ಕುಶಾಲನಗರ, ನ. 16: ಕುಶಾಲನಗರದ ಇತಿಹಾಸ ಪ್ರಸಿದ್ಧ ಶ್ರೀ ಗಣಪತಿ ದೇವರ 99ನೇ ವಾರ್ಷಿಕ ರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಶನಿವಾರ ಭಕ್ತಿಭಾವ ದಿಂದ ಜರುಗಿತು. ಕುಶಾಲನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದು ಪುನೀತರಾದರು.ರಥೋತ್ಸವದ ಅಂಗವಾಗಿ ಶ್ರೀ ಗಣಪತಿ ದೇವಾಲಯದಲ್ಲಿ ಬೆಳಿಗ್ಗೆ ಯಿಂದ ದೇವರಿಗೆ ಪಂಚಾಮೃತ ಅಭಿಷೇಕ, ಏಕವಾರ, ರುದ್ರಾಭಿಷೇಕ, ಪುಷ್ಪಾಲಂಕಾರ ನಂತರ ರಥಪೂಜೆ, ರಥಬಲಿ ಪೂಜಾ ಕಾರ್ಯಕ್ರಮಗಳು ಜರುಗಿದವು. ದೇವಾಲಯದ ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರ, ರಾಘವೇಂದ್ರ ಭಟ್, ಸುಬ್ರಮಣ್ಯ ಭಟ್, ಕೃಷ್ಣಮೂರ್ತಿ ಭಟ್ ತಂಡದಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ 12 ಗಂಟೆಗೆ ದೇವರ ಮೂರ್ತಿಯನ್ನು ರಥದೊಳಗೆ ಪ್ರತಿಷ್ಠಾಪಿಸಿದ (ಮೊದಲ ಪುಟದಿಂದ) ಬಳಿಕ ರಥಬಲಿ, ರಥಪೂಜೆ ಬಳಿಕ ಅಭಿಜಿನ್ ಲಗ್ನದಲ್ಲಿ ರಥೋತ್ಸವ ನಡೆಯಿತು. ಮೆರವಣಿಗೆ ಪ್ರಾರಂಭದಲ್ಲಿ ರಥದ ಮುಂಭಾಗದಲ್ಲಿ ಅಯ್ಯಪ್ಪ ವ್ರತಧಾರಿಗಳು ಕರ್ಪೂರ ಹಚ್ಚಿ ಅಯ್ಯಪ್ಪ ಸ್ಮರಣೆಯೊಂದಿಗೆ ದೇವರ ಕೀರ್ತನೆ ಹಾಡಿದರು.

ರಥಬೀದಿಯ ಉದ್ದಗಲಕ್ಕೂ ಭಕ್ತಾದಿಗಳು ರಥಕ್ಕೆ ಹಣ್ಣುಕಾಯಿ ಅರ್ಪಿಸುವದರೊಂದಿಗೆ ನಮನ ಸಲ್ಲಿಸಿ, ಪೂಜೆಯಲ್ಲಿ ಪಾಲ್ಗೊಂಡರು. ರಥೋತ್ಸವದಲ್ಲಿ ಕುಶಾಲನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಹಾಗೂ ನೆರೆಯ ಜಿಲ್ಲೆಗಳ ಸಾವಿರಾರು ಭಕ್ತರು ಪಾಲ್ಗೊಂಡರು. ದೇವಾಲಯ ದಿಂದ ರಥ ಬೀದಿಯ ಉದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈಡುಗಾಯಿ ಒಡೆದು ಹರಕೆ ತೀರಿಸುತ್ತಿದ್ದ ದೃಶ್ಯ ಗೋಚರಿಸಿತು. ರಥಬೀದಿಯ ವರ್ತಕರಿಂದ, ಭಕ್ತಾದಿಗಳಿಗೆ ತಂಪುಪಾನೀಯ, ಸಿಹಿ ವಿತರಣೆ ನಡೆಯಿತು.

ರಥೋತ್ಸವದ ನಂತರ ಅನ್ನಸಂತರ್ಪಣಾ ಸಮಿತಿ ವತಿಯಿಂದ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಸ್ಥಳೀಯ ಮಾರುಕಟ್ಟೆ ರಸ್ತೆಯಲ್ಲಿರುವ ಗಾಯತ್ರಿ ಕಲ್ಯಾಣ ಮಂಟಪ ಆವರಣದಲ್ಲಿ ಅನ್ನಸಂತರ್ಪಣೆ ನಡೆಯಿತು.

ಕುಶಾಲನಗರ ಶ್ರೀ ಗಣಪತಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್, ಉಪಾಧ್ಯಕ್ಷ ಆರ್.ಬಾಬು, ಗೌರವ ಕಾರ್ಯದರ್ಶಿ ಎಸ್.ಕೆ. ಶ್ರೀನಿವಾಸ್‍ರಾವ್, ಕಾರ್ಯಕಾರಿ ಮಂಡಳಿ ಪದಾಧಿಕಾರಿಗಳ ನೇತೃತ್ವದಲ್ಲಿ ನಡೆದ ರಥೋತ್ಸವ ಕಾರ್ಯಕ್ರಮದಲ್ಲಿ ದೇವಾಲಯದಿಂದ ರಥಬೀದಿ ಮೂಲಕ ಆಂಜನೇಯ ದೇವಸ್ಥಾನದವರೆಗೆ ಭಕ್ತಾದಿಗಳು ಜಯ ಘೋಷಣೆಗಳೊಂದಿಗೆ ಭಕ್ತಿಯಿಂದ ರಥವನ್ನು ಎಳೆದೊಯ್ದರು. ಉತ್ಸವ ಮೂರ್ತಿಯನ್ನು ರಥದಲ್ಲಿ ಇರಿಸಿ ಮೆರವಣಿಗೆ ತೆರಳುತ್ತಿದ್ದ ಸಂದರ್ಭ ಕೆಲವು ಭಕ್ತಾದಿಗಳು ಬಾಳೆ ಹಣ್ಣು, ಜವುನ ಮತ್ತು ಇತ್ಯಾದಿ ವಸ್ತುಗಳನ್ನು ರಥಕ್ಕೆ ಎಸೆಯುತ್ತಿದ್ದ ದೃಶ್ಯ ಕಂಡುಬಂತು. ಆಂಜನೇಯ ದೇವಾಲಯ ಬಳಿ ರಥ ಬರುತ್ತಿದ್ದಂತೆ ಭಕ್ತನೊಬ್ಬ ಎಸೆದ ಬಾಳೆಹಣ್ಣು ಗಣಪತಿ ದೇವರ ಬೆಳ್ಳಿ ಕಿರೀಟಕ್ಕೆ ತಾಗಿ ಹಾನಿ ಉಂಟಾದ ಘಟನೆಯೂ ಜರುಗಿತು. ಈ ನಡುವೆ ರಥದಲ್ಲಿ ಪೂಜೆ ಕಾರ್ಯದಲ್ಲಿ ತೊಡಗಿದ್ದ ಅರ್ಚಕರಿಗೂ ಭಕ್ತರ ಈ ಪರಾಕಾಷ್ಠೆಯಿಂದ ಕಿರಿಕಿರಿ ಉಂಟಾಗಿದ್ದು ಸಾಮಾನ್ಯವಾಗಿತ್ತು.

ಜಾತ್ರೆ ಸಂದರ್ಭ ಸರಗಳ್ಳತನ, ಪಿಕ್‍ಪಾಕೆಟ್ ಪ್ರಕರಣಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ರಥೋತ್ಸವ ದಾರಿ ನಡುವೆ 25ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಜಿಲ್ಲಾ ಅಪರಾಧ ಪತ್ತೆದಳದ ತಂಡದ ಸದಸ್ಯರು ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಕಾರಣ ಈ ಬಾರಿಯ ಉತ್ಸವದಲ್ಲಿ ಯಾವದೇ ರೀತಿಯ ಅಚಾತುರ್ಯಗಳು ನಡೆದಿಲ್ಲ.

ಡಿವೈಎಸ್ಪಿ ಮುರಳೀಧರ್ ನೇತೃತ್ವದಲ್ಲಿ ತಾಲೂಕಿನ ವಿವಿಧ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಕಾರ್ಯ ನಿರ್ವಹಿಸಿದರು.