*ಗೋಣಿಕೊಪ್ಪಲು, ನ. 14: ಆಶ್ರಮ ಶಾಲೆಗಳು ತನ್ನ ಗುಣಮಟ್ಟ ಕಳೆದುಕೊಳ್ಳುತ್ತಾ ಸರಿದು ಹೋಗುತ್ತಿರುವ ಸಂದರ್ಭವೇ ನಾಲ್ಕೇರಿ, ಕೋತೂರು ಗ್ರಾಮದ ಬೊಮ್ಮಾಡು ಆಶ್ರಮ ವಸತಿ ಶಾಲೆ ಅತ್ಯುತ್ತಮ ನಿರ್ವಹಣೆಯ ಮೂಲಕ ಗುಣಮಟ್ಟದ ಶಿಕ್ಷಣದ ಜತೆಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.
ಕೆಲ ದಿನಗಳ ಹಿಂದೆ ಶಾಲೆಗೆ ಭೇಟಿ ನೀಡಿದ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಶಾಲಾ ವಾತಾವರಣ ಹಾಗೂ ವಸತಿ ನಿಲಯದ ನಿರ್ವಹಣೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವ ಮೂಲಕ ಮಾದರಿ ಶಾಲೆಯಾಗಿದೆ. 1952ರಲ್ಲಿ ಸರ್ಕಾರ ರಾಜ್ಯದಲ್ಲಿ ಗಿರಿಜನ ಸಮುದಾಯದ ಮಕ್ಕಳ ಶೈಕ್ಷಣಿಕ ಸಬಲೀಕರಣಕ್ಕಾಗಿ ಪ್ರಾರಂಭಿಸಿದ ಆಶ್ರಮ ಶಾಲೆಯು ಈ ಮೂಲಕ ಸಾರ್ಥಕತೆಯನ್ನು ಕಂಡುಕೊಳ್ಳುತ್ತಿ ರುವದು ಸಾರ್ವಜನಿಕರಲ್ಲಿ ಶಾಲೆಯ ಬಗ್ಗೆ ಅಭಿಮಾನ ಮೂಡಿಸಿದೆ.
ಖಾಸಗಿ ಶಾಲೆಗಳ ವ್ಯವಸ್ಥೆಯಲ್ಲಿ ಸುಸಜ್ಜಿತ ಕಟ್ಟಡ ಹಾಗೂ ಸಮರ್ಪಕ ಸೌಲಭ್ಯ ಹೊಂದಿರುವ ಈ ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ ಪಠ್ಯ ಪ್ರವಚನಗಳು ನಡೆಯುತ್ತವೆ.
ಬುಡಕಟ್ಟು ಸಮುದಾಯದ ಸುಮಾರು 151 ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತಮ ಕೊಠಡಿಗಳು, ಹಾಸಿಗೆಗಳು, ಉತ್ತಮ ಆಹಾರ, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮಕ್ಕಳಿಂದ ಕೈತೋಟಗಳ ನಿರ್ಮಾಣ, ಹೂ ತೋಟಗಳು ಮಕ್ಕಳ ಕೈಗಳಲ್ಲಿ ಅರಳುತ್ತಿವೆ.
ಕಂಪ್ಯೂಟರ್ ಕಲಿಕೆಗಳು, ಗ್ರಂಥಾಲಯಗಳು, ಯೋಗ, ವ್ಯಾಯಾಮಗಳು ಮಕ್ಕಳ ಕಲಿಕೆಗೆ ಸಹಕಾರಿಯಾಗಿವೆ.
ಶಾಲೆಯಲ್ಲಿ ಸಿಗುವ ಗುಣಮಟ್ಟದ ಶಿಕ್ಷಣ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಅರಿತುಕೊಳ್ಳುವ ಭಾಗ್ಯ ದೊರೆತಿದೆ. ಇತ್ತೀಚೆಗೆ ನಡೆದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ರಾಜ್ಯ ಮಟ್ಟವನ್ನು ಪ್ರತಿನಿಧಿಸಿದ ಹೆಮ್ಮೆ ಈ ವಸತಿ ಶಾಲೆಯ ವಿದ್ಯಾರ್ಥಿಗಳದ್ದಾಗಿದೆ.
ಉತ್ತಮ ಕಟ್ಟಡದಲ್ಲಿ ವ್ಯವಸ್ಥಿತವಾಗಿ ನಿರ್ವಹಣೆಯಾ ಗುತ್ತಿರುವ ಆಶ್ರಮ ಶಾಲೆಯಲ್ಲಿ ಮುಖ್ಯ ಶಿಕ್ಷಕರನ್ನೊಳಗೊಂಡಂತೆ 6 ಮಂದಿ ಶಿಕ್ಷಕರು ಕಾರ್ಯನಿರ್ವ ಹಿಸುತ್ತಿದ್ದಾರೆ. ಐವರು ಅಡುಗೆ ಸಿಬ್ಬಂದಿಗಳಾಗಿ ಕರ್ತವ್ಯದಲ್ಲಿದ್ದಾರೆ.
ಸುಮಾರು 150 ಮಕ್ಕಳಲ್ಲಿ 104 ಮಕ್ಕಳು ವಸತಿ ವ್ಯವಸ್ಥೆಯನ್ನು ಪಡೆದುಕೊಂಡಿದ್ದಾರೆ. ಶಿಸ್ತುಬದ್ಧವಾದ ಜೀವನ ನಡೆಸಲು ಪ್ರಾಥಮಿಕ ಹಂತದಲ್ಲೇ ಇಲ್ಲಿನ ಶಿಕ್ಷಕರು ತಿಳಿಸಿಕೊಡುತ್ತಿದ್ದಾರೆ. ಸ್ವಚ್ಛತೆಯ ಬಗ್ಗೆಯೂ ಅರಿವಿಕೆ ನೀಡುವ ಶಿಕ್ಷಕರು ಆಶ್ರಮದ ಸುತ್ತಲಿನ ವಾತಾವರಣವನ್ನು ಶುಚಿಯಾಗಿಟ್ಟು ಇತರ ಆಶ್ರಮ ಶಾಲೆಗಳಿಗೆ ಮಾದರಿಯಾಗಿ ವಸತಿ ಶಾಲೆಯ ಒಂದು ಹೊಸ ಆಶಾಕಿರಣವನ್ನು ಮೂಡಿಸಿದ್ದಾರೆ.