ಮಡಿಕೇರಿ, ನ. 15: ಅರಣ್ಯ ಹಕ್ಕು ಕಾಯ್ದೆಯಡಿ ಬಾಕಿ ಇರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ಅಗತ್ಯ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚಿಸಿದ್ದಾರೆ.
ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅರಣ್ಯ ಹಕ್ಕು ಕಾಯ್ದೆಯಡಿ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಉಪ ವಿಭಾಗ ಮಟ್ಟದಲ್ಲಿ ಸಭೆ ನಡೆಸಿ ಜಿಲ್ಲಾ ಮಟ್ಟಕ್ಕೆ ಸಲ್ಲಿಸುವಂತೆ ಅವರು ನಿರ್ದೇಶನ ನೀಡಿದರು.
ಈ ಬಗ್ಗೆ ಗಮನ ಸೆಳೆದ ಸಮಿತಿ ಸದಸ್ಯರಾದ ಕೆ. ಪಳನಿ ಪ್ರಕಾಶ್ ಅವರು ಅರಣ್ಯ ಹಕ್ಕು ಕಾಯ್ದೆಯನ್ನು ಮೂಲ ನಿವಾಸಿ ಗಿರಿಜನರಿಗೆ ಸಮರ್ಪಕವಾಗಿ ತಲಪಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಮನವಿ ಮಾಡಿದರು.
ತಟ್ಟೆಕೆರೆ ಹಾಡಿಯಲ್ಲಿ ಗಿರಿಜನರಿಗೆ ಮೂಲ ಸೌಲಭ್ಯ ಕಲ್ಪಿಸಲು ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದರು. ಸಭೆಯ ಆರಂಭದಲ್ಲಿ ಮಾತನಾಡಿದ ಸಮಿತಿ ಸದಸ್ಯರಾದ ಮುತ್ತಪ್ಪ ಅವರು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹಲವು ಪರಿಶಿಷ್ಟ ಕುಟುಂಬಗಳು ಮನೆ, ಮಠ ಕಳೆದುಕೊಂಡಿದ್ದು, ಅಂತವರಿಗೆ ಪ್ರಕೃತಿ ವಿಕೋಪದಡಿ ಅಗತ್ಯಮೂಲ ಸೌಲಭ್ಯ ಕಲ್ಪಿಸಬೇಕಿದೆ ಎಂದು ಮನವಿ ಮಾಡಿದರು.
ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ, ಮಳೆಯಿಂದ ಹಾನಿಯಾದ ಕುಟುಂಬಗಳಿಗೆ ಜಿಲ್ಲಾಡಳಿತದಿಂದ ಪರಿಹಾರ ವಿತರಿಸಲಾಗಿದೆ. ಕುಟುಂಬದ ಹೆಸರು ಬಿಟ್ಟು ಹೋಗಿದ್ದಲ್ಲಿ ಮಾಹಿತಿ ಒದಗಿಸಬಹುದಾಗಿದೆ ಎಂದು ತಿಳಿಸಿದರು. ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆತಟ್ಟು ಗ್ರಾಮದಲ್ಲಿ 37 ಕುಟುಂಬಗಳು ವಾಸ ಮಾಡುತ್ತಿದ್ದು, ಅಂಗನವಾಡಿ ನಿರ್ಮಿಸಬೇಕಿದೆ. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಾಗ ಒದಗಿಸಬೇಕಿದೆ. ಹಾಗೆಯೇ ವಿದ್ಯುತ್ ಸಂಪರ್ಕ, ಬಸ್ ಸೌಲಭ್ಯ ಹಾಗೂ ರಸ್ತೆ, ಸಂಚಾರಿ ನ್ಯಾಯ ಬೆಲೆ ಅಂಗಡಿ ಕಲ್ಪಿಸಬೇಕಿದೆ ಎಂದು ಮುತ್ತಪ್ಪ ಮನವಿ ಮಾಡಿದರು.
ಸಮಿತಿ ಸದಸ್ಯರಾದ ಕೆ. ಪಳನಿ ಪ್ರಕಾಶ್ ಮಾತನಾಡಿ, ವೀರಾಜಪೇಟೆ ತಾಲೂಕಿನ ಅರುವತ್ತೊಕ್ಲು ಕಾರೇಕಾಡು ಪೈಸಾರಿಯಲ್ಲಿ ಶತಮಾನಗಳಿಂದ ವಾಸವಿರುವ ಪರಿಶಿಷ್ಟ ವರ್ಗದ ಪಣಿಯ ಸಮುದಾಯದ 25 ಕುಟುಂಬದವರ ಮನೆಗಳು ಧಾರಾಕಾರ ಮಳೆಯಿಂದಾಗಿ ಶಿಥಿಲಗೊಂಡಿದ್ದು, ಮನೆ ನಿರ್ಮಿಸಿಕೊಡಬೇಕು. ಹಾಗೆಯೇ ರಸ್ತೆ ಹಾಗೂ ಶೌಚಾಲಯ, ಬೀದಿ ದೀಪ, ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಪೊನ್ನಂಪೇಟೆ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ 31 ವಿದ್ಯಾರ್ಥಿಗಳು ಹಾಗೂ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ 52 ವಿದ್ಯಾರ್ಥಿನಿಯರು ಇದ್ದು, ವೀರಾಜಪೇಟೆ ಪಟ್ಟಣದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ನಿಲಯ ಮೇಲ್ವಿಚಾರಕರಿಲ್ಲ. ರಾತ್ರಿ ಕಾವಲುಗಾರರು ಇರುವದಿಲ್ಲ. ಇದರ ಬಗ್ಗೆ ತುರ್ತು ಕ್ರಮವನ್ನು ಕೈಗೊಳ್ಳಬೇಕು ಎಂದು ಪಳನಿ ಪ್ರಕಾಶ್ ಕೋರಿದರು.
ವೀರಾಜಪೇಟೆ ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ ಮೆಟ್ರಿಕ್ ಪೂರ್ವ ಹಾಗೂ ನಂತರದ ವಿದ್ಯಾಭ್ಯಾಸ ಮುಂದುವರೆಸುತ್ತಿರುವ ಹೆಣ್ಣು ಮಕ್ಕಳಿದ್ದು ಅಲ್ಲಿನ ಕಟ್ಟಡ ಮಳೆಯಿಂದ ಸೋರುತ್ತಿದ್ದು, ಇದನ್ನು ಸರಿಪಡಿಸಬೇಕು. ಹಾಗೆಯೇ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬಾಲಕಿಯರು 56 ಮತ್ತು ಬಾಲಕರು 66 ಒಟ್ಟು 132 ಮಕ್ಕಳಿದ್ದು, ಶಾಶ್ವತ ಕಟ್ಟಡ ಒದಗಿಸಬೇಕು ಎಂದು ಅವರು ಮನವಿ ಮಾಡಿದರು.
ಸಮಿತಿ ಸದಸ್ಯ ಸುಕುಮಾರ್ ಹಾಕತ್ತೂರು ಗ್ರಾ.ಪಂ. ವ್ಯಾಪ್ತಿಯ ಒಂಬತ್ತು ಮನೆ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಮನವಿ ಮಾಡಿದರು. ಮತ್ತೊಬ್ಬ ಸಮಿತಿ ಸದಸ್ಯ ಕೆಂಪ ವೀರಾಜಪೇಟೆ ತಾಲೂಕಿನ ತಟ್ಟೆಕೆರೆ ಹಾಡಿಯಲ್ಲಿ 50 ವರ್ಷಗಳಿಂದ 57 ಕುಟುಂಬಗಳು ವಾಸ ಮಾಡುತ್ತಿದ್ದು, ಮೂಲ ಸೌಲಭ್ಯವಿಲ್ಲದೆ ಬದುಕುತ್ತಿದ್ದೇವೆ. ಕನಿಷ್ಟ ಮೂಲ ಸೌಲಭ್ಯವನ್ನಾದರೂ ಕಲ್ಪಿಸಬೇಕು ಎಂದು ಕೋರಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಭಾರತಿ, ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪೌಲ್ ಅಂಥೋಣಿ ಹಲವು ಮಾಹಿತಿ ನೀಡಿದರು.
ಸಮಿತಿ ಸದಸ್ಯರಾದ ನವೀನ್ ದೇರಳ, ಜಾಯ್ಸ್ ಮೆನೇಜಸ್, ಡಿವೈಎಸ್ಪಿ ದಿನೇಶ್ ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜು, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿ ಡಾ. ಶಿವಕುಮಾರ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆಂಚಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಕೆ. ರಾಧ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀ ಬಾಯಿ, ವೀರಾಜಪೇಟೆ ಐಟಿಡಿಪಿ ಇಲಾಖಾ ಅಧಿಕಾರಿ ಗುರುಶಾಂತಪ್ಪ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಶೇಖರ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್, ತಾ.ಪಂ. ಇಒ ಲಕ್ಷ್ಮೀ, ಸುನಿಲ್ ಕುಮಾರ್, ಇತರರು ಇದ್ದರು.