ಕಣಿವೆ, ನ. 16 : ಇವನು ಅಂತಿಂಥ ಗಿಳಿ ರಾಮನಲ್ಲ. ಮನೆಗೆ ಹೋದವರನ್ನೆಲ್ಲಾ ಮಾತಾಡಿಸೋ ಗಿಳಿ ರಾಮ. ಊಟ ಆಯಿತಾ ಅಂತಾ ಕೇಳುತ್ತೆ. ಆ..... ಅವ್ವಾ.... ಚಾಯಕ್ಕಾ... ಹರ್ಷಿತಕ್ಕ... ಅಂತ ಮನೆ ಮಂದಿಯ ಹೆಸರು ಕರೆಯುತ್ತೆ. ಮನೆಯಲ್ಲಿ ಮನೆಯವರು ಏನಾದರೂ ಕೂಗಾಡಿಕೊಂಡು ಜಗಳ ಆಡಿದರೆ ಈ ಗಿಳಿ ರಾಮ, ತನ್ನ ಬಂಧಿಯಾಗಿಸಿದ ಪಂಜರದೊಳಗೆ ತಲೆ ಚಚ್ಚಿಕೊಳ್ಳುತ್ತೆ. ಸಂಜೆಯ ವೇಳೆ ಮನೆಯ ಮಂದಿ ದೃಶÀ್ಯವಾಹಿನಿಯಲ್ಲಿ ಏನಾದರೂ ನ್ಯೂಸ್ ಚಾನೆಲ್ ಹಾಕಿಕೊಂಡು ಕುಳಿತರೆ ಈ ಗಿಳಿ ರಾಮನಿಗೆ ಬಿಲ್ ಕುಲ್ ಇಷ್ಟವಾಗಲ್ಲ. ಖಾಸಗಿ ವಾಹಿನಿಯೊಂದರಲ್ಲಿ ಬರುವ ಪ್ರೇಮಲೋಕ ಮತ್ತು ಮುದ್ದುಲಕ್ಷ್ಮಿ ಎಂಬ ಧಾರಾವಾಹಿಯನ್ನು ಮನೆಯೊಡತಿ ಜೊತೆ ಕುಳಿತು ನೋಡುತ್ತೆ. ಧಾರಾವಾಹಿ ನೋಡುತ್ತಾ ನೋಡುತ್ತಾ ತನ್ನದೇ ಭಾಷೆಯಲ್ಲಿ ತನ್ನೊಳಗೆಯೇ ಹೂಂಕರಿಸುತ್ತೆ.

(ಮೊದಲ ಪುಟದಿಂದ) ಇಂತಹ ಗಿಳಿಯೊಂದಕ್ಕೆ ಸಾಕ್ಷಿ ಆಗುತ್ತದೆ ಮದಲಾಪುರ ಬಳಿಯ ಬ್ಯಾಡಗೊಟ್ಟ ಗ್ರಾಮದಲ್ಲಿರುವ ಆಟೋ ಚಾಲಕ ಸತೀಶ್ ಹಾಗೂ ಕಾಂತಿ ಎಂಬವರ ಮನೆ. ನಂಬಲು ಕಷ್ಟವಾದರೂ ಕೂಡ ಇದು ಸತ್ಯ. ಕಳೆದ ನಾಲ್ಕು ವರ್ಷಗಳ ಹಿಂದೆ ಸತೀಶ್ ತಮ್ಮ ಆಟೋದಲ್ಲಿ ಯಡವನಾಡಿನ ಜೇನು ಕುರುಬರ ಹಾಡಿಯೊಂದಕ್ಕೆ ಬಾಡಿಗೆಗೆಂದು ತೆರಳಿದಾಗ ಜೇನು ಕುರುಬರ ವ್ಯಕ್ತಿಯೊಬ್ಬ ಪಕ್ಷಿಯೊಂದನ್ನು ಹಿಡಿದು ತಂದು ತಿನ್ನಲು ಸುಡುತ್ತಾ ಕುಳಿತಿದ್ದ. ಇದನ್ನು ನೋಡಿದ ಆಟೋ ಚಾಲಕ ಸತೀಶ್, ಮನಸ್ಸು ತಡೆಯದೇ ಅದ್ಯಾವ ಪಕ್ಷಿ ನೋಡೋಣ ಅಂದುಕೊಂಡು ಹೋದಾಗ ಆ ಪಕ್ಷಿಯ ಜೊತೆಯಲ್ಲಿ ರೆಕ್ಕೆ ಪುಕ್ಕವೇ ಬಾರದ ಹಸು ಕಂದಮ್ಮ ಗಿಳಿ ಮರಿಯೊಂದನ್ನು ಕಂಡ. ಆ ಪುಟ್ಟ ಗಿಳಿ ಮರಿಗೆ 50 ರೂ. ಹಣ ಕೊಟ್ಟು ಸೋರೆ ಕಾಯಿಯ ಖಾಲಿ ಬುರುಡೆಯೊಳಗೆ ಜೋಪಾನವಾಗಿ ತನ್ನ ಮನೆಗೆ ತಂದ ಸತೀಶ್ ಸಣ್ಣ ಪಂಜರದೊಳಗೆ ಗಿಳಿ ಮರಿಯನ್ನು ಬಂಧಿಯಾಗಿಸಿದ. ಆಗ ಆ ಮನೆಯಲ್ಲಿ ಸತೀಶನ ಇಬ್ಬರು ಪುಟ್ಟ ಹೆಣ್ಣು ಮಕ್ಕಳಿದ್ದರು. ಒಬ್ಬಳ ಹೆಸರು ಹರ್ಷಿತ, ಮತ್ತೊಬ್ಬಾಕೆ ಚಾಯಾ, ಮತ್ತು ವಯಸ್ಸಾದ ಅಜ್ಜಿ ಒಂದಿತ್ತು. ಆ ಅಜ್ಜಿಗೆ ಮಕ್ಕಳು ಕರೆಯುವ ಅವ್ವಾ ಎನ್ನುವದನ್ನು ಕೇಳಿಕೊಂಡ ಗಿಳಿ ಮಾತಾಡಲು ಆರಂಭಿಸಿತ್ತು. ಈ ಗಿಳಿ ಸ್ವಲ್ಪ ದೊಡ್ಡದಾದಂತೆ ಅದಕ್ಕೆ ರಾಮ ಎಂಬ ಹೆಸರಿಡಲಾಯಿತು. ಮನೆಯಲ್ಲಿ ಮಕ್ಕಳ ಹೆಸರನ್ನು ಚಾಯಕ್ಕ, ಹರ್ಷಿತಕ್ಕಾ, ಊಟ ಆಯಿತಾ... ಎಂದೆಲ್ಲಾ ಮನುಷ್ಯರು ಮಾತಾಡುವಂತೆಯೇ ಮಾತನಾಡಲು ಆರಂಭಿಸಿತು ಎಂದು ಮನೆಯೊಡತಿ ಕಾಂತಿ ಹೇಳುತ್ತಾರೆ. ಮಕ್ಕಳೂ ಶಾಲೆಗೆ ಹೋಗುವಾಗ ಹೇಳುವ ಬೈ... ಬೈ... ಎಂಬ ನುಡಿಯನ್ನು ಈ ಗಿಳಿರಾಮ ಯಥಾವತ್ತಾಗಿ ನುಡಿಯುತ್ತಾನೆ. ಮನೆ ಮಾಲೀಕ ಸತೀಶನ ಮೊಬೈಲ್‍ಗೆ ಏನಾದರೂ ಕರೆ ಬಂದು ಫೋನ್ ರಿಂಗಣಿಸಿ ಸತೀಶ್ ರಿಸ್ಸೀವ್ ಮಾಡಿಲ್ಲ ಎಂದರೆ ಆ ಫೋನ್ ನೋಡೋವರೆಗೂ ಈ ಗಿಳಿ ರಾಮ ಕಿರುಚುತ್ತಾನೆ. ಈ ಗಿಳಿ ರಾಮನ ಮಾತನ್ನು ಕೇಳಲು ದಿನವೂ ಜನ ಧಾವಿಸುತ್ತಾರೆ.

ಒಮ್ಮೆ ಪಂಜರದಿಂದ ಹಾರಿ ಹೋಗಿದ್ದ ಗಿಳಿ ರಾಮ ಮನೆ ಮುಂದಿನ ಮರವೊಂದರಲ್ಲಿ ಅವಿತು ಕುಳಿತಿದ್ದ. ಬೇರೆ ಪಕ್ಷಿಗಳು ಬಂದರೆ ಅವುಗಳ ಜೊತೆ ಸೇರುತ್ತಿರಲಿಲ್ಲ. ಒಂದು ದಿನ ನಾವು ಎಲ್ಲಾ ಕಡೆ ಹುಡುಕಿ ಬೇಸರದಿಂದ ಇದ್ದೆವು. ಬಳಿಕ ಸಂಜೆ ಮರದ ಮೇಲಿಂದಲೇ ಮಕ್ಕಳ ಹೆಸರನ್ನು ಕರೆಯಲು ಆರಂಭಿಸಿದ. ಆಮೇಲೆ ಮರ ಹತ್ತುವವರನ್ನು ಕರೆಸಿ ಹಿಡಿಸಿ ಮನೆಗೆ ತಂದೆವು. ಗಿಳಿರಾಮ ಮನೆಯ ಮಕ್ಕಳಂತೆಯೇ ಆಗಿದ್ದಾನೆ. ಮನುಷ್ಯರ ಗುಣ ಸ್ವಭಾವಗಳೇ ಈ ಗಿಳಿ ರಾಮನಿಗೂ ಇವೆ ಎನ್ನುತ್ತಾರೆ ಸತೀಶ್ ಹಾಗೂ ಕಾಂತಿ. ಈ ಗಿಳಿಗೆ ಮನೆಯವರು ತಿನ್ನುವ ಎಲ್ಲಾ ತರಹದ ತಿನಿಸುಗಳನ್ನು ಕೊಟ್ಟರೂ ತಿನ್ನುತ್ತಾನೆ. ಕೆಲವರು ಈ ಗಿಳಿಯ ಬಗ್ಗೆ ಹಗುರವಾಗಿ ಮಾತನಾಡಿಕೊಂಡು ಆ ಗಿಳಿ ಮಾತಾಡಲ್ಲ. ಸುಮ್ಮನೇ ಹೇಳುತ್ತಾರೆ ಎಂದು ಪಂಥ ಕಟ್ಟಿಕೊಂಡು ಈ ಗಿಳಿ ರಾಮನ ಬಳಿ ಬಂದು ವಾಸ್ತವ ಅರಿತವರೂ ಇದ್ದಾರೆ. -ಕೆ.ಎಸ್. ಮೂರ್ತಿ.