ಗೋಣಿಕೊಪ್ಪ ವರದಿ, ನ. 13 ; ಅಣ್ಣನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಯತ್ನ ಆರೋಪದಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊನ್ನಂಪೇಟೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕಾನೂರು ಗ್ರಾಮದ ಚೊಟ್ಟೆಕ್‍ಮಾಡ ಕರುಂಬಯ್ಯ (ಅಪ್ಪುಕುಟ್ಟಿ) ಬಂಧಿತ ಆರೋಪಿ. ಘಟನೆ ನಡೆದು 2 ತಿಂಗಳ ನಂತರ ಆರೋಪಿ ಸೆರೆಯಾಗಿದ್ದಾನೆ.

ಕಳೆದ ಸೆ. 10 ರಂದು ಕರುಂಬಯ್ಯ ತನ್ನ ಅಣ್ಣ ಪ್ರಕಾಶ್ ಚಿಟ್ಯಪ್ಪಗೆ ಹಲ್ಲೆ ನಡೆಸಿದ್ದ. ಇದರಿಂದ ತಲೆಗೆ ಗಂಭೀರ ಪೆಟ್ಟಾಗಿ ಜೀವನ್ಮರಣ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಕಾಶ್ ಕುಟುಂಬಸ್ಥರು ಕರುಂಬಯ್ಯ ವಿರುದ್ಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದರಂತೆ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪಣ್ಣೇಕರ್, ಡಿವೈಎಸ್ಪಿ ಜಯಕುಮಾರ್, ಸಿಐ ರಾಮರೆಡ್ಡಿ ಮಾರ್ಗದರ್ಶನದಲ್ಲಿ ಪೊನ್ನಂಪೇಟೆ ಉಪನಿರೀಕ್ಷಕ ಕುಮಾರ್, ಸಿಬ್ಬಂದಿ ಮನು, ಹರೀಶ್, ಲೋಕೇಶ್, ಬಸವರಾಜು ಕಾರ್ಯಾಚರಣೆಯಲ್ಲಿದ್ದರು.