ಮಡಿಕೇರಿ, ನ. 15: ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಮನೆÀಗಳನ್ನು ಕಳೆದುಕೊಂಡಿರುವ ಸಂತ್ರಸ್ತರಿಗೆ ಶೀಘ್ರ ಮನೆಗಳನ್ನು ಹಸ್ತಾಂತರಿಸಬೇಕು ಮತ್ತು ಹಾನಿಗೀಡಾಗಿರುವ ಗದ್ದೆ, ತೋಟಗಳನ್ನು ಸರ್ವೆ ಮಾಡಿ ನಷ್ಟ ಅನುಭವಿಸಿರುವವರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಕರ್ನಾಟಕ ರಾಜ್ಯ ವಿಧಾನ ಮಂಡಲದ ಕಾಗದ ಪತ್ರಗಳ ಪರಿಶೀಲನಾ ಸಮಿತಿ ಅಧ್ಯಕ್ಷ ಸಾ.ರಾ. ಮಹೇಶ್ ಅವರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಮನವಿ ಸಲ್ಲಿಸಿದ್ದಾರೆ.
2018ರಲ್ಲಿ ಸಂಭವಿಸಿದ ವಿಕೋಪದಲ್ಲಿ 54 ಗ್ರಾಮಗಳ 840ಕ್ಕೂ ಅಧಿಕ ಮಂದಿ ಮನೆಗಳನ್ನು ಕಳೆದು ಕೊಂಡಿದ್ದಾರೆ. 2019ರಲ್ಲಿ ಸಂಭವಿಸಿದ ಮಳೆ ಹಾನಿ ಸಂದರ್ಭ 37 ಗ್ರಾಮಗಳ ಸುಮಾರು 400ಕ್ಕೂ ಅಧಿಕ ಕುಟುಂಬಗಳು ಮನೆಗಳನ್ನು ಕಳೆದುಕೊಂಡಿವೆ. ಆದರೆ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿ ಕೊಡುವ ಯೋಜನೆಯಲ್ಲಿ ನಿಗದಿತ ಗುರಿ ತಲಪಿಲ್ಲ. ಮನೆಗಳ ನಿರ್ಮಾಣ ಕಾರ್ಯದಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದ್ದು, ಗುಣಮಟ್ಟದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಅರ್ಹರಿಗೆ ಹಸ್ತಾಂತರಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಮಂಜುನಾಥ್ ಕುಮಾರ್ ಮನವಿ ಮಾಡಿದರು.
ಬೆಳೆಗಾರರು ಹಾಗೂ ರೈತರು ಕೂಡ ಸಂಕಷ್ಟವನ್ನು ಅನುಭವಿಸುತ್ತಿದ್ದು, ಕಳೆದುಕೊಂಡ ಕೃಷಿ ಭೂಮಿ ಮತ್ತು ತೋಟಕ್ಕೆ ಇಲ್ಲಿಯವರೆಗೆ ಸೂಕ್ತ ಪರಿಹಾರ ದೊರೆತ್ತಿಲ್ಲ. ಭೂಪ್ರದೇಶದೊಂದಿಗೆ ತಾವು ಬೆಳೆದಿದ್ದ ಮರಗಳು ಕೂಡ ನೀರುಪಾಲಾಗಿದ್ದು, ಭೂ ಸರ್ವೆಯೊಂದಿಗೆ ನಷ್ಟದ ಪ್ರಮಾಣವನ್ನು ಪತ್ತೆಹಚ್ಚಿ ಪರಿಹಾರ ವಿತರಿಸಬೇಕು ಮತ್ತು ಮಳೆಯಿಂದ ಬಿದ್ದ ಮರಗಳನ್ನು ಮಾರಾಟ ಮಾಡಲು ಆಯಾ ತೋಟದ ಮಾಲೀಕರಿಗೆ ಅವಕಾಶ ನೀಡಬೇಕು. ಈ ನಿಟ್ಟಿನಲ್ಲೂ ಸರ್ಕಾರದ ಗಮನ ಸೆಳೆಯಬೇಕೆಂದು ಸಾ.ರಾ. ಮಹೇಶ್ ಅವರಲ್ಲಿ ಮಂಜುನಾಥ್ ಕುಮಾರ್ ಮನವಿ ಮಾಡಿದರು.