ಮಡಿಕೇರಿ, ನ. 15: ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿಜಿವಿಎಸ್) ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಆಯ್ದ ಕ್ಲಸ್ಟರ್‍ಗಳಲ್ಲಿ ಈ ತಿಂಗಳಲ್ಲಿ ಮಕ್ಕಳ ವಿಜ್ಞಾನ ಹಬ್ಬ ಆಚರಿಸುವ ಕುರಿತು ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಮಕ್ಕಳ ವಿಜ್ಞಾನ ಹಬ್ಬದ ರೂಪುರೇಷೆ ಹಾಗೂ ಉದ್ದೇಶಗಳ ಕುರಿತು ಮಾಹಿತಿ ನೀಡಿದ ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸಮಿತಿಯ ಪದಾಧಿಕಾರಿಯೂ ಆದ ರಾಜ್ಯ ಸಂಪನ್ಮೂಲ ವ್ಯಕ್ತಿ ಎಸ್. ವಜ್ರಮುನಿ, ರಾಜ್ಯದ 623 ಕ್ಲಸ್ಟರ್ ಗಳಲ್ಲಿ ಮಕ್ಕಳ ವಿಜ್ಞಾನ ಹಬ್ಬವನ್ನು ಹಮ್ಮಿಕೊಂಡಿದೆ. ರಾಷ್ಟ್ರೀಯ ಆವಿಷ್ಕಾರ ಯೋಜನೆಯಡಿಯಲ್ಲಿ ನಡೆಯುವ ಈ ಹಬ್ಬಗಳ ಕೇಂದ್ರ ವಿಷಯವು ಏನು? ಏಕೆ? ಆಗಿದ್ದು, ಮಕ್ಕಳಲ್ಲಿ ಸ್ವ ಕಲಿಕೆ, ವೈಜ್ಞಾನಿಕ ಪ್ರಜ್ಞೆ ಹಾಗೂ ಪ್ರಶ್ನಿಸುವ ಮನೋಭಾವನೆ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದರು.

ಮಕ್ಕಳಲ್ಲಿ ಕಲಿಕೆಯ ಪ್ರೇರಣೆ, ಕುತೂಹಲ, ಕ್ರಿಯಾಶೀಲತೆ ಹಾಗೂ ಸೃಜನಶೀಲತೆ ಬೆಳೆಸುವದರೊಂದಿಗೆ ಅವರಲ್ಲಿ ತಾರ್ಕಿಕತೆ, ಸಂಶೋಧನಾ ಪ್ರವೃತ್ತಿ ಬೆಳೆಸುವ ದಿಸೆಯಲ್ಲಿ ತರಗತಿಯ ಚಟುವಟಿಕೆಗಳಿಗೆ ಪೂರಕ ವಾಗಿ ಪಠ್ಯೇತರ ಚಟುವಟಿಕೆಗಳ ಮೂಲಕ ತಮ್ಮ ಕಲಿಕೆಯನ್ನು ಉತ್ತಮಪಡಿಸಿಕೊಂಡು ಭವಿಷ್ಯದ ಉತ್ತಮ ನಾಗರಿಕರಾಗಿ ರೂಪು ಗೊಳ್ಳಲು ಈ ಹಬ್ಬವು ಪ್ರೇರಣೆಯಾ ಗಲಿದೆ ಎಂದರು. ಕ್ಲಸ್ಟರ್‍ಮಟ್ಟದಲ್ಲಿ ನಡೆಯುವ ಮಕ್ಕಳ ಹಬ್ಬದಲ್ಲಿ 150 ಮಕ್ಕಳು, ಜಿಲ್ಲಾಮಟ್ಟದ ಹಬ್ಬದಲ್ಲಿ 300 ಮಕ್ಕಳು ಭಾಗವಹಿಸಲಿದ್ದಾರೆ.

ಡಿಸೆಂಬರ್‍ನಲ್ಲಿ ಮಂಡ್ಯದಲ್ಲಿ ನಡೆಯಲಿರುವ ಮಕ್ಕಳ ವಿಜ್ಞಾನ ಹಬ್ಬದಲ್ಲಿ 500 ಮಕ್ಕಳು ಭಾಗವಹಿಸ ಲಿದ್ದಾರೆ. ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಸಹಕಾರಿ ಯಾಗಿರುವ ಈ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ವಜ್ರಮುನಿ ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾರ್ಯ ಕ್ರಮದ ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಕಾಶೀನಾಥ್, ಮಕ್ಕಳ ವಿಜ್ಞಾನ ಹಬ್ಬವನ್ನು ಯಶಸ್ವಿಯಾಗಿ ಅನುಷ್ಠಾನ ಗೊಳಿಸುವ ಕುರಿತು ಚರ್ಚಿಸಿದರು.

ನವೆಂಬರ್ ತಿಂಗಳಿನಲ್ಲಿ 6, 7 ಮತ್ತು 8 ತರಗತಿಯ ಮಕ್ಕಳಿಗೆ ಜಿಲ್ಲೆಯ 10 ಕ್ಲಸ್ಟರ್‍ಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುವದು. ಇದಕ್ಕೆ ಪೂರ್ವಭಾವಿಯಾಗಿ ತಾ. 19 ಮತ್ತು 20 ರಂದು ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಸಿಆರ್‍ಪಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳಿಗೆ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದರು.

ಬಿಜಿವಿಸ್‍ನ ಸಂಪನ್ಮೂಲ ವ್ಯಕ್ತಿ ಪಿ.ಕೆ. ಲತೀಫ್, ಮಕ್ಕಳ ವಿಜ್ಞಾನ ಹಬ್ಬದ ಸಂಘಟನೆ ಮತ್ತು ತರಬೇತಿ ಕಾರ್ಯಕ್ರಮದ ಕುರಿತು ತಿಳಿಸಿದರು. ಕಾರ್ಯಕ್ರಮದ ಸಂಯೋಜಕಿ ವಿಜ್ಞಾನ ವಿಷಯ ಪರಿವೀಕ್ಷಕಿ ಎಂ.ಜೆ. ಗಂಗಮ್ಮ, ಈ ವಿಜ್ಞಾನ ಹಬ್ಬ ಸಂಘಟಿಸುವ ಕುರಿತು ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಟಿ.ಜಿ. ಪ್ರೇಮಕುಮಾರ್, ಈ ಹಬ್ಬದ ಸಂಘಟನೆಯು ಆರಂಭಿಕ ಹಂತದಿಂದಲೇ ಸಮುದಾಯದ ಸಂಘಟನೆ ಆರಂಭಿಸಬೇಕು ಎಂದರು. ವಿಷಯ ಪರಿವೀಕ್ಷಕಿ ಕೆ.ಆರ್. ಬಿಂದು, ಸಂಪನ್ಮೂಲ ಶಿಕ್ಷಕರಾದ ಡಿ. ಚಂದನ, ಬಿ.ಕೆ. ಲಲಿತ, ಆರ್. ದಿವಾಕರ್, ಸಮತ ತರಬೇತಿ ಸಂಘಟನೆ ಕುರಿತು ಚರ್ಚಿಸಿದರು. ಸಿಆರ್‍ಪಿ ಉಷಾ, ಅನೇಶ್ವರ, ಬಿಜಿವಿಸ್ ಕಾರ್ಯಕರ್ತ ಎನ್. ಮಹೇಶ್ ಇದ್ದರು.

ಮಕ್ಕಳಿಗೆ ತಮ್ಮ ಮನೆ, ಶಾಲೆ ಹಾಗೂ ಸುತ್ತಲಿನ ಪರಿಸರದಲ್ಲಿ ಆಡಿ ಕಲಿ- ನೋಡಿ ಕಲಿ, ಮಾಡಿ ಕಲಿ, ಹಾಡು ಆಡು, ಆಡು ಆಟವಾಡು, ಅಕ್ಷರದಾಟದಂತಹ ಚಟುವಟಿಕೆ ಯಾಧಾರಿತ ಕಲಿಕೆಯಿಂದ ಮಕ್ಕಳಲ್ಲಿ ಕೌಶಲ್ಯಾಭಿವೃದ್ಧಿ ಬೆಳೆಸಲು ಸಾಧ್ಯ. ಮಗು ತನ್ನ ಬಾಲ್ಯವನ್ನು ಸಂಭ್ರಮಿಸ ಬೇಕೆಂದರೆ ಕಲಿಕೆಯು ಹಬ್ಬವಾಗ ಬೇಕು. ಮಕ್ಕಳ ವಿಜ್ಞಾನ ಹಬ್ಬವು ಕ್ರಮೇಣ ಪ್ರತಿ ಶಾಲೆಯ ಮತ್ತು ಪ್ರತಿ ಊರಿನ ಹಬ್ಬವಾಗಿ ರೂಪುಗೊಂಡು ಸಮುದಾಯವು ಸರ್ಕಾರಿ ಶಾಲೆಗಳ ಪ್ರಗತಿಗೆ ತೊಡಗಬೇಕು ಎಂಬ ಉದ್ದೇಶ ಹೊಂದಲಾಗಿದೆ ಎಂಬ ಬಗ್ಗೆ ವಜ್ರಮುನಿ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಈ ಹಬ್ಬವನ್ನು ಹೇಗೆ ಸಂಘಟಿಸಬೇಕು ಎಂಬ ಕುರಿತು ಅಧಿಕಾರಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಮಾಲೋಚನೆ ನಡೆಸಲಾಯಿತು.