ಗೋಣಿಕೊಪ್ಪಲು.ನ.17: ವಾಣಿಜ್ಯ ನಗರ ಗೋಣಿಕೊಪ್ಪ ಭಾನುವಾರ ಹಬ್ಬದ ಸಂಭ್ರಮದಲ್ಲಿತ್ತು. ಎಲ್ಲೆಂದರಲ್ಲಿ ಕನ್ನಡ ಬಾವುಟಗಳು, ಹಾರಾಡುತ್ತಿದ್ದವು. ಕನ್ನಡ ಗೀತೆಗಳು ಮೊಳಗುತ್ತಿದ್ದವು. ಬಸ್ಸ್ ನಿಲ್ದಾಣದ ಸಮೀಪವಿರುವ ಆಟೋ ನಿಲ್ದಾಣವು ತಳಿರು ತೋರಣ, ವಿದ್ಯುತ್ ಅಲಂಕಾರದಿಂದ ಕಂಗೊಳಿಸುತ್ತಿತ್ತು. ನಗರದ ಮುಖ್ಯ ರಸ್ತೆಯ ಎರಡು ಬದಿಯಲ್ಲಿ ಜನತೆ ಸಾಲುಗಟ್ಟಿ ನಿಂತು ಕನ್ನಡದ ಹಬ್ಬವನ್ನು ಕಣ್ತುಂಬಿ ಕೊಂಡರು.
ಆಟೋ ಚಾಲಕರು, ಮಾಲೀಕರು 11ನೇ ವರ್ಷದ ಕನ್ನಡ ರಾಜ್ಯೋತ್ಸ ವವನ್ನು ಅದ್ದೂರಿಯಾಗಿ ಆಚರಿಸುವ ಮೂಲಕ ಕನ್ನಡಾಂಭೆಯನ್ನು ಮೆರವಣಿಗೆಯಲ್ಲಿ ಹೊತ್ತು ತಂದರು. ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಿಂದ ಆಟೋ ರಿಕ್ಷಾಗಳು ಮೆರವಣಿಗೆಯಲ್ಲಿ ಸಾಗಿಬಂದವು. ಮೆರವಣಿಗೆಯ ಜೊತೆಗೆ ಕನ್ನಡ ಬಾವುಟಗಳಿಂದ ಅಲಂಕೃತಗೊಂಡಿದ್ದ ಎತ್ತಿನ ಗಾಡಿಯಲ್ಲಿ ಶಾರದಾಂಭೆಯ ವೇಷಧಾರಿ ಗಮನ ಸೆಳೆದರು. ಮೆರವಣಿಗೆಯ ಉದ್ದಕ್ಕೂ ಕನ್ನಡ ಸಂಸ್ಕøತಿಯನ್ನು ಬಿಂಬಿಸುವ ಛಧ್ಮವೇಶದಾರಿಗಳು ನಾಗರ ಹೊಳೆಯ ಅಮ್ಮಾಳೆ ಅಮ್ಮ ಕಲಾತಂಡದ ಆದಿವಾಸಿಗಳ ಕೋಲಾಟ ಮೆರಗು ನೀಡಿತು. ಜಿಲ್ಲಾ ಪಂಚಾಯ್ತಿ ಸದಸ್ಯ ಹಾಗೂ ಆಟೋ ಚಾಲಕರ, ಮಾಲೀಕರ ಸಂಘದ ಗೌರವ ಅಧ್ಯಕ್ಷ ಸಿ.ಕೆ.ಬೋಪಣ್ಣ ಮುಂದಾಳತ್ವದಲ್ಲಿ ಸಮಿತಿಯ ಪದಾಧಿಕಾರಿಗಳು ಆರ್.ಎಂ.ಸಿ ಯಾರ್ಡ್ನಿಂದ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮೆರವಣಿಗೆಯು ಮುಖ್ಯ ರಸ್ತೆಯಲ್ಲಿ ಸಾಗಿಬರುವ ಮೂಲಕ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಮುಕ್ತಾಯವಾಯಿತು. ಮಧ್ಯಾಹ್ನ 1 ಗಂಟೆಗೆ ಬಸ್ ನಿಲ್ದಾಣದಲ್ಲಿ ಗ್ರೀಸ್ಕಂಬ ಹತ್ತುವ ಕಾರ್ಯಕ್ರಮಕ್ಕೆ ಸ್ಥಳೀಯ ವೈದ್ಯರಾದ ಡಾ.ಶಿವಪ್ಪ ಚಾಲನೆ ನೀಡಿದರು. ನೂರಾರು ಯುವಕರು ಗ್ರೀಸ್ ಕಂಬ ಹತ್ತುವ ಪೈಪೋಟಿಯಲ್ಲಿ ಭಾಗಿಯಾಗಿದ್ದರು. ಕನ್ನಡ ರಾಜೋತ್ಸವ ಅಂಗವಾಗಿ ಆಟೋ ನಿಲ್ದಾಣದಲ್ಲಿ ಏರ್ಪಡಿಸಿದ್ದ ಅನ್ನದಾನ ಕಾರ್ಯಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಮುಖರಾದ ಕೇಶವ ಕಾಮತ್ ಚಾಲನೆ ನೀಡಿದರು. ಬಸ್ ನಿಲ್ದಾಣದ ಬೃಹತ್ ವೇದಿಕೆ ಯಲ್ಲಿ ನಾಗರಹೊಳೆ ಜೆ.ಬಿ. ರಮೇಶ್ ರವರ ಅಮ್ಮಾಳೆ ಅಮ್ಮ ಕಲಾತಂಡ ನಡೆಸಿಕೊಟ್ಟ ಕಾರ್ಯ ಕ್ರಮವು ಕಲಾಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಭಗತ್ ಸಿಂಗ್ ಯುವಕ ಸಂಘದ ವತಿಯಿಂದ ಮಜ್ಜಿಗೆ ವಿತರಣೆ ಕಾರ್ಯಕ್ರಮ ನಡೆಯಿತು. ಎತ್ತಿನ ಗಾಡಿಯನ್ನು ಓಡಿಸಿಕೊಂಡು ಬಂದ ಕಲ್ಕುಣಿಕೆಯ ಲಿಂಗಯ್ಯ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಾಯೆರ ಕಿರಣ್, ಬಿ.ಎನ್.ಪ್ರಕಾಶ್, ಕೇಶವ್ ಕಾಮತ್, ಜಪ್ಪು ಸುಬ್ಬಯ್ಯ, ವಿ.ಆರ್.ವಿನು, ರಂಜು, ರಾಜುಬಾಬು, ವಿನೋದ್, ಆಶ್ವತ್, ಸುರೇಶ್, ಮೂರ್ತಿ, ರಮೇಶ್, ಪಂದ್ಯಂಡ ಹರೀಶ್, ಡಾ.ಶಿವಪ್ಪ, ನರಸಿಂಹ, ದೇವಪ್ಪ, ಡಾ. ಆನಂದ್ ಕಾರ್ಲ ಮುಂತಾದವರು ಹಾಜರಿ ದ್ದರು. ಆಟೋ ಚಾಲಕರ ಸಂಘದ ಗೌರವ ಅಧ್ಯಕ್ಷ ಸಿ.ಕೆ. ಬೋಪಣ್ಣ ವಿಜೇತರಿಗೆ ಬಹುಮಾನ ವಿತರಿಸಿದರು.
ಮೆರವಣಿಗೆಯಲ್ಲಿ ಸ್ಥಳೀಯ ಶಾಲಾ ವಿದ್ಯಾರ್ಥಿಗಳಾದ ಕಿರಣ್ ಕುಮಾರ್, ಮಹೇಶ್, ಚೇತನ್, ಕಾವ್ಯ, ಕೀರ್ತನ, ಕಿರಣ್, ಜೈಸಿಕ, ತಪ್ಸಿನ, ಅಂಜಲಿ, ಪ್ರೀತಂ, ಯೋಗೇಶ್, ಯುವಿಕ, ಛದ್ಮವೇಷ ಧಾರಿಗಳಾಗಿ ಪುರಂದರದಾಸ, ಬಸವಣ್ಣ, ಮುತ್ತಪ್ಪ, ಝಾನ್ಸಿರಾಣಿ ಲಕ್ಷ್ಮಿಭಾಯಿ, ಭುವನೇಶ್ವರಿ, ಕಿತ್ತೂರುರಾಣಿ ಚೆನ್ನಮ್ಮ, ಕೃಷ್ಣದೇವರಾಯ, ಭಗತ್ ಸಿಂಗ್ ವೇಷದಲ್ಲಿ ಕಾಣಿಸಿಕೊಂಡರು.
-ಚಿತ್ರ, ವರದಿ: ಹೆಚ್.ಕೆ.ಜಗದೀಶ್