ಸೋಮವಾರಪೇಟೆ, ನ.16: ಅರಣ್ಯ ಪ್ರದೇಶದಿಂದ ಜನವಸತಿ ಪ್ರದೇಶಗಳಿಗೆ ಕಾಡಾನೆಗಳು ಲಗ್ಗೆಯಿಡುತ್ತಿದ್ದು, ಜನಸಾಮಾನ್ಯರು ಆತಂಕದಿಂದ ಜೀವನ ನಡೆಸುವಂತಾಗಿದೆ. ಕೃಷಿ ಪ್ರದೇಶಗಳಿಗೆ ಮನಸೋಯಿಚ್ಛೆ ನುಗ್ಗುತ್ತಿರುವ ಕಾಡಾನೆಗಳಿಂದಾಗಿ ಕೃಷಿಕರು ಫಸಲು ನಷ್ಟ ಅನುಭವಿಸುತ್ತಿದ್ದಾರೆ.

ಕಾಡಾನೆಗಳ ಕಾಟದಿಂದ ಭತ್ತ ಕೃಷಿಕರು ಕಂಗಾಲಾಗಿದ್ದು, ತಾಲೂಕಿನ ನಿಡ್ತ, ಮಾಲಂಬಿ, ಜೇನುಕಲ್ಲು ಬೆಟ್ಟ, ಯಡವನಾಡು ಮೀಸಲು ಅರಣ್ಯಗಳಿಂದ ಕಾಡಾನೆಗಳ ಹಿಂಡು ಭತ್ತ ಗದ್ದೆಗಳಿಗೆ ನುಗ್ಗಿ ಫಸಲನ್ನು ತಿನ್ನುವದರೊಂದಿಗೆ, ಬೆಳೆಯನ್ನು ತುಳಿದು ಹಾನಿಪಡಿಸುತ್ತಿವೆ.

ಗೌಡಳ್ಳಿ ವ್ಯಾಪ್ತಿಯ ಕೂಗೂರು ಗ್ರಾಮದ ಸತೀಶ್ ಎಂಬವರಿಗೆ ಸೇರಿದ ಗದ್ದೆಯಲ್ಲಿನ ಬೆಳೆಯನ್ನು ತುಳಿದಿರುವದರಿಂದ ಫಸಲಿಗೆ ಹಾನಿಯಾಗಿದೆ. ಚಿಕ್ಕಾರ ಗ್ರಾಮದ ಯುವಕ ಸಂಘದವರು ಊರಿನ ಗದ್ದೆಯನ್ನು ನಾಟಿ ಮಾಡಿದ್ದರು. ಬೆಳೆ ಕೈ ಸೇರುವ ಮೊದಲೆ ಕಾಡಾನೆಗಳ ನಾಶಪಡಿಸಿವೆ.

ಇದರೊಂದಿಗೆ ದೊಡ್ಡಮಳ್ತೆ ಗ್ರಾಮದ ಬೋಪಯ್ಯ ಎಂಬವರ ಭತ್ತ ಬೆಳೆಯನ್ನು ನಾಶಪಡಿಸಿದ್ದು, ಬಾಣಾವರ ಗ್ರಾಮದಲ್ಲೂ ಕಾಡಾನೆಗಳ ಹಾವಳಿಯ ಮಿತಿಮೀರಿರುವ ಬಗ್ಗೆ ಕೃಷಿಕ ವೀರಭದ್ರಪ್ಪ ತಿಳಿಸಿದ್ದಾರೆ.

ಪ್ರಸಕ್ತ ವರ್ಷದ ಅತೀವೃಷ್ಟಿ ಹಾಗೂ ಅನಾವೃಷ್ಟಿಯಿಂದ ಕಾಫಿ, ಕಾಳುಮೆಣಸು ಫಸಲು ಹಾನಿಯಾಗಿದ್ದು, ಒಂದಷ್ಟು ಭತ್ತ ಕೃಷಿ ಕೈಸೇರುವ ನಂಬಿಕೆ ಕೃಷಿಕರಲ್ಲಿತ್ತು. ಆದರೆ ಭತ್ತ ಬಲಿಯುತ್ತಿರುವಂತೆ ಕಾಡಾನೆಗಳ ಕಾಟ ಪ್ರಾರಂಭವಾಗಿದೆ. ಮೀಸಲು ಅರಣ್ಯದ ಸುತ್ತ ನಿರ್ಮಾಣವಾಗಿರುವ ಆನೆಕಂದಕವನ್ನು ದುರಸ್ತಿಪಡಿಸಬೇಕು. ವೈಜ್ಞಾನಿಕವಾಗಿ ಆನೆಕಂದಕಗಳ ನಿರ್ಮಾಣ ಮಾಡಬೇಕು. ತಪ್ಪಿದಲ್ಲಿ ಕೃಷಿಕರು ಕೃಷಿಯನ್ನೇ ಕೈಬಿಡಬೇಕಾಗಬಹುದು ಎಂದು ಚಿಕ್ಕಾರ ಗ್ರಾಮದ ಕೃಷಿಕ ಹೇಮಂತ್ ತಿಳಿಸಿದ್ದಾರೆ.

ಇದರೊಂದಿಗೆ ಕೊಡ್ಲಿಪೇಟೆ ಸಮೀಪದ ಕಟ್ಟೆಪುರ ವ್ಯಾಪ್ತಿಯಲ್ಲಿ ಸುಮಾರು 15ಕ್ಕೂ ಅಧಿಕ ಕಾಡಾನೆಗಳು ಸಂಚರಿಸುತ್ತಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ. ಅಗಳಿ ಅರಣ್ಯ ಪ್ರದೇಶದಿಂದ ಜನವಸತಿ ಪ್ರದೇಶಕ್ಕೆ ಲಗ್ಗೆಯಿಡುತ್ತಿರುವ ಕಾಡಾನೆಗಳು ಜನನಿಬಿಡ ಪ್ರದೇಶದಲ್ಲಿಯೇ ಓಡಾಡುತ್ತಿವೆ. ನಿನ್ನೆಯಷ್ಟೇ ಕಟ್ಟೆಪುರದ ಸಂತೋಷ್ ಅವರಿಗೆ ಸೇರಿದ ತೋಟದೊಳಗೆ ನುಗ್ಗಿರುವ ಆನೆಗಳ ಹಿಂಡು ತೋಟದ ಬೇಲಿಯನ್ನು ನಾಶಪಡಿಸಿವೆ. ಕಟ್ಟೆಪುರ, ಕೋಣಗಾನಹಳ್ಳಿ, ನಿಲುವಾಗಿಲು ಭಾಗದಲ್ಲಿ ಸುಮಾರು 15ಕ್ಕೂ ಅಧಿಕ ಕಾಡಾನೆಗಳು ಸಂಚರಿಸುತ್ತಿದ್ದು, ಹೇಮಾವತಿ ಹಿನ್ನೀರು ಪ್ರದೇಶದಲ್ಲಿ ನೀರಿನ ಸಂಗ್ರಹ ಅಧಿಕವಿರುವ ಹಿನ್ನೆಲೆ ಕಾಡಾನೆಗಳು ಆಚೆ ಬದಿ ತೆರಳಲಾಗದೇ ತೋಟ ಸೇರಿದಂತೆ ಜನವಸತಿ ವ್ಯಾಪ್ತಿಯಲ್ಲಿಯೇ ಸಂಚರಿಸುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.