ಚೆಟ್ಟಳ್ಳಿ, ನ. 16: ಸರ್ಕಾರಿ ಶಾಲೆಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಶಿಕ್ಷಣದ ಮೂಲಕ ಮುಂದೆ ತರುವ ಪ್ರಯತ್ನಕ್ಕೆ ದಾನಿಗಳು ಕೈಜೋಡಿಸಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಲೀಲಾವತಿ ಮನವಿ ಮಾಡಿದರು.

ಚೆನ್ನಯ್ಯನ ಕೋಟೆ ಸರ್ಕಾರಿ ಶಾಲೆಯಲ್ಲಿ ನಲಿ ಕಲಿ ಕೊಠಡಿ ಉದ್ಘಾಟಿಸಿ ಮಾತನಾಡಿ ಪಾಲಿಬೆಟ್ಟ ದಲ್ಲಿ ಕಾಫಿ ತೋಟ ಹೊಂದಿರುವ ತಮಿಳುನಾಡು ಮೂಲದ ಚೆಟ್ಟಿನಾಡು ಚಾರಿಟಬಲ್ ಟ್ರಸ್ಟ್‍ನವರು ಚೆನ್ನಂಗಿ ಹಾಗೂ ಚೆನ್ನಯ್ಯನ ಕೊಟೆ ಶಾಲೆಗಳಿಗೆ ಬೇಕಾದ ಕಂಪ್ಯೂಟರ್, ಪ್ರೊಜೆಕ್ಟರ್, ಕುರ್ಚಿ, ಟೇಬಲ್ ಸೇರಿದಂತೆ ಕಲಿಕಾ ಸಾಮಗ್ರಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ

ಎಲ್ಲಾ ದಾನಿಗಳು ಸರಕಾರಿ ಶಾಲೆಗಳ ಅಭಿವೃದ್ಧಿಗೆ ಕೈ ಜೋಡಿಸಿ ದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿ ಗಳ ಭವಿಷ್ಯ ಉಜ್ವಲವಾಗಲಿದೆ ಎಂದು ಹೇಳಿದರು. ವೀರಾಜಪೇಟೆ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗೀತಾಂಜಲಿ ಮಾತನಾಡಿ, ಚೆನ್ನಯ್ಯನ ಕೋಟೆ ಶಾಲೆಯು ಮಾದರಿ ಶಾಲೆಯಾಗಿದ್ದು, ಇಲ್ಲಿನ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ.

ಸಮಾಜ ಸೇವಕ ವಾಟೇರಿರ ಸುರೇಶ್ ಸೋಮಯ್ಯ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಪ್ರತಿಭಾವಂತರಾಗಿ ಮುನ್ನಡೆಯು ತ್ತಿದ್ದಾರೆ ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಟ್ರಸ್ಟ್‍ನ ನಿರ್ದೇಶಕ ನಟರಾಜನ್ ಮಾತನಾಡಿ, ಮಕ್ಕಳಿಗೆ ಯಾವದೇ ಕೊರತೆ ಇಲ್ಲದ ರೀತಿಯಲ್ಲಿ ಶಾಲೆಗಳಿಗೆ ಬೇಕಾದ ಅಗತ್ಯಪರಿಕರ ಗಳನ್ನು ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಇತರ ಶಾಲೆಗಳಿಗೊ ಎಲ್ಲಾ ರೀತಿಯ ಸಹಕಾರ ನೀಡುವದಾಗಿ ತಿಳಿಸಿದರು.

ಈ ಸಂದರ್ಭ ಚೆಟ್ಟಿನಾಡು ಗ್ರೂಪ್‍ನ ಪಾಲಿಬೆಟ್ಟ ದುಬಾರೆ ತೋಟದ ವ್ಯವಸ್ಥಾಪಕ ಕೊಳಂದೇ ವೇಲನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶೋಭಾ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ವೇಣುಗೋಪಾಲ್, ಪ್ರೌಢಶಾಲಾ ಮುಖ್ಯ ಶಿಕ್ಷಕ ರವಿಚಂದ್ರನ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಅಜಿತಾ, ಸುಷಾ, ಉತ್ತಪ್ಪ, ಶ್ರೀನಿವಾಸ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಗ್ಲಾಡಿ ಸಿಕ್ವೇರಾ, ಶಾಲಾ ಹಳೆ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ರಾಜೇಶ್, ಗ್ರಾಮ ಪಂಚಾಯಿತಿ ಸದಸ್ಯ ಬಿಜು, ಸರ್ವ ಸಹಾಯ ಮಿತ್ರ ಮಂಡಳಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘದ ಅಧ್ಯಕ್ಷೆ ಇಂದಿರಾ ಸೇರಿದಂತೆ ಶಾಲಾ ಶಿಕ್ಷಕರುಗಳು ಪೋಷಕರು ಹಾಜರಿದ್ದರು.