ಮಡಿಕೇರಿ, ನ. 16: ‘ಸೇ ನೊ ಟು ಪ್ಲಾಸ್ಟಿಕ್’, ‘ಶುಚಿತ್ವವೇ ದೇವತ’, ‘ಪ್ಲಾಸ್ಟಿಕ್ ಬಳಕೆ ನಿಷೇಧಿಸಿ’ ಹೀಗೆ ಹತ್ತಾರು ಫಲಕಗಳನ್ನು ಎತ್ತಿ ಹಿಡಿದು ಘೋಷಣೆಗಳನ್ನು ಕೂಗಿದ ವಿವಿಧ ಶಾಲೆಗಳ ಮಕ್ಕಳು, ಪ್ಲಾಸ್ಟಿಕ್, ಒಣ ಕಸ, ಹಸಿ ಕಸಗಳ ವಿಂಗಡಣೆಯ ವಿಧಾನದ ಮಾಹಿತಿ ಹೊಂದಿರುವ ಕರಪತ್ರಗಳನ್ನು ಹಂಚಿದ ‘ಕೊಡಗು ಫಾರ್ ಟುಮಾರೊ ಸದಸ್ಯರು’, ಡೋಲು- ತಮಟೆಯನ್ನು ಜಾಥಾ ದುದ್ದಕ್ಕೂ ಭಾರಿಸಿದ ಕಲಾವಿದರು ಮಡಿಕೇರಿ ನಗರ ನಿವಾಸಿಗಳನ್ನು ಸ್ವಚ್ಛತೆಯತ್ತ ಕರೆದೊಯ್ದರು.

ಮಡಿಕೇರಿ ನಗರಸಭೆಯ ಸಹಯೋಗದೊಂದಿಗೆ ‘ಕೊಡಗು ಫಾರ್ ಟುಮಾರೊ’ ಸಂಘದ ಸದಸ್ಯರು ಕಳೆದ ಹಲವು ದಿನಗಳಿಂದ ನಗರದ ಹಲವು ಮನೆಗಳಿಗೆ ತೆರಳಿ ತ್ಯಾಜ್ಯ ವಿಂಗಡಣೆಯ ಮಹತ್ವ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ಸಮಸ್ಯೆಗಳನ್ನು ತಿಳಿಸುತ್ತಿದ್ದು, ಇಂದು ನಗರದ ಫೀ.ಮಾ. ಕಾರ್ಯಪ್ಪ ವೃತ್ತದಿಂದ ಟೋಲ್‍ಗೇಟ್,

(ಮೊದಲ ಪುಟದಿಂದ) ಹಳೆ ಖಾಸಗಿ ಬಸ್ ನಿಲ್ದಾಣ, ಚೌಕಿ, ಕೊಹಿನೂರ್ ರಸ್ತೆ, ಸರ್ಕಾರಿ ಬಸ್ ನಿಲ್ದಾಣದಿಂದ ಹಳೆಯ ಖಾಸಗಿ ಬಸ್ ನಿಲ್ದಾಣದವರೆಗೆ ಜಾಥಾ ನಡೆಸುವ ಮೂಲಕ ಸ್ವಚ್ಛತಾ ಜಾಗೃತಿ ಆಂದೋಲನವನ್ನು ನಡೆಸಿದರು. ಜಾಥಾದಲ್ಲಿ ವಿವಿಧ ಶಾಲೆಗಳ ಮಕ್ಕಳು, ಸ್ಕೌಟ್ಸ್ ಅಂಡ್ ಗೈಡ್ಸ್, ಕೊಡಗು ಫಾರ್ ಟುಮಾರೊ, ಬೆಂಗಳೂರಿನಿಂದ ಬಂದ ನಾಟಕ ತಂಡ, ಕ್ಲೀನ್ ಕೂರ್ಗ್ ಇನಿಷಿಯೇಟಿವ್ ಹಾಗೂ ಹಲವು ಸಂಘ- ಸಂಸ್ಥೆಗಳು ಭಾಗವಹಿಸಿದ್ದವು.

ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಸ್ವಚ್ಛತೆಯನ್ನು ಕಾಪಾಡುವದು ನಗರಸಭೆಯ ಕಾರ್ಯ ಮಾತ್ರವಲ್ಲದೆ, ಸಾರ್ವಜನಿಕರೂ, ಸ್ವಯಂ ಸೇವಕ ಸಂಘಗಳೂ ಈ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ. ಇಂದು ನಡೆಸುತ್ತಿರುವ ಈ ಜಾಥಾ ಕಾರ್ಯಕ್ರಮ ಹಾಗೂ ಸ್ವಚ್ಛತಾ ಅರಿವು ಕಾರ್ಯಕ್ರಮಗಳನ್ನು ಆಗಿಂದಾಗ್ಗೆ ನಡೆಸಿ ಸಾರ್ವಜನಿಕರಲ್ಲಿ ಹಾಗೂ ಮುಖ್ಯವಾಗಿ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು. ನಗರದ ಸ್ಟೋನ್ ಹಿಲ್‍ನಲ್ಲಿ ಹಲವು ವರ್ಷಗಳಿಂದ ನಗರದ ಎಲ್ಲಾ ಕಸವನ್ನು ಸುರಿಯಲಾಗುತ್ತಿದೆ. ಈ ಕಸವನ್ನು ಹಸಿ ಮತ್ತು ಒಣ ಕಸವನ್ನಾಗಿ ಬೇರ್ಪಡಿಸಿ ವೈಜ್ಞಾನಿಕವಾಗಿ ಘನ ತ್ಯಾಜ್ಯವನ್ನು ವಿಲೇವಾರಿ ಮಾಡಲು ಈಗಾಗಲೇ ಟಾಟಾ ಸೇರಿದಂತೆ ವಿವಿಧ ಸಂಸ್ಥೆಗಳೊಂದಿಗೆ ಚರ್ಚಿಸ ಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಜಿ.ಪಂ. ಸಿ.ಇ.ಒ. ಕೆ.ಲಕ್ಷ್ಮಿಪ್ರಿಯ, ಪೌರಾಯುಕ್ತ ಎಂ.ಎಲ್. ರಮೇಶ್, ಡಿ.ಎಫ್.ಓ. ಪ್ರಭಾಕರನ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಮ್ಮಿ ಸಿಕ್ವೇರಾ, ದಮಯಂತಿ, ಕೊಡಗು ಫಾರ್ ಟುಮಾರೊ ಪ್ರತಿನಿಧಿಗಳಾದ ಧನ್ಯ, ಕಾರ್ಯಪ್ಪ, ವಿಕ್ರಮ್, ಪವನ್, ಕಾವ್ಯ ಇತರರು ಹಾಜರಿದ್ದರು.

ಬೆಂಗಳೂರಿನಿಂದ ಆಗಮಿಸಿದ್ದ ಬೀದಿ ನಾಟಕ ತಂಡವು ಪ್ಲಾಸ್ಟಿಕ್ ನಿಷೇಧಿಸುವಂತೆ ನಾಟಕವನ್ನು ವಿಭಿನ್ನ ರೀತಿಯಲ್ಲಿ ನಡೆಸಿ

ನಗರದ ಫೀ.ಮಾ. ಕಾರ್ಯಪ್ಪ ವೃತ್ತ, ಚೌಕಿ ಹಾಗೂ ಹಳೆಯ ಖಾಸಗಿ ಬಸ್ ನಿಲ್ದಾಣದ ಬಳಿ ಪ್ರದರ್ಶನ ನೀಡಿತು.