ಗೋಣಿಕೊಪ್ಪ, ನ. 14: ದಕ್ಷಿಣ ಕೊಡಗಿನ ಕಾರ್ಯ ವ್ಯಾಪ್ತಿಯನ್ನು ಒಳಗೊಂಡಂತೆ ಗೋಣಿಕೊಪ್ಪಲುವನ್ನು ಕೇಂದ್ರವನ್ನಾಗಿಸಿ ರಚಿಸಲಾಗಿರುವ ಕಾವೇರಿ ಪೊಮ್ಮಕ್ಕಡ ಕೂಟದ ಕಾರ್ಯಚಟುವಟಿಕೆಗೆ ಇಂದು ಸದಸ್ಯರುಗಳ ಪರಸ್ಪರ ಪರಿಚಯ ಸೇರಿದಂತೆ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಚಾಲನೆ ನೀಡಲಾಯಿತು.

ಪಿಯುಸಿ ವಿದ್ಯಾಭ್ಯಾಸದವರೆಗೂ ತಮ್ಮ ಮಕ್ಕಳನ್ನು ಮನೆಯಿಂದಲೇ ಶಾಲೆ,ಕಾಲೇಜುಗಳಿಗೆ ಕಳುಹಿಸುವ ಮೂಲಕ ಮಕ್ಕಳ ಬಗ್ಗೆ ತಾಯಂದಿರು ಹೆಚ್ಚಿನ ನಿಗಾ ವಹಿಸುವಂತೆ ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೊಟ್ಟಂಗಡ ವಿಜು ದೇವಯ್ಯ ಕರೆ ನೀಡಿದರು.

ಗೋಣಿಕೊಪ್ಪ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ನೂತನ ಕಾವೇರಿ ಪೊಮ್ಮಕ್ಕಡ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊಡಗಿನಲ್ಲಿ ಉತ್ತಮವಾದ ವಿದ್ಯಾ ಸಂಸ್ಥೆಗಳಿವೆ. ತಮ್ಮ ಮನೆಗಳಿಂದಲೇ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳುಹಿಸುವದರಿಂದ ನಮ್ಮ ಮುಂದೆಯೇ ಮಕ್ಕಳ ಸರಿ ತಪ್ಪುಗಳು ತಿದ್ದಬಹುದು. ಪಿಯುಸಿ ನಂತರ ಮಕ್ಕಳಲ್ಲಿ ಪ್ರೌಢತೆ ಹೆಚ್ಚುವದರಿಂದ ಮುಂದಿನ ವಿದ್ಯಾಭ್ಯಾಸಕ್ಕೆ ಹೊರ ಜಿಲ್ಲೆ ಅಥವಾ ರಾಜ್ಯಗಳಿಗೆ ಕಳುಹಿಸಿದ್ದಲ್ಲಿ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ವಿಶೇಷವಾಗಿ ಮಹಿಳೆಯರು ಪ್ರತಿಷ್ಠೆಯನ್ನು ಬಿಟ್ಟು ಜಿಲ್ಲೆಯಲ್ಲಿಯೇ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಮುಂದಾಗಬೇಕು ಎಂದರು.

ದ.ಕೊಡಗಿನ ಕಾರ್ಯವ್ಯಾಪ್ತಿ ಯನ್ನು ಒಳಗೊಂಡಂತೆ ಗೋಣಿಕೊಪ್ಪಲನ್ನು ಕೇಂದ್ರವಾಗಿರಿಸಿ ಕೊಂಡು ಕಾವೇರಿ ಕೊಡವ ಪೊಮ್ಮಕ್ಕಡ ಕೂಟ ಅಸ್ತಿತ್ವಕ್ಕೆ ತರಲು ಪ್ರಯತ್ನ ಮಾಡಲಾಗಿದೆ. ಕೊಡವ ಜನಾಂಗದ ಮಹಿಳೆಯರ ನಡುವೆ ಪರಸ್ಪರ ಸಾಮರಸ್ಯ, ಬಾಂಧವ್ಯ ವೃದ್ಧಿ, ಸಾಮಾಜಿಕ ಚಟುವಟಿಕೆ,ಆಚಾರ ವಿಚಾರ, ಸಂಸ್ಕøತಿಯ ಪರಿಪಾಲನೆಯ ಉದ್ದೇಶ ಕೂಟದ್ದಾಗಿದೆ. ನಿರೀಕ್ಷೆಗೂ ಮೀರಿ ಮಹಿಳೆಯರು ದ.ಕೊಡಗಿನ ವಿವಿಧ ಭಾಗದಿಂದ ಆಗಮಿಸಿರುವದು ಮಹಿಳೆಯರ ಒಗ್ಗಟ್ಟನ್ನು ತೋರಿಸುತ್ತಿದೆ.

ಕೂಟದ ವತಿಯಿಂದ ವಾರ್ಷಿಕವಾಗಿ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದು ಮಹಿಳೆಯರು ಆರ್ಥಿಕವಾಗಿ ಮುಂದೆ ಬರಲು ಮಹಿಳೆಯರು ತಯಾರಿಸುವ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವ ಮೂಲಕ ಅಂತಹ ಮಹಿಳೆಗೆ ಕೂಟದಿಂದ ಸಹಕಾರ ನೀಡುವದು, ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವದು, ಪರಿಸರ ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವದು ಸೇರಿದಂತೆ ವಾರ್ಷಿಕವಾಗಿ ಮಹಿಳೆಯರು ಪ್ರವಾಸ ತೆರಳುವದು ಕೂಟದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸುವದು ಕೂಟದ ಉದ್ದೇಶವಾಗಿದೆ. ಮಹಿಳೆಯರಿಗೆ ಅನ್ಯಾಯವಾದಾಗ ಅದರ ವಿರುದ್ಧ ಧ್ವನಿ ಎತ್ತುವ ಮೂಲಕ ಮಹಿಳೆಗೆ ನ್ಯಾಯ ಕೊಡಿಸಲಾಗುವದೆಂದು ವಿಜು ದೇವಯ್ಯ ಅಭಿಪ್ರಾಯಪಟ್ಟರು. ಕೂಟದ ಕಾನೂನು ಸಲಹೆಗಾರ್ತಿಯಾಗಿ ನೆಲ್ಲಮಕ್ಕಡ ಪ್ರತಿಷ್ಟ ಮಾದಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಚೇಂದಂಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿದರು.ಖಜಾಂಜಿ ವಿನ್ಸಿ ಅಪ್ಪಯ್ಯ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕರಾದ ಹೊಟ್ಟೇಂಗಡ ತಾರಾ ವಿಶ್ವನಾಥ್, ಅಡ್ಡೇಂಗಡ ಸವಿತಾ ನಂಜಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಹಿಳೆಯರ ನೃತ್ಯಗಳು ಗಮನ ಸೆಳೆದವು. ಪೊನ್ನಂಪೇಟೆ ಕೊಡವ ಸಮಾಜದ ಆಶಾ ಪ್ರಕಾಶ್ ತಂಡದ ಮಹಿಳೆಯರು ನೃತ್ಯ ಪ್ರದರ್ಶನ ಮಾಡಿದರು. ಮಹಿಳೆಯರಿಗಾಗಿ ವಿವಿಧ ವಿನೋದಾವಳಿ ನಡೆದವು. ದ.ಕೊಡಗಿನ ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕೊಡವ ಉಡುಪು ಧರಿಸಿ ಆಗಮಿಸುವ ಮೂಲಕ ಗಮನ ಸೆಳೆದರು.