ವೀರಾಜಪೇಟೆ, ನ. 14: ಕುಡಿತದ ದಾಸನಾಗಿದ್ದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರಮೇರಿ ಗ್ರಾಮದಲ್ಲಿ ನಡೆದಿದೆ.
ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಮೇರಿ ಗ್ರಾಮದ ನಿವಾಸಿ ಪಣಿಎರವರ ಚಂದ್ರ (28) ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮೃತ ವ್ಯಕ್ತಿಯು ಕೂಲಿ ಕಾರ್ಮಿಕನಾಗಿದ್ದು, ಅರಮೇರಿಯ ಕೋಟೇರ ಕರುಂಬಯ್ಯ ಅವರ ತೋಟದ ಲೈನ್ ಮನೆಯಲ್ಲಿ ತನ್ನ ಕುಟುಂಬದೊಂದಿಗೆ ವಾಸವಿದ್ದ. ಈತನು ಮದ್ಯ ವ್ಯಸನಿಯಾಗಿದ್ದು, ಮನೆಯಲ್ಲಿ ನಿತ್ಯವು ಕಲಹಗಳು ನಡೆಯುತ್ತಿದ್ದವು.
ತಾ.13ರಂದು ಪತ್ನಿ ಕಾವೇರಿ ಮಕ್ಕಳೊಂದಿಗೆ ಮನೆಯಲ್ಲಿದ್ದ ವೇಳೆಯಲ್ಲಿ ಕಲಹಗಳಾಗಬಹುದು ಎಂದು ಪೂರ್ವಯೋಜಿತವಾಗಿ ಬೇರೊಬ್ಬರ ಮನೆಗೆ ತೆರಳಿದ್ದಳು. ಸಂಜೆ ಎಂದಿನಂತೆ ಕುಡಿದು ಮನೆಗೆ ಅಗಮಿಸಿದ ಚಂದ್ರ ಮನೆಯಲ್ಲಿ ಯಾರು ಇಲ್ಲದ ವೇಳೆ ಪತ್ನಿಯ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಂದು ಮುಂಜಾನೆ ಮನೆಗೆ ಅಗಮಿಸಿದ ಪತ್ನಿ ಕಾವೇರಿಗೆ ಪತಿ ನೇಣಿಗೆ ಶರಣಾಗಿರುವದು ತಿಳಿದುಬಂದಿದೆ. ಕಾವೇರಿ ನೀಡಿದ ದೂರಿನ ಮೇರೆಗೆ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.