ಸುಂಟಿಕೊಪ್ಪ, ನ. 15: ಮನುಷ್ಯ ಸಂಕುಲ, ಪ್ರಾಣಿ ಸಂತಾನ ಮತ್ತು ಸಕಲ ಚರಾಚರ ಜೀವಿಗಳನ್ನು ತನ್ನ ಒಡಲಲ್ಲಿ ಹೊತ್ತು ಪೋಷಿಸುತ್ತಿರುವ ಮಹಾನ್ ತಾಯಿ ಎಂದರೆ ಅದು ನಾವಿರುವ ಪರಿಸರವೇ ಎಂದು ಸರಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಪಿ.ಎಸ್. ಜಾನ್ ಹೇಳಿದರು.

ನಿಸರ್ಗ ಇಕೋ ಕ್ಲಬ್ ವತಿಯಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಧ್ಯೇಯ ವಾಕ್ಯದೊಂದಿಗೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪರಿಸರ ಸ್ವಚ್ಛತಾ ಶ್ರಮದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ಮನುಷ್ಯ ಭೂಮಂಡಲದಲ್ಲಿ ತಾನು ಚಿರಂಜೀವಿ ಎಂದು ತಿಳಿದು ಪಕೃತಿಯ ಮೇಲೆ ನಿರಂತರ ದಾಳಿ ಮಾಡುತ್ತಾ ತನಗೆ ಆಶ್ರಯಕೊಟ್ಟ ನಿಸರ್ಗ ಮಾತೆಯನ್ನು ಮಲಿನಗೊಳಿಸಿ ಇಡೀ ಜೀವ ಸಂಕುಲಕ್ಕೆ ಸಂಚಕಾರವನ್ನು ತಂದುಕೊಂಡಿದ್ದಾನೆ. ನಮ್ಮ ಮುಂದಿನ ಪೀಳಿಗೆಗೆ ಪರಂಪರೆ ಉಳಿಸಿ, ಪೋಷಿಸಿ, ಸಂರಕ್ಷಿಸುವದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ರಾಜ್ಯಶಾಸ್ತ್ರ ಉಪನ್ಯಾಸಕ ಪಿ. ಸೋಮಚಂದ್ರ ಮಾತನಾಡಿ, ಪರಿಸರ ಸಂರಕ್ಷಣೆ ಮಾಡುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳಿಗೆ ಕೊಡುವಷ್ಟೇ ಆಸಕ್ತಿಯನ್ನು ಪರಿಸರ ಸಂಬಂಧಿ ಕಾರ್ಯಕ್ರಮಗಳಿಗೆ ನೀಡಬೇಕು. ನಾವು ಗಿಡವನ್ನು ನೆಟ್ಟರೆ ಸಾಲದು, ಅದನ್ನು ಪೋಷಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸಬೇಕು. ನೆಲ, ಜಲ, ವಾಯು, ಇವುಗಳನ್ನು ಆರಾಧನಾ ಭಾವನೆಯಿಂದ ನೋಡಬೇಕು ಎಂದರು.

ಈ ಸಂದರ್ಭ ಉಪನ್ಯಾಸಕರುಗಳಾದ ಪದ್ಮಾವತಿ, ಎಸ್.ಹೆಚ್. ಈಶ ಬೆಳ್ಯಪ್ಪ ಅವರುಗಳು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.