ಸೋಮವಾರಪೇಟೆ, ನ. 14: ಸೋಮವಾರಪೇಟೆಯಿಂದ ಕುಶಾಲನಗರ ಪ್ರದೇಶ ಬೇರ್ಪಡುತ್ತಿರುವ ಹಿನ್ನೆಲೆ ನೆರೆಯ ಸಕಲೇಶಪುರದ ನಾಲ್ಕು ಗ್ರಾಮ ಪಂಚಾಯಿತಿಗಳನ್ನು ಸೋಮವಾರಪೇಟೆ ತಾಲೂಕಿಗೆ ಸೇರ್ಪಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆ ಭಾಗದ ಪ್ರಮುಖರು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರಿಗೆ ಮನವಿ ಸಲ್ಲಿಸಿದರು.

ಶಾಸಕರ ಕಚೇರಿಯಲ್ಲಿ ಭೇಟಿ ಮಾಡಿದ ಬೆಳೆಗಾರರ ಸಂಘದ ಅಧ್ಯಕ್ಷ ಆರ್.ಪಿ. ಲಕ್ಷ್ಮಣ, ಮಲೆನಾಡು ಹೋರಾಟ ಸಮಿತಿ ಕಾರ್ಯದರ್ಶಿ ಬಸಪ್ಪ, ಪ್ರಮುಖರಾದ ಕೆ.ಬಿ. ಜಯಣ್ಣ ಸೇರಿದಂತೆ ಇತರರು, ಸೋಮವಾರಪೇಟೆಗೆ ಹೊಂದಿಕೊಂಡಂತೆ ಇರುವ ಚಂಗಡಹಳ್ಳಿ, ವನಗೂರು, ಉಚ್ಚಂಗಿ ಮತ್ತು ಹೊಸೂರು ಗ್ರಾ.ಪಂ.ಗಳನ್ನು ಸೋಮವಾರಪೇಟೆ ತಾಲೂಕಿಗೆ ಒಳಪಡಿಸಲು ಆಡಳಿತಾತ್ಮಕ ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು.

ಮೇಲ್ಕಂಡ ಗ್ರಾ.ಪಂ.ಗಳು ಭೌಗೋಳಿಕವಾಗಿ ಕೊಡಗಿನಂತೆಯೇ ಇದ್ದು, ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಕ್ಕೆ ಸನಿಹದಲ್ಲಿವೆ. ಇದರೊಂದಿಗೆ ವೈದ್ಯಕೀಯ, ಶೈಕ್ಷಣಿಕ, ವ್ಯಾವಹಾರಿಕ, ಸಾಂಪ್ರದಾಯಿಕವಾಗಿಯೂ ಕೊಡಗನ್ನೇ ಅವಲಂಬಿಸಿವೆ. ಈ ಗ್ರಾಮಗಳಿಗೆ ಸಕಲೇಶಪುರ ಮತ್ತು ಹಾಸನ ಕೇಂದ್ರಸ್ಥಾನಗಳು ದೂರವಾಗಿವೆ. ಇದರೊಂದಿಗೆ ಸಾರಿಗೆ ವ್ಯವಸ್ಥೆಯೂ ಇಲ್ಲವಾಗಿವೆ ಎಂದು ಶಾಸಕರ ಗಮನ ಸೆಳೆದರು. ಇವೆಲ್ಲವುಗಳಿಂದಾಗಿ ನಾಲ್ಕು ಗ್ರಾ.ಪಂ.ಗಳು ಅಭಿವೃದ್ಧಿಯಿಂದ ವಂಚಿತವಾಗಿದ್ದು, ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆ 4 ಗ್ರಾ.ಪಂ.ಗಳನ್ನು ಕೊಡಗಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ಗಮನ ಹರಿಸುವದಾಗಿ ಶಾಸಕ ರಂಜನ್ ಭರವಸೆ ನೀಡಿದರು.