ಗೋಣಿಕೊಪ್ಪಲು, ನ. 16: ಸರ್ಕಾರ ರೈತರ ಸಾಲ ಮನ್ನಾ ವಿಚಾರದಲ್ಲಿ ನ್ಯಾಯ ನೀಡದೆ ಇರುವ ಬಗ್ಗೆ ಹೋರಾಟ ರೂಪಿಸುವಂತೆ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಒಮ್ಮತ್ತದ ತೀರ್ಮಾನಕ್ಕೆ ಬರಲಾಯಿತು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ನಡೆದ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಹಲವು ರೈತರು ಸಾಲ ಮನ್ನಾ ವಿಚಾರದಲ್ಲಿ ಇನ್ನು ಕೂಡ ನ್ಯಾಯ ಸಿಗದೆ ಇರುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸಭೆಯ ಮುಂದಿಟ್ಟರು.
ಸಭೆಯಲ್ಲಿ ಮಾತನಾಡಿದ ಪ್ರ.ಕಾರ್ಯದರ್ಶಿ ಸುಜಯ್ ಬೋಪಯ್ಯ ಈ ಹಿಂದೆ ಡಿಸಿಸಿ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕ್‍ನ ಮುಂದೆ ಹೋರಾಟದ ಬಗ್ಗೆ ರೈತ ಸಂಘದಿಂದ ಎಚ್ಚರಿಕೆ ನೀಡಿದ್ದರೂ ಕೇವಲ ಸಣ್ಣಪುಟ್ಟ ನೆಪಗಳನ್ನು ಮುಂದಿಟ್ಟು ಬ್ಯಾಂಕ್‍ನ ಅಧಿಕಾರಿಗಳು ನ್ಯಾಯ ಕೊಡಿಸುವಲ್ಲಿ ವಿಫಲತೆಯಾಗಿದ್ದಾರೆ. ಈ ಹಿನೆÀ್ನಲೆ ತಾ. 18 ರಂದು ಹುದಿಕೇರಿ ಪಟ್ಟಣದಲ್ಲಿರುವ ಕೃಷಿ ಪತ್ತಿನ ಸರಕಾರಿ ಸಂಘದ ಮುಂಭಾಗ ಸಾಂಕೇತಿಕವಾಗಿ ಪ್ರತಿಭಟನೆ ಮೂಲಕ ಸರ್ಕಾರದ ನೀತಿಯನ್ನು ಖಂಡಿಸಲಾಗುವದು ಎಂದರು.
ಜಿಲ್ಲೆಯ ಹಲವಾರು ರೈತರಿಗೆ ಸಾಲ ಮನ್ನಾ ಪ್ರಯೋಜನ ದೊರಕಿದೆ. ಇನ್ನು ಶೇ. 50 ರಷ್ಟು ರೈತರಿಗೆ ಈ ಸವಲತ್ತು ಇನ್ನು ಸಿಕ್ಕಿರುವದಿಲ್ಲ. ಹೋರಾಟ ಅನಿವಾರ್ಯವೆಂದು ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೇಮಾಡ ಮಂಜುನಾಥ್ ತಿಳಿಸಿದರು.
ವೀರಾಜಪೇಟೆ ತಾಲೂಕು ದಂಡಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಆಗಿರುವ ಸಮಸ್ಯೆಯ ಬಗ್ಗೆ ರೈತರ ಮುಂದೆ ಅಭಿಪ್ರಾಯ ಮಂಡಿಸಬೇಕು ಎಂದು ಶ್ರೀಮಂಗಲ ಹೋಬಳಿ ಸಂಚಾಲಕ ಚಟ್ಟಂಗಡ ಕಂಬ ಕಾರ್ಯಪ್ಪ ತಿಳಿಸಿದರು. ಸಭೆಯಲ್ಲಿ ಕಿರುಗೂರು ರೈತ ಮುಖಂಡರಾದ ಅಶೋಕ್ ಸೇರಿದಂತೆ ಇನ್ನಿತರ ರೈತ ಮುಖಂಡರು ಉಪಸ್ಥಿತರಿದ್ದರು.