ಮಡಿಕೇರಿ, ನ. 14: ವಿದ್ಯಾರ್ಥಿಗಳು ಬದುಕಿನಲ್ಲಿ ಯಾವದಾದರೊಂದು ಕ್ಷೇತ್ರದಲ್ಲಿ ಸಾಧನೆ ಮಾಡುವ ಛಲವನ್ನು ಹೊಂದಿರಬೇಕೆಂದು ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ಕೊಡಗು ಹಾಗೂ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಾಂಸ್ಕøತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎ.ಪಿ. ಧನಂಜಯ ಮಾತನಾಡಿ; ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಿಕೆ ಮುಖ್ಯವೆ ಹೊರತು ಸೋಲು ಗೆಲುವು ಎಂಬದಲ್ಲ. ವಿದ್ಯಾರ್ಥಿಗಳು ತಮ್ಮೊಳಗಿನ ಪ್ರತಿಭೆಯನ್ನು ಹೊರ ತರುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷೆ ಭವಾನಿ ಮಾತನಾಡಿ; ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸುವಲ್ಲಿ ಗಮನ ಹರಿಸಬೇಕು. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕೊಡಗು ರಾಜ್ಯಕ್ಕೆ ಮೊದಲ ಸ್ಥಾನ ಪಡೆಯುವಂತಾಗಲು ಎಲ್ಲಾ ವಿದ್ಯಾರ್ಥಿಗಳು ಈಗಿನಿಂದಲೇ ಶ್ರಮವಹಿಸಬೇಕೆಂದು ಕಿವಿಮಾತು ಹೇಳಿದರು. ನಗರ ಠಾಣಾಧಿಕಾರಿ ಸದಾಶಿವ ಅವರು ಮಾತನಾಡಿ, ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕೆಂದು ಸಲಹೆಯಿತ್ತರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ. ಕೆಂಚಪ್ಪ ಅವರು ಮಾತನಾಡಿ; ವಿದ್ಯಾರ್ಥಿಗಳು ಸೋಲು - ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದರು. ವೇದಿಕೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಆರ್. ವಿಜಯ, ತೀರ್ಪುಗಾರ ಪುಟ್ಟರಂಗ ಶೆಟ್ಟಿ ಇದ್ದರು. ವಿದ್ಯಾರ್ಥಿನಿ ವರಿಷ್ಮಾ ತಂಡ ಪ್ರಾರ್ಥಿಸಿ, ಉಪನ್ಯಾಸಕ ನಂದೀಶ್ ನಿರೂಪಿಸಿ, ವಂದಿಸಿದರು.
ಮಾತಿನ ಚಕಮಕಿ
ಜಿಲ್ಲಾ ಮಟ್ಟದ ಸಾಂಸ್ಕøತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಉಪನ್ಯಾಸಕರ ಸಂಘವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಸಂಘದ ಪ್ರಮುಖ ಪಿಲಿಫ್‍ವಾಸ್ ಹಾಗೂ ಇತರರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲ ವಿಜಯ ಹಾಗೂ ಪಿಲಿಫ್‍ವಾಸ್ ನಡುವೆ ಮಾತಿನ ಚಕಮಕಿ ನಡೆಯಿತು. ಇದು ಇಲಾಖೆಯ ಕಾರ್ಯಕ್ರಮವಾಗಿದೆ ವೈಯಕ್ತಿಕ ಕಾರ್ಯಕ್ರಮವಲ್ಲ ಎಂದು ವಿಜಯ ಸಮರ್ಥಿಸಿದರು. ನಿಮ್ಮ ವೈಯಕ್ತಿಕ ಕಲಹಗಳಿದ್ದರೆ ಅದನ್ನು ನಿಮ್ಮಲ್ಲಿಯೇ ಸರಿಪಡಿಸಿಕೊಳ್ಳಿ ಅದನ್ನು ಈ ಕಾರ್ಯಕ್ರಮಕ್ಕೆ ಎಳೆದು ತರಬೇಡಿ ಎಂದು ಎ.ಪಿ. ಧನಂಜಯ ಹೇಳಿದರು. ಬಳಿಕ ಪದಾಧಿಕಾರಿಗಳು ತೆರಳಿದರು.