ಚೆಟ್ಟಳ್ಳಿ, ನ. 15 : ಕೊಡಗಿನ ಕೊಟ್ಟಮುಡಿಯಲ್ಲಿ ಕಾರ್ಯಾಚರಿಸುತ್ತಿರುವ ಧಾರ್ಮಿಕ ಲೌಕಿಕ ಸಮನ್ವಯ ವಿದ್ಯಾಸಂಸ್ಥೆ ಮರ್ಕಝುಲ್ ಹಿದಾಯ ಸಂಸ್ಥೆಯ ಪಬ್ಲಿಕ್ ಸ್ಕೂಲ್ ನೂತನ ಕಟ್ಟಡದ ಉದ್ಘಾಟನೆಯನ್ನು ಭಾರತದ ಗ್ರಾಂಡ್ ಮುಫ್ತಿ, ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯಾರ್ ಉದ್ಘಾಟಿಸಿದರು.
ಪ್ರಳಯ ಭಾಧಿತ ಪ್ರದೇಶವಾದ ಕೊಂಡಂಗೇರಿ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಸ್ವಿಸ್ ಗೋಲ್ಡ್ ವತಿಯಿಂದ ನೀಡುವ ಸಹಾಯದ ಮೊದಲ ಭಾಗದ ಹಣವನ್ನು ಎ .ಪಿ ಉಸ್ತಾದರಿಗೆ ಹಸ್ತಾಂತರಿಸಲಾಯಿತು. ನಂತರ ಉಸ್ತಾದರು ಹುಬ್ಬುರ್ರಸುಲ್ ಪ್ರಭಾಷಣ ನಡೆಸಿದರು. ಪ್ರವಾದಿ ಪೈಗಂಬರ್ (ಸ್ವ ಅ) ಅವರ ಸಂದೇಶಗಳನ್ನು ಪಾಲಿಸುವ ಒಬ್ಬ ವ್ಯಕ್ತಿಯು ಭಯೋತ್ಪಾದಕನಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಪ್ರವಾದಿಯವರ ಮಾನವೀಯ ಸಂದೇಶಗಳನ್ನು , ಅವರ ಜೀವನ ಚರಿತ್ರೆಯನ್ನು ವಿವರಿಸಿದರು. ಮರ್ಕಝ್ ಸಂಸ್ಥೆಗಳ ಬಗ್ಗೆ ವಿವರಿಸಿದರು. ಪ್ರಳಯ ಬಾಧಿತ ಪ್ರದೇಶಗಳ ಸಂತ್ರಸ್ತರಿಗೆ ಮನೆನಿರ್ಮಾಣಕ್ಕೆ ಸಂಬಂಧಿಸಿದಂತೆ ಚರ್ಚಿಸಿ ಕ್ರಮಕೈಗೊಳ್ಳವದಾಗಿ ಹೇಳಿದರು. ಮರ್ಕಝ್ ಹಿದಾಯ ಸಂಸ್ಥೆಗೆ ಬರುವ 2020ನೇ ವರ್ಷಕ್ಕೆ 20ವರ್ಷಗಳು ಪೂರ್ತಿಗೊಳ್ಳುತ್ತಿದ್ದು; ಸಮ್ಮೇಳನ ನಡೆಸಬೇಕೆಂದು ತಿಳಿಸಿದರು. ಕೊಡಗು ಜಿಲ್ಲಾ ನಾಯಿಬ್ ಖಾಝಿ ಮಹ್ಮುದ್ ಮುಸ್ಲಿಯಾರ್, ಶಾಲಾ ಕಟ್ಟಡದ ಇಂಜಿನಿಯರ್ ಅವರನ್ನು ಸನ್ಮಾನಿಸಲಾಯಿತು. ಮರ್ಕಝ್ ಹಿದಾಯದಲ್ಲಿ ವಿದ್ಯಾಭ್ಯಾಸಿಸಿ ದೇಶದ ವಿವಿಧ ಭಾಗಗಳಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ತೆರಳಿರುವ 9 ವಿದ್ಯಾರ್ಥಿಗಳಿಗೆ ಸನದ್ ನೀಡಲಾಯಿತು.
ವೇದಿಕೆಯಲ್ಲಿ ಕೂರ್ಗ್ ಜಂಞಯ್ಯತುಲ್ ಉಲಮಾ ಪ್ರ.ಕಾರ್ಯದರ್ಶಿ ಅಶ್ರಫ್ ಅಹ್ಸನಿ, ಶಾದುಲಿ ಫೈಝಿ , ಮಜೀದ್ ಮುಸ್ಲಿಯಾರ್ ಕೊಂಡಂಗೇರಿ, ಕರ್ನಾಟಕ ರಾಜ್ಯ ಎಸ್ ವೈ ಎಸ್ ಇಸಾಬ ಅಮೀರ್ ಉಮರ್ ಸಖಾಫಿ , ಎಸ್ ಎಸ್ ಎಫ್ ಕೊಡಗು ಜಿಲ್ಲಾಧ್ಯಕ್ಷ ಅಝೀಝ್ ಸಖಾಫಿ ಕೊಡ್ಲಿಪೇಟೆ, ಸಯ್ಯಿದ್ ಖಾತಿಂ ತಂಙಳ್ ಎರುಮಾಡ್, ಮರ್ಕಝ್ ಹಿದಾಯತ್ ದಅವಾ ಕಾಲೇಜು ಪ್ರಾಂಶುಪಾಲ ಶಿಹಾಬುದ್ದೀನ್ ನೂರಾನಿ, ಅಬೂಬಕರ್ ಹಾಜಿ ಹಾಕತ್ತೂರು, ಅಹಮದ್ ಹಾಜಿ ಕೊಟ್ಟಮುಡಿ, ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಕಾರ್ಯದರ್ಶಿ ಅಹ್ಮದ್ ಹಾಜಿ ಕುಂಜಿಲ, ಹಾರಿಸ್ ಕೊಟ್ಟಮುಡಿ, ಉಮರ್ ಸಖಾಫಿ ಕಂಬಳಬೆಟ್ಟು, ಎರ್ಮು ಹಾಜಿ ಕಾಟ್ರಕೊಲ್ಲಿ, ಯೂಸುಫ್ ಕೊಂಡಂಗೇರಿ, ಇಲ್ಯಾಸ್ ಮಡಿಕೇರಿ ಇನ್ನಿತರ ಧಾರ್ಮಿಕ ಸಾಮಾಜಿಕ ನೇತಾರರು, ಮರ್ಕಝ್ ವಿದ್ಯಾರ್ಥಿಗಳು, ಎಸ್.ಎಸ್.ಎಫ್ ಹಾಗೂ ಎಸ್.ವೈ.ಎಸ್. ಕಾರ್ಯಕರ್ತರು ಭಾಗವಹಿಸಿದ್ದರು.
ಮರ್ಕಝ್ ಹಿದಾಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ ಸ್ವಾಗತ ಭಾಷಣ ನಿರ್ವಹಿಸಿದರು. ಪ್ರಮುಖ ಅತಿಥಿ ಮರ್ಕಝ್‍ನ ಸಹಾಯ ಹಸ್ತವೂ ಆದ ಶೇಖ್ ನಾಸರ್ ಅಲ್ ಖಮ್ಮಾಸ್, ಸುಲ್ತಾನುಲ್ ಉಲಮಾ ಎ. ಪಿ. ಉಸ್ತಾದ್, ಮರ್ಕಝ್ ಹಿದಾಯ ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ ಅವರನ್ನು ಮರ್ಕಝ್ ಹಿದಾಯ ವತಿಯಿಂದ ಸನ್ಮಾನಿಸಲಾಯಿತು.