ಮಡಿಕೇರಿ, ನ. 17: ಮಡಿಕೇರಿಯ ಪ್ರಮುಖ ಪ್ರವಾಸೀ ತಾಣಗಳಲ್ಲಿ ಒಂದಾಗಿರುವ ಇಲ್ಲಿನ ರಾಜಾಸೀಟ್‍ಗೆ ಹೊಂದಿಕೊಂಡಂತೆ, ಜಿಲ್ಲಾ ಕೇಂದ್ರ ಮಡಿಕೇರಿಗೆ ಆಗಮಿಸುವ ಪ್ರವಾಸಿ ಗರನ್ನು ಆಕರ್ಷಿಸುವ ದಿಸೆಯಲ್ಲಿ ‘ಕೂರ್ಗ್ ವಿಲೇಜ್’ ಯೋಜನೆ ಯೊಂದು ರೂಪುಗೊಳ್ಳುತ್ತಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ರೂಪಾಯಿ 98 ಲಕ್ಷ ವೆಚ್ಚದಲ್ಲಿ ‘ಕೂರ್ಗ್ ವಿಲೇಜ್’ ನಿರ್ಮಾಣಗೊಳ್ಳಲಿದ್ದು, ಈಗಾಗಲೇ ಕಾಮಗಾರಿ ಆರಂಭಗೊಂಡಿದೆ.ಪ್ರಸಕ್ತ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಕಾಳಜಿಯೊಂದಿಗೆ, ಜಿಲ್ಲಾ ಕೇಂದ್ರಕ್ಕೆ ಆಗಮಿಸುವ ಪ್ರವಾಸಿಗರು, ರಜಾ ದಿನಗಳಲ್ಲಿ ಮತ್ತು ವಿಶೇಷ ಸಂದರ್ಭಗಳಲ್ಲಿ ಇಲ್ಲಿಗೆ ಭೇಟಿ ನೀಡುವ ವೇಳೆ ರಾಜಾಸೀಟ್ ಉದ್ಯಾನದಲ್ಲಿ ಕಿಷ್ಕಿಂಧೆಯ ನಡುವೆ ವಿಹಾರದಲ್ಲಿ ಸಿಲುಕುವದ್ದನ್ನು ತಪ್ಪಿಸುವ ದಿಸೆಯಲ್ಲಿ ನೂತನ ಯೋಜನೆ ರೂಪಿಸಲಾಗಿದೆ.
ಈ ಯೋಜನೆಯಂತೆ ಲೋಕೋಪಯೋಗಿ ಒಳನಾಡು ಸಾರಿಗೆ ಇಲಾಖೆಯಿಂದ ಕಾಮಗಾರಿಗೆ ನಿಶಾನೆ ಲಭಿಸಿದ್ದು, ಈಗಷ್ಟೇ ಕೆಲಸ ಆರಂಭಗೊಂಡಿದೆ. ಕುಂದೂರುಮೊಟ್ಟೆ ದೇವಾಲಯ ಬಳಿ ರಾಜಾಸೀಟ್ ರಸ್ತೆಯ ಕೆಳ ಭಾಗದ ತಗ್ಗು ಪ್ರದೇಶವನ್ನು ಜಿಲ್ಲಾಡಳಿತವು ‘ಕೂರ್ಗ್ ವಿಲೇಜ್’ ನಿರ್ಮಾಣಕ್ಕೆ ಬಳಸಿಕೊಂಡಿದೆ.
ಈ ಸ್ಥಳದಲ್ಲಿರುವ ವಿಶಾಲ ತೆರೆದ ಬಾವಿಯ ಸುತ್ತ ಅಲ್ಲಲ್ಲಿ ಪುಟ್ಟ ಪುಟ್ಟ ಮಳಿಗೆಗಳು ತಲೆಯೆತ್ತಲಿದ್ದು, ಈ ಮಳಿಗೆಗಳಲ್ಲಿ ಪ್ರವಾಸಿಗರಿಗೆ ಕೊಡಗಿನ ಕೃಷಿ ಮತ್ತು ತೋಟಗಾರಿಕೆ ಸಹಿತ ಇತರ ಉತ್ಪನ್ನಗಳ ಮಾರಾಟ ವಸ್ತುಗಳು ಲಭಿಸಲಿವೆ. ರಾಜಾಸೀಟ್‍ನಲ್ಲಿ ಮತ್ತು ಪಕ್ಕದ ನೆಹರೂ ಮಂಟಪ ಪರಿಸರದಲ್ಲಿ ಸುತ್ತಾಡುವ ಪ್ರವಾಸಿಗರು ಈ ಕೂರ್ಗ್ ವಿಲೇಜ್‍ನಲ್ಲಿ ‘ಶಾಪಿಂಗ್’ ನಡೆಸಲು ಯೋಜನೆ ರೂಪಿಸಲಾಗುತ್ತಿದೆ.
ಮಾತ್ರವಲ್ಲದೆ ಸುಂದರ ಪರಿಸರದಲ್ಲಿ ಅಲ್ಲಲ್ಲಿ ವಾಯುವಿಹಾರದೊಂದಿಗೆ ಕಲ್ಲು ಬೆಂಚುಗಳಲ್ಲಿ ಕುಳಿತುಕೊಳ್ಳಲು ಕೂಡ ಅನುಕೂಲತೆ ಮಾಡಿಕೊಡಲಾಗುತ್ತಿದೆ. ಆ ಸಲುವಾಗಿ ಈಗಾಗಲೇ ಇಡೀ ಪ್ರದೇಶದಲ್ಲಿ ಸುರಕ್ಷತೆ ದೃಷ್ಟಿಯಿಂದ ಬ್ಯಾರಿಕೇಡ್ ನಿರ್ಮಾಣ, ಕಾಲುದಾರಿ ವ್ಯವಸ್ಥೆ, ಮೆಟ್ಟಿಲುಗಳು, ರೈಲಿಂಗ್ಸ್ ಇತ್ಯಾದಿ ಕಾಮಗಾರಿ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ರಾಜಾಸೀಟ್‍ಗೆ ಸೀಮಿತ ಜನಜಂಗುಳಿ ತಪ್ಪುವಂತಾಗಿದೆ.
ಆ ದಿಸೆಯಲ್ಲಿ ರಾಜಾಸೀಟ್‍ನತ್ತ ಆಗಮಿಸುವ ಪ್ರವಾಸಿಗರು ಮತ್ತು ಐತಿಹಾಸಿಕ ಮಡಿಕೇರಿ ದಸರಾ ಇತ್ಯಾದಿ ರಜೆಯ ಸಂದರ್ಭಗಳಲ್ಲಿ, ಹೊರಗಿನಿಂದ ಅಧಿಕ ಸಂಖ್ಯೆಯಲ್ಲಿ ಆಗಮಿಸುವವರಿಗೆ ಸಾಕಷ್ಟು ಸುಧಾರಿತ ಕ್ರಮಗಳನ್ನು ಕೈಗೊಳ್ಳಲಾಗುವದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆಶಯ ವ್ಯಕ್ತಪಡಿಸಿದ್ದಾರೆ.