ಸಿದ್ದಾಪುರ, ನ. 12: ಮೀಸಲು ಅರಣ್ಯ ಪ್ರದೇಶದೊಳಗೆ ಅಕ್ರಮವಾಗಿ ಜಿಂಕೆಯನ್ನು ಬೇಟೆಯಾಡಿ ಮಾಂಸ ಮಾಡಿದ ಘಟನೆ ನಡೆದಿದೆ. ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಗೊಳಪಡುವ ದುಬಾರೆ ಮೀಸಲು ಅರಣ್ಯದ ಆನೆಕೆರೆ ಎಂಬಲ್ಲಿ ಮಧ್ಯರಾತ್ರಿ ಜಿಂಕೆಯೊಂದನ್ನು ಸಾಯಿಸಿ ಮಾಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.ಮಾಲ್ದಾರೆ ಹಣ್ಣಿನ ತೋಟದ ನಿವಾಸಿಗಳಾದ ಸಿದ್ಧ (40), ರವಿ (28), ಪ್ರಕಾಶ (26). ಅಣ್ಣಯ್ಯ (29) ಎಂಬವರುಗಳು ಬಂಧಿತ ಆರೋಪಿಗಳಾಗಿದ್ದಾರೆ. ಅರಣ್ಯದಲ್ಲಿ ಬೇಟೆಯಾಡಿ ಜಿಂಕೆಯನ್ನು ಮಾಂಸ ಮಾಡಿ ನಂತರ ಮಾಂಸವನ್ನು ಮನೆಯಲ್ಲಿ ಇಟ್ಟಿದ್ದರು ಎನ್ನಲಾಗಿದೆ. ಬೇಟೆಯಾಡಿದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮನೆಯಿಂದ ಆರೋಪಿಗಳನ್ನು ಬಂಧಿಸಿ ಮಾಂಸವನ್ನು ಹಾಗೂ ಜಿಂಕೆಯ ಕೊಂಬುಗಳನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಮಡಿಕೇರಿ ವಿಭಾಗದ ಡಿಸಿಎಫ್ ಪ್ರಭಾಕರನ್ ಅವರ ಮಾರ್ಗದರ್ಶನದಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಗೂಳಿ, ಸಿಬ್ಬಂದಿಗಳಾದ ಮಣಿಕಂಠ ಹಾಗೂ ಆರ್‍ಆರ್‍ಟಿ ತಂಡ ಪಾಲ್ಗೊಂಡಿತ್ತು. ಆರೋಪಿ ಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. -ವಾಸು