ಮಡಿಕೇರಿ, ನ. 14: ಮಡಿಕೇರಿಯ ಅಶ್ವಿನಿ ಆಸ್ಪತ್ರೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರೋಟರಿ, ಕೂರ್ಗ್ ಫೌಂಡೇಶನ್, ಲಯನ್ಸ್, ರೋಟರಿ ಮಿಸ್ಟಿಹಿಲ್ಸ್ ಮುಂತಾದ ಸಂಸ್ಥೆಗಳ ಸಹಯೋಗದಲ್ಲಿ 31ನೇ ವರ್ಷದ ಉಚಿತ ನೇತ್ರ ಪರೀಕ್ಷೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವು ತಾ. 13 ರಿಂದ ಪ್ರಾರಂಭಗೊಂಡಿದೆ. ಈ ಶಿಬಿರವು ತಾ. 18ರ ವರೆಗೆ ನಡೆಯಲಿದೆ.

ಈ ಉಚಿತ ಶಿಬಿರದಲ್ಲಿ ಈಗಾಗಲೇ 200ಕ್ಕೂ ಅಧಿಕ ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ನೇತ್ರ ಸಮಸ್ಯೆ ಹೊಂದಿರುವ ಮಂದಿ ಇಲ್ಲಿ ಭಾಗವಹಿಸಿದ್ದು, ನೇತ್ರ ರೋಗಿಗಳಿಗೆ ರಕ್ತದೊತ್ತಡ, ಮಧುಮೇಹ ಇತ್ಯಾದಿ ಕಾಯಿಲೆಗಳ ತಪಾಸಣೆ ನಡೆಸಿ, ಆರೋಗ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಲು ಕ್ರಮವಹಿಸಲಾಗಿದೆ.

ಆ ಮುಖಾಂತರ ಅವಶ್ಯಕತೆ ಇರುವವರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ, ಲೆನ್ಸ್ ಅಳವಡಿಕೆ (ಐಓಎಲ್) ಹಾಗೂ ಅಂಧತ್ವ ನಿವಾರಣಾ ಸಲಹೆಯೊಂದಿಗೆ ಉಚಿತ ಕನ್ನಡಕ ಇತ್ಯಾದಿಯನ್ನು ಈ ಶಿಬಿರದಲ್ಲಿ ಕಲ್ಪಿಸಲಾಗುತ್ತಿದೆ.

ಈ ಶಿಬಿರದಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶದ ವೃದ್ಧರು, ವಿವಿಧ ಹಾಡಿಗಳ ಮಂದಿ ಹಾಗೂ ಕೂಲಿ ಕಾರ್ಮಿಕ ಕುಟುಂಬ ಸದಸ್ಯರು ಪಾಲ್ಗೊಂಡಿದ್ದಾರೆ ಎಂದು ಆಸ್ಪತ್ರೆಯ ಆಡಳಿತ ವರ್ಗದ ಪ್ರಮುಖರಾದ ಗೋಖಲೆ ಹಾಗೂ ಶೆಣೈ ಮಾಹಿತಿ ನೀಡಿದ್ದಾರೆ.

ಶಿಬಿರದಲ್ಲಿ ಭಾಗವಹಿಸಿರುವ ರೋಗಿ ಮತ್ತು ಸಹಾಯಕರಿಗೆ ಆಸ್ಪತ್ರೆಯಲ್ಲಿ ಊಟ ಇತ್ಯಾದಿ ಕನಿಷ್ಟ ಸೌಲಭ್ಯಗಳನ್ನು ಒದಗಿಸಿದ್ದು, ಸಾಂಕ್ರಮಿಕ ರೋಗಗಳು ಹರಡದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ‘ಶಕ್ತಿ’ಗೆ ತಿಳಿಸಿದ್ದಾರೆ.

ತಾ. 15 ರಂದು (ಇಂದು) ಮಧ್ಯಾಹ್ನ ತನಕ ಮಾತ್ರ ಒಳರೋಗಿಗಳ ನೋಂದಾಣಿಗೆ ಅವಕಾಶ ಕಲ್ಪಿಸಲಾಗಿತ್ತು ಎಂದು ನೆನಪಿಸಿರುವ ಪ್ರಮುಖರು, ಖ್ಯಾತ ತಜ್ಞ ವೈದ್ಯರುಗಳಿಂದ ಶಸ್ತ್ರ ಚಿಕಿತ್ಸೆ ನಡೆಯುವದಾಗಿ ವಿವರಿಸಿದ್ದಾರೆ.