ದುಡಿಮೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಮತ್ತು ಕಾಯ್ದೆ ಕಲಂ 7,8,9,11 ಮತ್ತು 12ರ ಪ್ರಕಾರ 14 ರಿಂದ 18 ವರ್ಷದೊಳಗಿನ ಮಕ್ಕಳ ದುಡಿಮೆಯನ್ನು ಕೆಲವು ನಿಬಂಧನೆಗಳಿಗೆ ಒಳಪಟ್ಟು ನಿಯಂತ್ರಿಸಿದೆ.

ಈ ಎಲ್ಲಾ ಬಾಲ ಕಾರ್ಮಿಕ ಕಾಯ್ದೆಯನ್ನು ಉಲ್ಲಂಘಿಸಿ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಲ್ಲಿ ಕಾಯ್ದೆಯ ಕಲಂ 14ರ ಪ್ರಕಾರ 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಅಥವಾ 20 ಸಾವಿರದಿಂದ 50 ಸಾವಿರ ರೂವರೆಗೆ ದಂಡ ವಿಧಿಸಲಾಗುತ್ತದೆ ಎಂದು ಆರ್.ಶೀರಾಝ್ ಅಹ್ಮದ್ ಹೇಳಿದರು.

ಕಾರ್ಯಚರಣೆಯಲ್ಲಿ ವೀರಾಜಪೇಟೆ ಹಿರಿಯ ಕಾರ್ಮಿಕ ಅಧಿಕಾರಿ ಮಹದೇವಸ್ವಾಮಿ, ಮಡಿಕೇರಿಯ ಎಂ.ಎಂ.ಯತ್ನಟಿ ಹಾಗೂ ಮಕ್ಕಳ ಸಹಾಯವಾಣಿ ಸದಸ್ಯ ಪ್ರವೀಣ್ ಕುಮಾರ್ ಇದ್ದರು.