ವೀರಾಜಪೇಟೆ, ನ. 13: ಬದುಕಿನ ನೈಜತೆಯನ್ನು ಅರಿಯುವದು ಶಿಕ್ಷಣದ ಮೂಲ ಉದ್ದೇಶ. ಬದುಕಿನಲ್ಲಿ ಆಯ್ಕೆಗೆ ಪ್ರಮುಖ ಪಾತ್ರವಿದೆಯೆಂದೂ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕೆಂದು ಶಕ್ತಿ ದಿನಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ಅಭಿಪ್ರಾಯಪಟ್ಟರು.
ವೀರಾಜಪೇಟೆಯ ಸರ್ವೋದಯ ಕಾಲೇಜಿನ ಶಿಕ್ಷಕರ ಶಿಕ್ಷಣ ತರಬೇತಿ ಸಂಸ್ಥೆಯ 2019-20ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಯನ್ನು ನೆರವೇರಿಸಿದ ಬಳಿಕ ಅವರು ಮಾತನಾಡಿ, ನಾವು ಸ್ನೇಹಿತರ, ಶಿಕ್ಷಣದ, ಬದುಕಿನ ಬಗ್ಗೆ ಆಯ್ಕೆಯನ್ನು ಮಾಡುವಾಗ ಅವುಗಳ ಪರಿಣಾಮದ ಕುರಿತು ಯೋಚಿಸಬೇಕಾಗಿದೆ. ಮುಂದೆ ಸಾಗಬೇಕಾದಂತಹ ಗುರಿಗಳಿಗೆ ಇವು ಪೂರಕವಾಗಿದೆಯೇ ಎಂಬ ಬಗ್ಗೆ ಅವಲೋಕನ ನಡೆಸಬೇಕು ಎಂದರು.
ಬದುಕನ್ನು ಪಾರದರ್ಶಕವಾಗಿ, ಪರಿಶುದ್ಧವಾಗಿಸಲು ಗರಿಷ್ಠ ಪ್ರಯತ್ನಿಸಬೇಕು. ಬದುಕು ಎಂಬದು ಕೇವಲ ಪ್ರಶ್ನೆಗಳಿಗೆ ಸೀಮಿತವಲ್ಲ. ಬದುಕಿನಲ್ಲಿ ಉತ್ತರಕ್ಕೂ ಪಾತ್ರವಿದೆ. ಶಿಕ್ಷಣದ ಉದ್ದೇಶ ಕೇವಲ ಪದವಿ ಗಳಿಸುವದಲ್ಲ. ಶಿಕ್ಷಣ ಎಂಬದು ಬದುಕಿನೊಂದಿಗೆ, ಸಮಾಜದೊಂದಿಗೆ ನಮ್ಮ ನಿಲುವು ಏನು ಎಂಬದರ ನಿರ್ಣಯವಾಗಿದೆ. ಮೂಲ ಶಿಕ್ಷಣವನ್ನು ಗಂಭೀರವಾಗಿಯೇ ಪರಿಗಣಿಸಬೇಕು. ಇಂದು ಯುವ ಜನತೆಯ ಬದುಕು ಎಂಬದು ನೈತಿಕತೆಯ ಸವಾಲುಗಳಿಂದ ಕೂಡಿದುದು ಆಗಿದೆ. ಶಿಕ್ಷಣದ ಮೂಲಕ ಈ ಸಾವಲುಗಳನ್ನು ಎದುರಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದ ಧರ್ಮ ಗುರುಗಳು, ವಿದ್ಯಾ ಸಂಸ್ಥೆಗಳ ಮುಖ್ಯಸ್ಥರು ಆದ ರೆ.ಫಾ. ಮದಲೈ ಮುತ್ತು ಮಾತನಾಡಿ, ಶಿಕ್ಷಕರು ಇಡೀ ಸಮಾಜವನ್ನು ಮುನ್ನಡೆಸುತ್ತಾರೆ. ಆದುದರಿಂದ ಶಿಕ್ಷಕರ ಬದುಕು ಸಂಸ್ಕಾರಯುತ, ಆದರ್ಶಮಯ, ಮಾದರಿಯುಕ್ತವಾಗಿರಬೇಕು. ಆದರ್ಶವನ್ನು ಉಪದೇಶಿಸಲು ಬದುಕಿನಲ್ಲಿ ಸ್ವಯಂ ಆದರ್ಶ ಪಾಲಿಸುವವನಿಗೆ ಮಾತ್ರ ಅರ್ಹತೆ ಯಿರುತ್ತದೆ. ವೃತ್ತಿ ತರಬೇತಿಯನ್ನು ಬದುಕಿನ ತರಬೇತಿ ಎಂದು ಪರಿಗಣಿಸಬೇಕು. ವೃತ್ತಿಯನ್ನು ವೃತ್ತಿಪರತೆಯೊಂದಿಗೆ ಗೌರವಿಸಬೇಕು. ತನ್ಮೂಲಕ ಗರಿಷ್ಠ ಬದ್ಧತೆಯನ್ನು ಪಾಲಿಸಬೇಕು. ಶಿಕ್ಷಕರು ವೃತ್ತಿಯಲ್ಲಿ ಪರಿಣತಿ ಹೊಂದುವದರ ಮೂಲಕ ಜ್ಞಾನ ಸಂಪಾದನೆಯನ್ನು ಮಾಡಬೇಕು ಎಂದು ಹೇಳಿದರು.
ರೆ.ಫಾ. ಮದಲೈಮುತ್ತು ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಡಾ. ಎಂ. ವಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ವೋದಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷೆ ಸಿ.ಜಿ. ಸೂರ್ಯಕುಮಾರಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ್ದರು. ಎಂ.ಎನ್. ದೀಪಿಕಾ ಸ್ವಾಗತಿಸಿ, ಹೆಚ್.ಪಿ. ಗಿರೀಶ್ ವರದಿ ವಾಚಿಸಿ, ಅಂಜಲಿ ವಂದಿಸಿ ದರು. ಸಮಾರಂಭದ ನಂತರ ವಿದ್ಯಾ ರ್ಥಿಗಳಿಂದ ಸಾಂಸ್ಕøತಿಕ ಕಾರ್ಯ ಕ್ರಮಗಳನ್ನು ಏರ್ಪಡಿಸಲಾಗಿತ್ತು.