ಕುಶಾಲನಗರ, ನ. 14: ಭಾಷೆಯ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳು ಮೆರವಣಿಗೆ, ಭಾಷಣ, ಘೋಷಣೆಗಳಿಗೆ ಮಾತ್ರ ಸೀಮಿತವಾಗಬಾರದು ಎಂದು ಕುಶಾಲನಗರ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಬಿ.ಆರ್.ನಾರಾಯಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಶಾಲನಗರ ಬಿಜೆಎಸ್ ವೃತ್ತದ ಬಳಿ ಶಂಕರ್ನಾಗ್ ಆಟೋ ನಿಲ್ದಾಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ನಾರಾಯಣ ಭಾಷೆಯನ್ನು ಪರಿಪೂರ್ಣವಾಗಿ ಅನುಷ್ಠಾನ ಗೊಳಿಸುವ ಪ್ರಯತ್ನ ಮಾಡಿದರೆ ಮಾತ್ರ ಕಾರ್ಯಕ್ರಮದ ಉದ್ದೇಶ ಈಡೇರಲು ಸಾಧ್ಯ ಎಂದರು.
ಕನ್ನಡ ಧ್ವಜಾರೋಹಣ ನೆರವೇರಿಸಿದ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್. ಚಂದ್ರಮೋಹನ್, ಕನ್ನಡ ಕಾರ್ಯಕ್ರಮಗಳು ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗ ಬಾರದು. ವರ್ಷದ ಎಲ್ಲಾ ದಿನಗಳಲ್ಲಿ ಭಾಷೆಯ ಉಳಿವು, ಅಭಿವೃದ್ಧಿಗೆ ಶ್ರಮಿಸುವಂತಾಗಬೇಕು. ಆಟೋ ಚಾಲಕರು ಪ್ರಯಾಣಿಕರೊಡನೆ ಕನ್ನಡ ರಾಯಭಾರಿಗಳಂತೆ ಕಾರ್ಯನಿರ್ವ ಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಂಕರ್ನಾಗ್ ಆಟೋ ಸಂಘಟನೆಯ ಪ್ರಮುಖ ಸಹದೇವ್ ಪ್ರಾಸ್ತಾವಿಕ ನುಡಿಗಳಾಡಿದರು. ಸಂಘಟನೆಯ ಪದಾಧಿಕಾರಿಗಳಾದ ಕುಮಾರ್, ಚೇತನ್, ಪ್ರಮೋದ್, ಮಂಜಣ್ಣ, ಶಿವಣ್ಣ, ಮಹದೇವ್, ಚಂದ್ರಶೇಖರ್, ಪ್ರಜ್ವಲ್, ಸಿದ್ದು ಮತ್ತಿತರರು ಇದ್ದರು.