ಮಡಿಕೇರಿ, ನ.14: ಸ್ವಾಮಿ ವಿವೇಕಾನಂದಯೂತ್ ಮೂವ್‍ಮೆಂಟ್, ಕೊಡಗು ಶಾಖೆ, ರೋಟರಿ ಮಿಸ್ಟಿ ಹಿಲ್ಸ್, ಮಡಿಕೇರಿ, ಭಾರತೀಯ ರೆಡ್‍ಕ್ರಾಸ್ ಸೊಸೈಟಿ, ಕೊಡಗು ಶಾಖೆ ಮತ್ತು ಫ್ರೀಡಂಟ್ರಸ್ಟ್, ಚೆನ್ನೈ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೃತಕ ಕಾಲಿನ ಅಗತ್ಯವುಳ್ಳ ವಿಶೇಷಚೇತನರಿಗಾಗಿ ನಗರದ ಶಿಶುಕಲ್ಯಾಣ ಸಂಸ್ಥೆಯಲ್ಲಿ (ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ) ತಾ.16ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕೃತಕ ಕಾಲು ಜೋಡಣಾ ಉಚಿತ ಶಿಬಿರವನ್ನು ಆಯೋಜಿಸಲಾಗಿದೆ.

ಈ ಶಿಬಿರದಲ್ಲಿ ಅಂದಾಜು 60 ಕೃತಕ ಕಾಲಿನ ಅಗತ್ಯವುಳ್ಳ ವಿಶೇಷಚೇತನರು ಮತ್ತು ಪೋಷಕರು ಭಾಗವಹಿಸಲಿದ್ದು, ತಾ.16 ರಂದು ಮೌಲ್ಯಮಾಪನ ಕೃತಕ ಕಾಲು ಅಳತೆ ಮಾಡಲಾಗುವದು; ಆನಂತರ 30 ದಿನಗಳ ಬಳಿಕ ಅಳತೆಗೆ ಅನುಗುಣವಾಗಿ ಕೃತಕ ಕಾಲುಗಳನ್ನು ತಯಾರಿಸಿ, ಡಿಸೆಂಬರ್ ತಿಂಗಳಿನಲ್ಲಿ ಕೃತಕ ಕಾಲುಗಳನ್ನು ಜೋಡಿಸಿ ವಿತರಿಸಲಾಗುವದು.

ಈ ಶಿಬಿರಕ್ಕೆ ಕೃತಕ ಕಾಲಿನ ಅಗತ್ಯವುಳ್ಳ ವಿಶೇಷಚೇತನರುಗಳು ಆಗಮಿಸಿ, ಕೃತಕ ಕಾಲಿನ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಈ ಶಿಬಿರವನ್ನು ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಜಗದೀಶ್ ಎಂ.ಆರ್. ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ ರೆಡ್‍ಕ್ರಾಸ್ ಜಿಲ್ಲಾ ಸಭಾಪತಿ ಬಿ.ಕೆ. ರವೀಂದ್ರರೈ, ಜಿಲ್ಲಾ ವಿಶೇಷಚೇತನರ ಕಲ್ಯಾಣಾಧಿಕಾರಿ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಧಿಕಾರಿ ಆರ್. ಸಂಪತ್‍ಕುಮಾರ್, ಚೆನ್ನೈನ ಫ್ರೀಡಂಟ್ರಸ್ಟ್‍ನ ಫೀಲ್ಡ್ ಕೋ ಆರ್ಡಿನೇಟರ್ ರಿಷಿಕುಮಾರ್ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿ.ಸಿ.ಎಸ್.ಟಿ. ಯೋಜನೆ, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಇದರ ಯೋಜನಾ ನಿರ್ದೇಶಕರಾದ ಜಯಕುಮಾರ್ ವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.