ಸೋಮವಾರಪೇಟೆ, ನ. 14: ಸ್ವಂತ ಉಪಯೋಗಕ್ಕೆ ಮರಗಳನ್ನು ಕಡಿಯಲು ಪರವಾನಗಿ ನೀಡಬೇಕೆಂದು ತಾಲೂಕು ರೈತ ಹೋರಾಟ ಸಮಿತಿ ಹಾಗೂ ತಾಲೂಕು ಕಾಫಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ರೈತ ಹೋರಾಟ ಸಮಿತಿ ಅಧ್ಯಕ್ಷ ಲಿಂಗೇರಿ ರಾಜೇಶ್, ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ರೈತ ವಿರೋಧಿ ನೀತಿಯನ್ನು ಮುಂದುವರೆಸಿದ್ದಾರೆ. ರೈತರು ಮನೆ, ಕೊಟ್ಟಿಗೆ ನಿರ್ಮಿಸಲು 100ಘನ ಅಡಿ ಮರ ಕಡಿಯಲು ಅನುಮತಿ ನೀಡುತ್ತಿಲ್ಲ ಎಂದರು.
ಸ್ವಂತ ಉಪಯೋಗಕ್ಕೆ ಮರ ಕಡಿಯಲು ಅನುಮತಿ ಕೋರಿ ತಾಲೂಕಿನಿಂದ 200ಕ್ಕಿಂತ ಅಧಿಕ ಅರ್ಜಿಗಳು ಡಿ.ಸಿ.ಎಫ್. ಕಚೇರಿಗೆ ಸಲ್ಲಿಕೆಯಾಗಿವೆ. ಆದರೆ ಪರವಾನಗಿ ನೀಡುತ್ತಿಲ್ಲ. 15 ದಿನಗಳ ಒಳಗೆ ಅನುಮತಿ ನೀಡಬೇಕು. ತಪ್ಪಿದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಬಿ.ಎಂ. ಲವ, ಪುಟ್ಟಸ್ವಾಮಿ, ಕೃಷಿಕ ಜಿ.ಎಸ್. ಮಧುಕುಮಾರ್ ಉಪಸ್ಥಿತರಿದ್ದರು.