ಕುಶಾಲನಗರ, ನ. 16: ಸ್ವಚ್ಛ ಕಾವೇರಿ, ಸ್ವಚ್ಛ ಪರಿಸರ ನಿರ್ಮಾಣ ಬಗ್ಗೆ ಜನರಿಗೆ ಅರಿವು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕುಶಾಲನಗರ ಜ್ಞಾನಗಂಗಾ ವಸತಿ ಶಾಲೆ ಮತ್ತು ಗುಡ್ಡೆಹೊಸೂರು ಐಶ್ವರ್ಯ ಸ್ವತಂತ್ರ ಪಪೂ ಕಾಲೇಜು ಆಶ್ರಯದಲ್ಲಿ ಮ್ಯಾರಥಾನ್ ಸ್ಪರ್ಧೆ ನಡೆಯಿತು.

ಕುಶಾಲನಗರ ಪಟ್ಟಣದ ಗಣಪತಿ ದೇವಾಲಯ ಮುಂಭಾಗದಿಂದ ಚಾಲನೆಗೊಂಡ ಮ್ಯಾರಥಾನ್ ಸ್ಪರ್ಧೆಯಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡರು. ಜ್ಞಾನಗಂಗಾ ವಸತಿ ಶಾಲೆಯ ಆಡಳಿತ ಮಂಡಳಿ ಪ್ರಮುಖರಾದ ಪುಲಿಯಂಡ ರಾಮ್ ದೇವಯ್ಯ ಮ್ಯಾರಥಾನ್‍ಗೆ ಚಾಲನೆ ನೀಡಿ ಮಾತನಾಡಿ, ಮೂಲ ಕಾವೇರಿಯಲ್ಲೇ ನದಿ ನೀರು ಕಲುಷಿತಗೊಳ್ಳುವದರೊಂದಿಗೆ ನೇರ ಬಳಕೆಗೆ ಯೋಗ್ಯವಾಗದಿರುವದು ಆತಂಕಕಾರಿ ಬೆಳವಣಿಗೆ. ನದಿ ಹರಿಯುವ ಗ್ರಾಮ, ಪಟ್ಟಣಗಳಲ್ಲಿ ತ್ಯಾಜ್ಯ ಕಲುಷಿತ ವಸ್ತುಗಳು ನೇರವಾಗಿ ನದಿಗೆ ಸೇರುತ್ತಿವೆ. ಈ ನಿಟ್ಟಿನಲ್ಲಿ ನದಿಯ ಸ್ವಚ್ಛತೆ, ಪಾವಿತ್ರ್ಯತೆ ಉಳಿಸುವಲ್ಲಿ ಜನರು ಜಾಗೃತರಾಗಬೇಕಾಗಿದೆ. ಕೊಡಗು ಜಿಲ್ಲೆಯಲ್ಲಿ ಅರಣ್ಯ ನಾಶಗೊಳ್ಳುತ್ತಿದ್ದು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ ಎಂದರು.

ಈ ನಿಟ್ಟಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಮ್ಯಾರಥಾನ್ ಮೂಲಕ ಜನತೆಗೆ ಅರಿವು ಮೂಡಿಸುವ ಕಾರ್ಯ ನಡೆದಿದೆ ಎಂದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್. ಚಂದ್ರಮೋಹನ್ ಕಾರ್ಯಕ್ರಮಕ್ಕೆ ಯಶಸ್ಸು ಕೋರಿದರು.

ಜ್ಞಾನಗಂಗಾ ವಸತಿ ಶಾಲೆ, ಐಶ್ವರ್ಯ ಸ್ವತಂತ್ರ ಪಪೂ ಕಾಲೇಜು, ಕುಶಾಲನಗರ ಸರಕಾರಿ ಪಪೂ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿಗಳು ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದರು.