ಮಡಿಕೇರಿ, ನ. 16: ಭಾರತದ ಸುರಕ್ಷಾ ವಿಚಾರದಲ್ಲಿ ಅಪ್ರಬುದ್ಧತೆಯ ಮಾತನಾಡಿ, ದೇಶದ ಸರ್ವೋಚ್ಚ ನ್ಯಾಯಾಲಯದಿಂದ ಛೀಮಾರಿಗೆ ಒಳಗಾಗಿರುವ ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ನಿಂದನೀಯ ಮಾತಿಗಾಗಿ ದೇಶದ ಕ್ಷಮೆ ಯಾಚಿಸಬೇಕೆಂದು ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಆಗ್ರಹಿಸಿದ್ದಾರೆ.

ಇಂದು ಈ ಸಂಬಂಧ ಬಿಜೆಪಿ ವತಿಯಿಂದ ನಗರದ ಜ|| ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಅವರು ಮಾತನಾಡುತ್ತಾ; ಭಾರತದ ಸುರಕ್ಷಾ ದೃಷ್ಟಿಯಿಂದ ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತು ರಾಹುಲ್ ಗಾಂಧಿ ಇಲ್ಲ-ಸಲ್ಲದ ಮಾತನಾಡುತ್ತಿರುವದು ಸರಿಯಲ್ಲವೆಂದು ಅಭಿಪ್ರಾಯಪಟ್ಟರು.

ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ. ಜಗದೀಶ್, ಕಾಳಚಂಡ ಅಪ್ಪಣ್ಣ, ಪ್ರಮುಖರಾದ ಪಿ.ಡಿ. ಪೊನ್ನಪ್ಪ, ಕಾಂಗೀರ ಸತೀಶ, ಮನು ಮಂಜುನಾಥ್, ಅರುಣ್, ಅನಿತಾ ಪೂವಯ್ಯ, ಕೆ.ಎಸ್. ರಮೇಶ್, ಸುಭಾಶ್ ಸೋಮಯ್ಯ, ಓ.ಎಸ್. ಚಿಂಗಪ್ಪ, ಉಮೇಶ್ ಸುಬ್ರಮಣಿ, ಗೌರಮ್ಮ ಮೊದಲಾದವರು ಪಾಲ್ಗೊಂಡಿದ್ದರು.