ಸೋಮವಾರಪೇಟೆ, ನ. 16: ಗ್ರಾಮೀಣ ಕ್ರೀಡಾಕೂಟಗಳಿಂದ ಪರಸ್ಪರ ಸಾಮರಸ್ಯ ವೃದ್ಧಿಯಾಗುತ್ತದೆ ಎಂದು ಹಾನಗಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕ ವೆಂಕಟೇಶ್ ಅಭಿಪ್ರಾಯಿಸಿದರು.
ಸಮೀಪದ ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಚಂದ್ರೋದಯ ಯುವಕ ಸಂಘ, ಸರಸ್ವತಿ ಯುವತಿ ಮಂಡಳಿ ಹಾಗೂ ಸ್ವಸಹಾಯ ಸಂಘಗಳ ಆಶ್ರಯದಲ್ಲಿ ಹಾನಗಲ್ಲು ಶೆಟ್ಟಳ್ಳಿ ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ 29ನೇ ವರ್ಷದ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸುತ್ತಿದ್ದು, ಇವುಗಳನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕಿದೆ. ಜಾನಪದೀಯ ಶೈಲಿಯ ಹಲವಷ್ಟು ಕ್ರೀಡೆಗಳು ಇಂದು ಮರೆಯಾಗುತ್ತಿವೆ. ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದ್ದು, ಕೃಷಿಕರೇ ವರ್ಷದಲ್ಲಿ ಒಂದು ದಿನ ಇಂತಹ ಕ್ರೀಡಾಕೂಟದಲ್ಲಿ ಭಾಗವಹಿಸುವದು ಉತ್ತಮ ಕಾರ್ಯ. ಗ್ರಾಮೀಣ ಭಾಗದಲ್ಲಿ ಕಳೆದ 29 ವರ್ಷಗಳಿಂದ ಸಂಘದ ಸದಸ್ಯರು ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬರುತ್ತಿರುವದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕ್ರೀಡಾಕೂಟವನ್ನು ಚಂದ್ರೋದಯ ಯುವಕ ಸಂಘದ ಸಂಸ್ಥಾಪಕ ಅಧ್ಯಕ್ಷ ಎ.ಜೆ. ಸುರೇಶ್ ಉದ್ಘಾಟಿಸಿ ಮಾತನಾಡಿ, ಯುವ ಪೀಳಿಗೆ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಯುವ ಜನಾಂಗದಿಂದಲೇ ದೇಶದ ಅಭಿವೃದ್ಧಿ ಸಾಧ್ಯ ಎಂಬದನ್ನು ಮರೆಯಬಾರದು. ಸಾಮಾಜಿಕ ಕಾರ್ಯಗಳಲ್ಲೂ ಯುವಕರು ಮುಂದುವರೆಯಬೇಕೆಂದು ಮನವಿ ಮಾಡಿದರು.
ಶಾಲಾ ಮುಖ್ಯೋಪಾಧ್ಯಾಯ ಶಿವಕುಮಾರ್ ಮಾತನಾಡಿ, ಸರ್ಕಾರಿ ಶಾಲೆಗಳೂ ಸಹ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಲು ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಟಿ.ಡಿ. ರುದ್ರಪ್ಪ ವಹಿಸಿದ್ದರು. ದಾನಿಗಳಾದ ಹೆಚ್.ಎಂ. ವಿಠಲ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾರ್ವಜನಿಕ ವಿಭಾಗದಲ್ಲಿ ಪುರುಷರಿಗೆ ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟ, ವಯಸ್ಕರಿಗೆ ಮಡಿಕೆ ಒಡೆಯುವದು, ಮಹಿಳೆಯರಿಗೆ ಥ್ರೋಬಾಲ್, ಹಗ್ಗಜಗ್ಗಾಟ, ವಿಷದ ಚೆಂಡು ಸೇರಿದಂತೆ ಇತರ ಕ್ರೀಡಾಕೂಟಗಳನ್ನು ಆಯೋಜಿಸಿ, ವಿಜೇತರಿಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಸಂಘದ ವತಿಯಿಂದ ಶಾಲಾ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.