ಕುಶಾಲನಗರ, ನ. 15 : ಕುಶಾಲನಗರ ಸಮೀಪ ಅತ್ತೂರು ಜ್ಞಾನಗಂಗಾ ಶಾಲೆಯಲ್ಲಿ 3ನೇ ವರ್ಷದ ಅಂತರ್ ಜಿಲ್ಲಾ ಆಹ್ವಾನಿತ ಜ್ಞಾನಗಂಗಾ ಕಪ್ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. 3 ದಿನಗಳ ಕಾಲ ನಡೆಯಲಿರುವ ಸ್ಪರ್ಧೆಗಳಿಗೆ ಕುಶಾಲನಗರ ಡಿವೈಎಸ್ಪಿ ಪಿ.ಕೆ.ಮುರಳೀಧರ್ ಚಾಲನೆ ನೀಡಿದರು. ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಪ್ರೌಢಶಾಲಾ ವಿದ್ಯಾರ್ಥಿಗಳ ಹಲವು ತಂಡಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು ವಾಲಿಬಾಲ್, ಕಬಡ್ಡಿ, ಶಟಲ್ ಬ್ಯಾಡ್ಮಿಂಟನ್ ಮತ್ತು ವಿಜ್ಞಾನ ಕರಕುಶಲ ವಸ್ತುಗಳ ಪ್ರದರ್ಶನ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ವಾಲಿಬಾಲ್ 8 ತಂಡಗಳು, ಕಬಡ್ಡಿಯಲ್ಲಿ 9 ತಂಡಗಳು, ಶಟಲ್ ಬ್ಯಾಡ್ಮಿಂಟನ್ 13 ಬಾಲಕರ ತಂಡ, 8 ಬಾಲಕಿಯರ ತಂಡ ಹಾಗೂ ಭರತನಾಟ್ಯದಲ್ಲಿ 12 ತಂಡಗಳು ಪಾಲ್ಗೊಂಡಿವೆ.
ಈ ಸಂದರ್ಭ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸ್ಪರ್ಧೆಗಳಿಗೆ ಚಾಲನೆ ನೀಡಿದ ಡಿವೈಎಸ್ಪಿ ಮುರಳೀಧರ್ ಮಾತನಾಡಿ, ಜೀವನದಲ್ಲಿ ಶಿಸ್ತು ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ದೈಹಿಕ ಶಿಕ್ಷಣ ಶಿಕ್ಷಕರಾದ ಡಾ.ಸದಾಶಿವಯ್ಯ ಎಸ್.ಪಲ್ಲೇದ್ ಮಾತನಾಡಿ, ಪಠ್ಯ, ಪಠ್ಯೇತರ ಚಟುವಟಿಕೆ ನಡುವೆ ಅಂತರ ಇರಬಾರದು. ಶಿಕ್ಷಣದಲ್ಲಿ ಎರಡೂ ಚಟುವಟಿಕೆಗಳು ಸಮನಾಂತರವಾಗಿ ನಡೆದಲ್ಲಿ ಪರಿಣಾಮಕಾರಿ ಶಿಕ್ಷಣ ಪಡೆಯಲು ಸಾಧ್ಯ ಎಂದರು.
ಜ್ಞಾನಗಂಗಾ ವಸತಿ ಶಾಲೆಯ ಖಜಾಂಚಿ ಪುಲಿಯಂಡ ರಾಮ್ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷ ಸುಧೀರ್, ಟ್ರಸ್ಟಿ ಮನು ಅಯ್ಯಪ್ಪ, ಜಿ.ಪಂ. ಸದಸ್ಯ ಶ್ರೀನಿವಾಸ್, ಪ್ರಾಂಶುಪಾಲ ಜೀಜೀ ಜೋಸ್ ಮತ್ತಿತರರು ಇದ್ದರು.